ಪ್ರಚಲಿತ ಘಟನೆಗಳು CA QUIZ GK JOB NEWS E-BOOK QUIZ TEST Geography History Indian Constitution MCQs
GKLatest Updates

ನವೆಂಬರ್ 1 ರಂದೇ ಕರ್ನಾಟಕ ರಾಜ್ಯೋತ್ಸವ ಆಚರಿಸೋದೇಕೆ..? ಹಿನ್ನೆಲೆ ಏನು..?

Share With Friends

ಕರ್ನಾಟಕ ರಾಜ್ಯೋತ್ಸವದ ಇತಿಹಾಸವು ಕನ್ನಡಿಗರ ದೀರ್ಘ ಹೋರಾಟ, ಭಾಷಾಭಿಮಾನ ಮತ್ತು ಸಾಂಸ್ಕೃತಿಕ ಏಕೀಕರಣದ ಅದ್ಭುತ ಕಥೆಯನ್ನು ಹೊಂದಿದೆ. ಸ್ವಾತಂತ್ರ್ಯಾನಂತರ ಭಾಷೆಯ ಆಧಾರದ ಮೇಲೆ ಹಂಚಿಹೋಗಿದ್ದ ಕನ್ನಡಿಗರನ್ನು ಒಂದೇ ನಾಡಿನಡಿಯಲ್ಲಿ ತರಲು ನಡೆಸಿದ ನಿರಂತರ ಪ್ರಯತ್ನದ ಫಲವೇ ಇಂದಿನ ಕರ್ನಾಟಕ.

ಕನ್ನಡ ನಾಡು, ನುಡಿ, ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಯ ಪ್ರತೀಕವಾಗಿರುವ ಕರ್ನಾಟಕ ರಾಜ್ಯೋತ್ಸವವನ್ನು ಇಂದು ರಾಜ್ಯಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. 2026ರ ರಾಜ್ಯೋತ್ಸವಕ್ಕೆ ವಿಶೇಷ ಮಹತ್ವವಿದ್ದು, ಕನ್ನಡ ಮಾತನಾಡುವ ಪ್ರದೇಶಗಳ ಏಕೀಕರಣದ ಮೂಲಕ ವಿಶಾಲ ಮೈಸೂರು ರಾಜ್ಯ ರಚನೆಯಾಗಿ 70 ವರ್ಷಗಳು ಪೂರ್ಣಗೊಂಡಿವೆ.

ಪ್ರತಿ ವರ್ಷ ನವೆಂಬರ್ 1ರಂದು ಆಚರಿಸಲಾಗುವ ಕರ್ನಾಟಕ ರಾಜ್ಯೋತ್ಸವವನ್ನು ಕನ್ನಡ ರಾಜ್ಯೋತ್ಸವ ಎಂದೂ ಕರೆಯಲಾಗುತ್ತದೆ. 1956ರ ನವೆಂಬರ್ 1ರಂದು ರಾಜ್ಯಗಳ ಪುನರ್‌ವಿಂಗಡಣೆ ಕಾಯ್ದೆಯ ಅನ್ವಯ ವಿವಿಧ ಆಡಳಿತ ಪ್ರದೇಶಗಳಲ್ಲಿ ಹಂಚಿಹೋಗಿದ್ದ ಕನ್ನಡ ಮಾತನಾಡುವ ಪ್ರದೇಶಗಳನ್ನು ಒಗ್ಗೂಡಿಸಿ ವಿಶಾಲ ಮೈಸೂರು ರಾಜ್ಯವನ್ನು ರಚಿಸಲಾಯಿತು. ಈ ಐತಿಹಾಸಿಕ ದಿನದ ಸ್ಮರಣಾರ್ಥ ರಾಜ್ಯೋತ್ಸವ ಆಚರಿಸಲಾಗುತ್ತದೆ.

ಏಕೀಕರಣ ಹೋರಾಟದ ಹಿನ್ನೆಲೆ

ಸ್ವಾತಂತ್ರ್ಯಪೂರ್ವ ಹಾಗೂ ಸ್ವಾತಂತ್ರ್ಯಾನಂತರದ ಆರಂಭಿಕ ವರ್ಷಗಳಲ್ಲಿ ಕನ್ನಡ ಮಾತನಾಡುವ ಜನರು ಮೈಸೂರು ಸಂಸ್ಥಾನ, ಬಾಂಬೆ ಪ್ರಾಂತ್ಯ, ಮದ್ರಾಸ್ ಪ್ರಾಂತ್ಯ, ಹೈದರಾಬಾದ್ ಸಂಸ್ಥಾನ ಹಾಗೂ ಕೊಡಗು ಸೇರಿದಂತೆ ವಿವಿಧ ಆಡಳಿತ ಪ್ರದೇಶಗಳಲ್ಲಿ ಹಂಚಿಹೋಗಿದ್ದರು. ಇದರಿಂದ ಕನ್ನಡಿಗರು ತಮ್ಮದೇ ನೆಲದಲ್ಲಿ ಅಲ್ಪಸಂಖ್ಯಾತರಾಗುವಂತಾಯಿತು. ಕನ್ನಡ ಭಾಷಿಕರಿಗಾಗಿ ಒಂದೇ ಆಡಳಿತ ವ್ಯವಸ್ಥೆ ರೂಪಿಸಬೇಕೆಂಬ ಬೇಡಿಕೆ ಬಲಗೊಂಡಿತ್ತು.

