‘ತಾಯಂದಿರ ದಿನ’ (Mother’s Day) : ಹಿನ್ನಲೆ ಮತ್ತು ಮಹತ್ವ
Mother’s Day (ತಾಯಂದಿರ ದಿನ) ಎಂದರೆ ತಾಯಿಯ ಪ್ರೀತಿ, ತ್ಯಾಗ, ಕಾಳಜಿ ಮತ್ತು ಕುಟುಂಬದ ಮೇಲಿನ ಅವಳ ಅಮೂಲ್ಯ ಕೊಡುಗೆಗಳನ್ನು ಸ್ಮರಿಸಿ ಗೌರವಿಸುವ ವಿಶೇಷ ದಿನ. ಪ್ರತಿ ವರ್ಷ ಮೇ ತಿಂಗಳ ಎರಡನೇ ಭಾನುವಾರ ಈ ದಿನವನ್ನು ಆಚರಿಸಲಾಗುತ್ತದೆ. 2026ರಲ್ಲಿ ತಾಯಂದಿರ ದಿನವನ್ನು ಮೇ 10ರಂದು ಆಚರಿಸಲಾಗುತ್ತದೆ.
ಈ ದಿನ ಮಕ್ಕಳು ತಮ್ಮ ತಾಯಿಗೆ ಶುಭಾಶಯಗಳನ್ನು ತಿಳಿಸಿ, ಉಡುಗೊರೆಗಳನ್ನು ನೀಡಿ, ಕೃತಜ್ಞತೆ ವ್ಯಕ್ತಪಡಿಸುತ್ತಾರೆ. ಶಾಲೆಗಳು, ಸಂಸ್ಥೆಗಳು ಹಾಗೂ ಸಮಾಜ ಸಂಘಟನೆಗಳು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ತಾಯಿಯ ಮಹತ್ವವನ್ನು ಸಾರುತ್ತವೆ. “ತಾಯಿ” ಎಂಬ ಪದವೇ ಪ್ರೀತಿ, ಸಹನೆ ಮತ್ತು ತ್ಯಾಗದ ಪ್ರತೀಕವಾಗಿದ್ದು, ತಾಯಂದಿರ ದಿನವು ಆ ಅನನ್ಯ ಬಾಂಧವ್ಯವನ್ನು ಮತ್ತಷ್ಟು ಸ್ಮರಣೀಯವಾಗಿಸುತ್ತದೆ.
2026ರ ತಾಯಂದಿರ ದಿನದ ಥೀಮ್ :
2026ರ ತಾಯಂದಿರ ದಿನದ ಥೀಮ್ “The Great Unburdening” ಆಗಿದೆ. ಈ ಥೀಮ್ ತಾಯಿಯ ಮೇಲಿನ ಒತ್ತಡ ಮತ್ತು ಜವಾಬ್ದಾರಿಗಳನ್ನು ಕಡಿಮೆ ಮಾಡುವ ಸಂದೇಶವನ್ನು ನೀಡುತ್ತದೆ. ಮನೆಯ ಕೆಲಸಗಳಲ್ಲಿ ಸಹಭಾಗಿತ್ವ, ಭಾವನಾತ್ಮಕ ಬೆಂಬಲ ಮತ್ತು ತಾಯಿಯ ಶ್ರಮಕ್ಕೆ ಗೌರವ ನೀಡುವ ಅಗತ್ಯವನ್ನು ಇದು ಒತ್ತಿಹೇಳುತ್ತದೆ. ಉದ್ಯೋಗ ಹಾಗೂ ಮನೆ ಎರಡನ್ನೂ ಸಮತೋಲನಗೊಳಿಸುವ ಅನೇಕ ಮಹಿಳೆಯರ ಜೀವನದಲ್ಲಿ ಈ ಸಂದೇಶ ಅತ್ಯಂತ ಪ್ರಸ್ತುತವಾಗಿದೆ.
ಇದನ್ನೂ ಓದಿ : ಮೇ ತಿಂಗಳ ಪ್ರಮುಖ ದಿನಗಳು / Important days in May
ತಾಯಂದಿರ ದಿನದ ಹಿನ್ನಲೆ :
ತಾಯಂದಿರ ದಿನದ ಇತಿಹಾಸವು ಪ್ರಾಚೀನ ಗ್ರೀಕ್ ಮತ್ತು ರೋಮನ್ ಸಂಸ್ಕೃತಿಗಳವರೆಗೆ ಹೋಗುತ್ತದೆ. ಗ್ರೀಕ್ ಸಂಸ್ಕೃತಿಯಲ್ಲಿ ರಿಯಾ ಮತ್ತು ರೋಮನ್ ಸಂಸ್ಕೃತಿಯಲ್ಲಿ ಸೈಬೆಲ್ ದೇವಿಯರನ್ನು ತಾಯಿಯ ಪ್ರತಿರೂಪವಾಗಿ ಪೂಜಿಸಲಾಗುತ್ತಿತ್ತು. ನಂತರ ಬ್ರಿಟನ್‌ನಲ್ಲಿ “ಮದರಿಂಗ್ ಸಂಡೇ” (Mothering Sunday) ಆಚರಣೆ ಪ್ರಾರಂಭವಾಯಿತು.
