ಹಂದಿಯ ಯಕೃತ್ತು ಮತ್ತು ಮೂತ್ರಪಿಂಡವನ್ನು ಮನುಷ್ಯನಿಗೆ ಯಶಸ್ವಿಯಾಗಿ ಕಸಿ ಮಾಡಿದ ಚೀನಾ
ಚೀನಾದ ವೈದ್ಯಕೀಯ ವಿಜ್ಞಾನಿಗಳು ವೈದ್ಯಕೀಯ ಕ್ಷೇತ್ರದಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದು, ಹಂದಿಯ ಯಕೃತ್ತು (Liver) ಮತ್ತು ಎರಡು ಮೂತ್ರಪಿಂಡಗಳನ್ನು (Kidneys) ಒಬ್ಬ ಮನುಷ್ಯನ ದೇಹಕ್ಕೆ ಯಶಸ್ವಿಯಾಗಿ ಕಸಿ ಮಾಡಿದ್ದಾರೆ. 2026ರ ಮೇ 29ರಂದು ಚೀನಾದ ಏರ್ ಫೋರ್ಸ್ ಮೆಡಿಕಲ್ ಯುನಿವರ್ಸಿಟಿಯ ಕ್ಸಿಜಿಂಗ್ (Xijing) ಆಸ್ಪತ್ರೆಯಲ್ಲಿ ಈ ಅಪರೂಪದ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಆನುವಂಶಿಕ ಮಾರ್ಪಾಡುಗಳನ್ನು ಹೊಂದಿರುವ ಹಂದಿ ಅಂಗಗಳನ್ನು ಈ ಹಿಂದೆ ಹಲವು ಬಾರಿ ಮನುಷ್ಯರಿಗೆ ಕಸಿ ಮಾಡಲಾಗಿದ್ದರೂ, ಏಕಕಾಲದಲ್ಲಿ ಬಹು ಅಂಗಗಳನ್ನು ಕಸಿ ಮಾಡಿರುವುದು ಇದೇ ಮೊದಲು.
ತೀವ್ರ ಮೂತ್ರಪಿಂಡ ಕಾಯಿಲೆ ಮತ್ತು ಸೆರೆಬ್ರಲ್ ರಕ್ತಸ್ರಾವದಿಂದಾಗಿ ಮೆದುಳು ಸಾವನ್ನಪ್ಪಿದ್ದ 53 ವರ್ಷದ ರೋಗಿಗೆ ಅವರ ಕುಟುಂಬದ ಒಪ್ಪಿಗೆಯೊಂದಿಗೆ ಹಂದಿ ಅಂಗಾಂಗಗಳನ್ನು ನೀಡಲಾಯಿತು. ಸಂಶೋಧನಾ ತಂಡವು ಹಂದಿ ಅಂಗಗಳಲ್ಲಿ ಆರು ಜೀನ್ಗಳನ್ನು ಸಂಪಾದಿಸಿದೆ ಎಂದು ವರದಿಯಾಗಿದೆ. CRISPR ಜೀನ್-ಎಡಿಟಿಂಗ್ ತಂತ್ರಜ್ಞಾನವನ್ನು ಬಳಸಿಕೊಂಡು, ಅವರು ಮೂರು ಹಂದಿ ಜೀನ್ಗಳನ್ನು ತೆಗೆದುಹಾಕಿ ಮೂರು ಮಾನವ ಜೀನ್ಗಳನ್ನು ಸೇರಿಸಿದರು, ಇದು ರೋಗನಿರೋಧಕ ನಿರಾಕರಣೆಯ ಅಪಾಯವನ್ನು ಕಡಿಮೆ ಮಾಡಲು ಮತ್ತು ಮಾನವ ದೇಹದಲ್ಲಿ ಬದುಕುಳಿಯುವಿಕೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಇದು ಜಗತ್ತಿನಲ್ಲೇ ಮೊದಲ ಬಾರಿಗೆ ಒಂದೇ ವೇಳೆ ಹಂದಿಯಿಂದ ಮನುಷ್ಯನಿಗೆ ಬಹು ಅಂಗಾಂಗ ಕಸಿ (Multi-organ Xenotransplantation) ನಡೆಸಿದ ಘಟನೆ ಎಂದು ಪರಿಗಣಿಸಲಾಗಿದೆ.
ಮಾನವ ದೇಹವು ಹಂದಿಯ ಅಂಗಗಳನ್ನು ತಿರಸ್ಕರಿಸದಂತೆ ಮಾಡಲು ವಿಜ್ಞಾನಿಗಳು ಹಂದಿಯ ಅಂಗಗಳಲ್ಲಿ ಆರು ಜೀನ್ಗಳನ್ನು ಸಂಪಾದನೆಗೊಳಪಡಿಸಿದ್ದರು. ಇದರಿಂದ ರೋಗನಿರೋಧಕ ವ್ಯವಸ್ಥೆಯಿಂದ ಉಂಟಾಗುವ ತಿರಸ್ಕಾರ ಪ್ರತಿಕ್ರಿಯೆಯನ್ನು ಕಡಿಮೆ ಮಾಡುವ ಉದ್ದೇಶ ಹೊಂದಲಾಗಿತ್ತು.