ಇದನ್ನು ಮನಗಂಡ ಆಲೂರು ವೆಂಕಟರಾಯರು (ಕನ್ನಡದ ಕುಲಪುರೋಹಿತರು) 1905ರಲ್ಲಿಯೇ ‘ಕರ್ನಾಟಕ ಏಕೀಕರಣ ಚಳುವಳಿಗೆ’ ನಾಂದಿ ಹಾಡಿದರು. ಕುವೆಂಪು, ಬಿ.ಎಂ. ಶ್ರೀಕಂಠಯ್ಯ, ಎಸ್.ನಿಜಲಿಂಗಪ್ಪ, ಕೆ. ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಮುಂತಾದ ಅನೇಕ ಸಾಹಿತಿಗಳು, ಸ್ವಾತಂತ್ರ್ಯ ಹೋರಾಟಗಾರರು ಮತ್ತು ನಾಯಕರು ಈ ಏಕೀಕರಣಕ್ಕಾಗಿ ತಮ್ಮ ಜೀವಿತಾವಧಿಯನ್ನು ಮುಪಾಗಿಟ್ಟು ಹೋರಾಡಿದರು.

ಕನ್ನಡ ಭಾಷಿಕ ಪ್ರದೇಶಗಳನ್ನು ಒಗ್ಗೂಡಿಸುವ ಉದ್ದೇಶದಿಂದ ಕರ್ನಾಟಕ ಏಕೀಕರಣ ಚಳವಳಿ ರೂಪುಗೊಂಡಿತು. ಈ ಚಳವಳಿಯಲ್ಲಿ ಸಾಹಿತಿಗಳು, ಬುದ್ಧಿಜೀವಿಗಳು, ರಾಜಕೀಯ ನಾಯಕರು ಹಾಗೂ ಕನ್ನಡಪರ ಹೋರಾಟಗಾರರು ಪ್ರಮುಖ ಪಾತ್ರ ವಹಿಸಿದ್ದರು. ಕರ್ನಾಟಕ ಕುಲಪುರೋಹಿತ ಎಂದೇ ಖ್ಯಾತರಾದ ಆಲೂರು ವೆಂಕಟರಾವ್ ಅವರು ಏಕೀಕರಣ ಚಳವಳಿಯ ಪ್ರಮುಖ ಮುಂಚೂಣಿಗರಾಗಿದ್ದರು.

ದೀರ್ಘಕಾಲದ ಹೋರಾಟ ಮತ್ತು ಪ್ರಯತ್ನಗಳ ಫಲವಾಗಿ 1956ರ ನವೆಂಬರ್ 1ರಂದು ರಾಜ್ಯಗಳ ಪುನರ್‌ವಿಂಗಡಣೆ ಕಾಯ್ದೆಯಡಿ ಕನ್ನಡ ಭಾಷಿಕ ಪ್ರದೇಶಗಳನ್ನು ಮೈಸೂರು ರಾಜ್ಯದೊಂದಿಗೆ ವಿಲೀನಗೊಳಿಸಲಾಯಿತು. ಇದರಿಂದ ವಿಶಾಲ ಮೈಸೂರು ರಾಜ್ಯ ಅಸ್ತಿತ್ವಕ್ಕೆ ಬಂದಿತು.