1870ರಲ್ಲಿ ಜೂಲಿಯಾ ವಾರ್ಡ್ ಹೋ (Julia Ward Howe) ಅವರು ಶಾಂತಿಯ ಸಂದೇಶಕ್ಕಾಗಿ ತಾಯಂದಿರ ದಿನವನ್ನು ಪ್ರಸ್ತಾಪಿಸಿದರು. ಬಳಿಕ ಅನ್ನಾ ಜಾರ್ವಿಸ್ (Anna Jarvis) ತಮ್ಮ ತಾಯಿಯ ಸ್ಮರಣಾರ್ಥ ಈ ದಿನವನ್ನು ಅಧಿಕೃತವಾಗಿ ಘೋಷಿಸಲು ಹೋರಾಡಿದರು. 1908ರಲ್ಲಿ ಮೊದಲ ಬಾರಿಗೆ ಈ ಆಚರಣೆ ನಡೆದಿದ್ದು, ಇವರ ಸತತ ಪ್ರಯತ್ನದ ಫಲವಾಗಿ, 1914ರಲ್ಲಿ ಅಮೆರಿಕಾ ಅಧ್ಯಕ್ಷ ವುಡ್‌ರೋ ವಿಲ್ಸನ್ (Woodrow Wilson) ಪ್ರತಿ ವರ್ಷದ ಮೇ ತಿಂಗಳ ಎರಡನೇ ಭಾನುವಾರವನ್ನು ತಾಯಂದಿರ ದಿನವಾಗಿ ಘೋಷಿಸಿದರು. ಅದರ ನಂತರ ಈ ಆಚರಣೆ ಜಗತ್ತಿನ ಅನೇಕ ದೇಶಗಳಿಗೆ ಹರಡಿತು. ಇಂದು ಭಾರತ ಸೇರಿದಂತೆ 100ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ತಾಯಂದಿರ ದಿನವನ್ನು ವಿವಿಧ ರೀತಿಯಲ್ಲಿ ಆಚರಿಸಲಾಗುತ್ತಿದೆ.
ಭಾರತದಲ್ಲಿ ತಾಯಂದಿರ ದಿನ :
ಭಾರತದಲ್ಲಿ ತಾಯಿಗೆ ದೇವಿಯ ಸಮಾನ ಸ್ಥಾನ ನೀಡಲಾಗಿದೆ. “ಮಾತೃದೇವೋ ಭವ” ಎಂಬ ಸಂಸ್ಕೃತ ವಾಕ್ಯವೇ ತಾಯಿಯ ಮಹತ್ವವನ್ನು ಸಾರುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ತಾಯಿ ಕುಟುಂಬದ ಆಧಾರಸ್ತಂಭವಾಗಿದ್ದು, ಮಕ್ಕಳ ಬೆಳವಣಿಗೆ, ಶಿಕ್ಷಣ, ಸಂಸ್ಕಾರ ಮತ್ತು ಜೀವನ ಮೌಲ್ಯಗಳ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಾಳೆ. ಈ ಕಾರಣದಿಂದ ತಾಯಂದಿರ ದಿನವು ಕೇವಲ ಆಚರಣೆ ಮಾತ್ರವಲ್ಲ, ತಾಯಿಯ ತ್ಯಾಗ ಮತ್ತು ಪ್ರೀತಿಗೆ ಕೃತಜ್ಞತೆ ಸಲ್ಲಿಸುವ ದಿನವಾಗಿದೆ.
ಭಾರತದಲ್ಲಿ ತಾಯಂದಿರ ದಿನವು ಅಧಿಕೃತ ಸರ್ಕಾರಿ ರಜೆಯಾಗದಿದ್ದರೂ, ವ್ಯಾಪಕವಾಗಿ ಆಚರಿಸಲಾಗುತ್ತದೆ. ಶಾಲೆಗಳಲ್ಲಿ ವಿಶೇಷ ಕಾರ್ಯಕ್ರಮಗಳು, ಶುಭಾಶಯ ಪತ್ರ ತಯಾರಿಕೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ನಡೆಯುತ್ತವೆ. ಸಾಮಾಜಿಕ ಜಾಲತಾಣಗಳಲ್ಲಿಯೂ ತಾಯಿಯರಿಗಾಗಿ ವಿಶೇಷ ಸಂದೇಶಗಳು ಮತ್ತು ಫೋಟೋಗಳನ್ನು ಹಂಚಿಕೊಳ್ಳುವ ಸಂಪ್ರದಾಯ ಹೆಚ್ಚಾಗಿದೆ. ಕುಟುಂಬಗಳು ಒಟ್ಟಿಗೆ ಸಮಯ ಕಳೆಯುವ ಮೂಲಕ ಈ ದಿನವನ್ನು ಅರ್ಥಪೂರ್ಣವಾಗಿ ಆಚರಿಸುತ್ತವೆ.