ಕಸಿ ಮಾಡಿದ ಹಂದಿಯ ಯಕೃತ್ತು ಶಸ್ತ್ರಚಿಕಿತ್ಸೆಯ 19 ಗಂಟೆಗಳೊಳಗೆ ಪಿತ್ತರಸ (Bile) ಉತ್ಪಾದಿಸಲು ಆರಂಭಿಸಿತು. ಮೂತ್ರಪಿಂಡಗಳ ಕಾರ್ಯಕ್ಷಮತೆಯ ಸೂಚಕಗಳು ಮೊದಲ ಐದು ದಿನಗಳಲ್ಲಿ ಸಾಮಾನ್ಯ ಮಟ್ಟಕ್ಕೆ ಮರಳಿದವು.
ಆದರೆ ಶಸ್ತ್ರಚಿಕಿತ್ಸೆಯ ಸುಮಾರು 36 ಗಂಟೆಗಳ ನಂತರ ಮಾನವ ರೋಗನಿರೋಧಕ ಕೋಶಗಳು ಹಂದಿಯ ಜೀವಕೋಶಗಳನ್ನು ಬದಲಾಯಿಸಲು ಆರಂಭಿಸಿದ ಪರಿಣಾಮ ಆರಂಭಿಕ ತಿರಸ್ಕಾರ (Rejection) ಲಕ್ಷಣಗಳು ಕಂಡುಬಂದವು ಎಂದು ವೈದ್ಯರು ತಿಳಿಸಿದ್ದಾರೆ.
ಈ ಅಧ್ಯಯನವನ್ನು ಗುವಾಂಗ್ಸಿ ಮೆಡಿಕಲ್ ಯುನಿವರ್ಸಿಟಿಯ ದ್ವಿತೀಯ ಸಂಯೋಜಿತ ಆಸ್ಪತ್ರೆಯ ಪ್ರೊ. ಸುನ್ ಶುಯೋಂಗ್ (Xuyong Sun) ನೇತೃತ್ವದಲ್ಲಿ ನಡೆಸಲಾಗಿದ್ದು, 2026ರ ಮೇ 30ರಂದು ವೈದ್ಯಕೀಯ ಜರ್ನಲ್ Med ನಲ್ಲಿ ಪ್ರಕಟಿಸಲಾಗಿದೆ.
ಕ್ಸೆನೋ ಟ್ರಾನ್ಸ್ಪ್ಲಾಂಟೇಶನ್ (Xenotransplantation) ಎಂದರೇನು?
ಒಂದು ಜೀವಿಯ ಜೀವಕೋಶ, ಅಂಗಾಂಶ ಅಥವಾ ಅಂಗವನ್ನು ಮತ್ತೊಂದು ಜಾತಿಯ ಜೀವಿಗೆ ಕಸಿ ಮಾಡುವ ವಿಧಾನವನ್ನು “ಕ್ಸೆನೋ ಟ್ರಾನ್ಸ್ಪ್ಲಾಂಟೇಶನ್” (Xenotransplantation) ಎಂದು ಕರೆಯಲಾಗುತ್ತದೆ. ಹಂದಿಯ ಅಂಗಗಳ ಗಾತ್ರ ಮತ್ತು ದೈಹಿಕ ಲಕ್ಷಣಗಳು ಮನುಷ್ಯರ ಅಂಗಗಳಿಗೆ ಹೋಲಿಕೆಯಾಗಿರುವುದರಿಂದ ಸಂಶೋಧಕರು ಹಂದಿಯ ಅಂಗಗಳನ್ನು ಬಳಸುತ್ತಿದ್ದಾರೆ.
ಅಂಗಾಂಗಗಳ ಕೊರತೆ (Organ Shortage)ಗೆ ಪರಿಹಾರ..?
ಪ್ರಪಂಚದಾದ್ಯಂತ ಮಾನವ ಅಂಗಾಂಗಗಳ ಕೊರತೆ (Organ Shortage) ಗಂಭೀರ ಸಮಸ್ಯೆಯಾಗಿದ್ದು, ಹಂದಿಯ ಅಂಗಗಳನ್ನು ತಾತ್ಕಾಲಿಕ “ಬ್ರಿಡ್ಜ್ ಸಪೋರ್ಟ್” ವ್ಯವಸ್ಥೆ (bridge support system)ಯಾಗಿ ಬಳಸುವ ಸಾಧ್ಯತೆಗಳ ಕುರಿತು ಸಂಶೋಧನೆಗಳು ನಡೆಯುತ್ತಿವೆ. ಭವಿಷ್ಯದಲ್ಲಿ ಇಂತಹ ತಂತ್ರಜ್ಞಾನವು ಸಾವಿರಾರು ರೋಗಿಗಳ ಜೀವ ಉಳಿಸಲು ನೆರವಾಗಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