ಮೈಸೂರು ರಾಜ್ಯದ ಉದಯ (ನವೆಂಬರ್ 1, 1956):
ಭಾರತ ಸ್ವಾತಂತ್ರ್ಯಗೊಂಡ ನಂತರ (1947) ಮತ್ತು ದೇಶವು ಗಣರಾಜ್ಯವಾದ ಮೇಲೆ (1950), ಭಾಷಾವಾರು ಪ್ರಾಂತ್ಯಗಳ ವಿಂಗಡನೆಗೆ ತೀವ್ರ ಒತ್ತಡ ಕೇಳಿಬಂತು. ರಾಜ್ಯ ಪುನರ್‌ವಿಂಗಡನಾ ಕಾಯಿದೆಯಡಿ, 1956ರ ನವೆಂಬರ್ 1ರಂದು ದಕ್ಷಿಣ ಭಾರತದ ಎಲ್ಲಾ ಕನ್ನಡ ಮಾತನಾಡುವ ಪ್ರದೇಶಗಳು (ಮೈಸೂರು, ಮುಂಬೈ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಮದ್ರಾಸ್ ಪ್ರಾಂತ್ಯದ ಕೆಲವು ಭಾಗಗಳು ಮತ್ತು ಕೊಡಗು) ಒಂದಾಗಿ ‘ಮೈಸೂರು ರಾಜ್ಯ’ ಎಂಬ ಹೆಸರಿನಲ್ಲಿ ಹೊಸ ರಾಜ್ಯ ಅಸ್ತಿತ್ವಕ್ಕೆ ಬಂದಿತು. ಈ ದಿನದ ನೆನಪಿಗಾಗಿ ಪ್ರತಿವರ್ಷ ನವೆಂಬರ್ 1ರಂದು ‘ರಾಜ್ಯೋತ್ಸವ’ ಆಚರಿಸಲಾಗುತ್ತದೆ.

1973ರಲ್ಲಿ ಕರ್ನಾಟಕ ಎಂದು ನಾಮಕರಣ

1956ರಲ್ಲಿ ರಚನೆಯಾದ ವಿಶಾಲ ಮೈಸೂರು ರಾಜ್ಯವು ಆರಂಭದಲ್ಲಿ ಮೈಸೂರು ರಾಜ್ಯ ಎಂದೇ ಗುರುತಿಸಿಕೊಂಡಿತ್ತು. ನಂತರ ರಾಜ್ಯದ ಭೌಗೋಳಿಕ ಹಾಗೂ ಸಾಂಸ್ಕೃತಿಕ ವ್ಯಾಪಕತೆಯನ್ನು ಪ್ರತಿಬಿಂಬಿಸುವ ಉದ್ದೇಶದಿಂದ ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು.

1973ರ ನವೆಂಬರ್ 1ರಂದು ಮೈಸೂರು ರಾಜ್ಯ (ಹೆಸರಿನ ಬದಲಾವಣೆ) ಕಾಯ್ದೆಯಡಿ ಅಧಿಕೃತವಾಗಿ ಕರ್ನಾಟಕ ಎಂದು ಹೆಸರು ಬದಲಾಯಿಸಲಾಯಿತು. ಅಂದಿನ ಮುಖ್ಯಮಂತ್ರಿ ಡಿ. ದೇವರಾಜ್ ಅರಸು ಅವರ ನೇತೃತ್ವದ ಸರ್ಕಾರವು ಈ ಐತಿಹಾಸಿಕ ನಿರ್ಧಾರವನ್ನು ಕೈಗೊಂಡು, 1956ರ ನವೆಂಬರ್ 1ರಂದೇ (17 ವರ್ಷಗಳ ಬಳಿಕ – 1973) ಮೈಸೂರು ರಾಜ್ಯವನ್ನು ಅಧಿಕೃತವಾಗಿ ‘ಕರ್ನಾಟಕ’ ಎಂದು ಮರುನಾಮಕರಣ ಮಾಡಿತು.

ಹಳದಿ-ಕೆಂಪು ಕನ್ನಡ ಧ್ವಜ:

ಕನ್ನಡ ನಾಡಿನ ಅಸ್ಮಿತೆಯ ಪ್ರತೀಕವಾಗಿರುವ ಹಳದಿ ಮತ್ತು ಕೆಂಪು ಬಣ್ಣದ ಕನ್ನಡ ಧ್ವಜವನ್ನು ಮೊಟ್ಟಮೊದಲಿಗೆ ಕನ್ನಡ ಹೋರಾಟಗಾರ ಎಂ. ರಾಮಮೂರ್ತಿ ಅವರು ರೂಪಿಸಿದರು. ಇಂದು ಈ ಧ್ವಜವು ಕನ್ನಡಿಗರ ಸ್ವಾಭಿಮಾನ ಮತ್ತು ಒಗ್ಗಟ್ಟಿನ ಸಂಕೇತವಾಗಿದೆ.

2026ರಲ್ಲಿ 70 ವರ್ಷಗಳ ಸಂಭ್ರಮ

1956ರ ನವೆಂಬರ್ 1ರಂದು ವಿಶಾಲ ಮೈಸೂರು ರಾಜ್ಯ ರಚನೆಯಾಗಿ 2026ರ ನವೆಂಬರ್ 1ಕ್ಕೆ 70 ವರ್ಷಗಳು ಪೂರ್ಣಗೊಂಡಿವೆ. ಹೀಗಾಗಿ ಈ ವರ್ಷದ ರಾಜ್ಯೋತ್ಸವವು ಏಕೀಕರಣದ ಏಳು ದಶಕಗಳ ಸಾಧನೆಯನ್ನು ಸ್ಮರಿಸುವ ವಿಶೇಷ ಸಂದರ್ಭವಾಗಿದೆ.