ತಾಯಂದಿರ ದಿನವು ಕೇವಲ ಒಂದು ಆಚರಣೆಯಲ್ಲ, ತಾಯಿಯ ತ್ಯಾಗ ಮತ್ತು ಪರಿಶ್ರಮಕ್ಕೆ ಗೌರವ ಸೂಚಿಸುವ ದಿನವಾಗಿದೆ. ಮಕ್ಕಳ ಬೆಳವಣಿಗೆ, ಕುಟುಂಬದ ಬಾಂಧವ್ಯ ಮತ್ತು ಸಮಾಜದ ಸ್ಥಿರತೆಯಲ್ಲಿ ತಾಯಿಯ ಪಾತ್ರ ಅಪಾರವಾಗಿದೆ. ಜೊತೆಗೆ ಮಹಿಳಾ ಹಕ್ಕುಗಳು, ಮಾತೃತ್ವ ಆರೋಗ್ಯ ಮತ್ತು ಲಿಂಗ ಸಮಾನತೆ ಕುರಿತ ಜಾಗೃತಿ ಮೂಡಿಸುವುದಲ್ಲಿಯೂ ಈ ದಿನ ಮಹತ್ವ ಹೊಂದಿದೆ.
ಮಹಾತ್ಮ ಗಾಂಧೀಜಿ “ಶುದ್ಧ ಬಂಗಾರಕ್ಕೆ ಮೆರುಗು ಕೊಡಬಹುದು, ಆದರೆ ತಾಯಿಯ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಲು ಯಾರಿಗೂ ಸಾಧ್ಯವಿಲ್ಲ” ಎಂದು ಹೇಳಿದ್ದರು. ಅಬ್ರಹಾಂ ಲಿಂಕನ್ “ನನ್ನ ತಾಯಿಯ ಪ್ರಾರ್ಥನೆಗಳು ಸದಾ ನನ್ನೊಂದಿಗೆ ಇದ್ದವು” ಎಂದು ಹೇಳಿದರೆ, ರುಡ್ಯಾರ್ಡ್ ಕಿಪ್ಲಿಂಗ್ “ದೇವರು ಎಲ್ಲೆಡೆ ಇರಲು ಸಾಧ್ಯವಾಗಲಿಲ್ಲ, ಆದ್ದರಿಂದ ತಾಯಿಯನ್ನು ಸೃಷ್ಟಿಸಿದನು” ಎಂದು ವರ್ಣಿಸಿದ್ದಾರೆ. ಇಂತಹ ಅನೇಕ ಮಹನೀಯರ ಮಾತುಗಳು ತಾಯಿಯ ಸ್ಥಾನಮಾನವನ್ನು ಎತ್ತಿಹಿಡಿಯುತ್ತವೆ.
ಭಾರತದ ಇತಿಹಾಸದಲ್ಲೂ ಅಹಲ್ಯಾಬಾಯಿ ಹೋಳ್ಕರ್, ರಾಣಿ ಲಕ್ಷ್ಮೀಬಾಯಿ, ಸರೋಜಿನಿ ನಾಯ್ಡು, ಇಂದಿರಾ ಗಾಂಧಿ, ಕಿರಣ್ ಬೇಡಿ, ಸಾವಿತ್ರಿಬಾಯಿ ಫುಲೆ ಹಾಗೂ ಮದರ್ ತೆರೆಸಾ ಮುಂತಾದ ಮಹಿಳೆಯರು ತಾಯಿತನ ಮತ್ತು ನಾಯಕತ್ವದ ಸಂಕೇತಗಳಾಗಿ ಗುರುತಿಸಿಕೊಂಡಿದ್ದಾರೆ. ಇಂದಿನ ಭಾರತದಲ್ಲಿ ತಾಯಂದಿರ ಆರೋಗ್ಯ ಮತ್ತು ಜೀವನಮಟ್ಟ ಸುಧಾರಣೆಯಾಗಿದ್ದರೂ, ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಪೌಷ್ಟಿಕಾಂಶ ಕೊರತೆ, ಆರೋಗ್ಯ ಸೇವೆಗಳ ಅಭಾವ ಮತ್ತು ಗರ್ಭಧಾರಣೆಯ ಅಪಾಯಗಳಂತಹ ಸವಾಲುಗಳು ಮುಂದುವರಿದಿವೆ. ಪ್ರತಿಯೊಬ್ಬ ತಾಯಿಗೂ ಸಮರ್ಪಕ ಗೌರವ ಮತ್ತು ಆರೈಕೆ ದೊರಕುವಂತೆ ಸಮಾಜ ಒಟ್ಟಾಗಿ ಕಾರ್ಯನಿರ್ವಹಿಸಬೇಕಾಗಿದೆ.