ಆದರೆ 70 ವರ್ಷಗಳ ಏಕೀಕರಣದ ವಾರ್ಷಿಕೋತ್ಸವ ಮತ್ತು ರಾಜ್ಯೋತ್ಸವದ ಆಚರಣೆಯ ಕ್ರಮಸಂಖ್ಯೆ ಒಂದೇ ಅಲ್ಲ. 1956ರಿಂದ ವಾರ್ಷಿಕ ಆಚರಣೆಯನ್ನು ಲೆಕ್ಕ ಹಾಕಿದರೆ 2026ರಲ್ಲಿ 71ನೇ ವಾರ್ಷಿಕ ಆಚರಣೆಯಾಗುತ್ತದೆ. ಆದರೆ ಏಕೀಕರಣದ 70ನೇ ವರ್ಷಾಚರಣೆಯಾಗಿದೆ.

ರಾಜ್ಯೋತ್ಸವದ ಆಚರಣೆ ಹೇಗೆ?

ರಾಜ್ಯೋತ್ಸವದ ಅಂಗವಾಗಿ ರಾಜ್ಯದಾದ್ಯಂತ ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳಲ್ಲಿ ಕನ್ನಡ ಧ್ವಜಾರೋಹಣ, ಸಾಂಸ್ಕೃತಿಕ ಕಾರ್ಯಕ್ರಮಗಳು, ಕನ್ನಡ ಗೀತೆಗಳ ಗಾಯನ, ನೃತ್ಯ, ನಾಟಕ, ಕವಿಗೋಷ್ಠಿ ಹಾಗೂ ಭಾಷಣಗಳನ್ನು ಆಯೋಜಿಸಲಾಗುತ್ತದೆ.

ನಾಡಗೀತೆ ‘ಜಯ ಭಾರತ ಜನನಿಯ ತನುಜಾತೆ’ಯನ್ನು ರಾಜ್ಯೋತ್ಸವದ ಕಾರ್ಯಕ್ರಮಗಳಲ್ಲಿ ಹಾಡಲಾಗುತ್ತದೆ. ರಾಷ್ಟ್ರಕವಿ ಕುವೆಂಪು ಅವರು ರಚಿಸಿರುವ ಈ ಗೀತೆ ಕರ್ನಾಟಕದ ನಾಡು, ನುಡಿ ಮತ್ತು ಸಂಸ್ಕೃತಿಯ ಹೆಮ್ಮೆಯನ್ನು ಸಾರುತ್ತದೆ. ಇದೇ ಸಂದರ್ಭದಲ್ಲಿ ಸಾಹಿತ್ಯ, ಕಲೆ, ಶಿಕ್ಷಣ, ವಿಜ್ಞಾನ, ಸಮಾಜಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಸಾಧಕರಿಗೆ ರಾಜ್ಯ ಸರ್ಕಾರದಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ.

ಕರ್ನಾಟಕ ರಾಜ್ಯೋತ್ಸವ ಕೇವಲ ಒಂದು ಹಬ್ಬವಲ್ಲ. ಕನ್ನಡ ಭಾಷೆಯ ಅಸ್ಮಿತೆ, ಸಾಂಸ್ಕೃತಿಕ ಪರಂಪರೆ ಹಾಗೂ ಕನ್ನಡಿಗರ ಒಗ್ಗಟ್ಟಿನ ಸಂಕೇತವಾಗಿದೆ. ಏಕೀಕರಣಕ್ಕಾಗಿ ಶ್ರಮಿಸಿದ ಮಹನೀಯರನ್ನು ಸ್ಮರಿಸುವುದರ ಜೊತೆಗೆ ಮುಂದಿನ ಪೀಳಿಗೆಗೆ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಮಹತ್ವವನ್ನು ಪರಿಚಯಿಸುವ ಮಹತ್ವದ ದಿನವೂ ಆಗಿದೆ.

author avatar
GK KANNADA
GK Kannada offers comprehensive General Knowledge, current affairs updates, MCQs, and study notes to help you prepare effectively for competitive exams like UPSC, KPSC, SSC, and banking exams.

GK KANNADA

GK Kannada offers comprehensive General Knowledge, current affairs updates, MCQs, and study notes to help you prepare effectively for competitive exams like UPSC, KPSC, SSC, and banking exams.

error: Content Copyright protected !!