ವಿಯೆಟ್ನಾಂ ಜೊತೆ ಬ್ರಹ್ಮೋಸ್ ಕ್ಷಿಪಣಿ ಪೂರೈಕೆ ಒಪ್ಪಂದಕ್ಕೆ ಭಾರತ ಸಹಿ
ಭಾರತವು ವಿಯೆಟ್ನಾಂಗೆ ಬ್ರಹ್ಮೋಸ್ (BrahMos) ಸೂಪರ್‌ಸೋನಿಕ್ ಕ್ರೂಸ್ ಕ್ಷಿಪಣಿ(supersonic cruise missile)ಗಳನ್ನು ಪೂರೈಕೆ ಮಾಡುವ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದೆ. ವಿಯೆಟ್ನಾಂ ಜೊತೆಗಿನ ಬ್ರಹ್ಮೋಸ್ ಒಪ್ಪಂದವನ್ನು 30 ಮೇ 2026 ರಂದು Shangri-La Dialogue ಸಂದರ್ಭದಲ್ಲಿ ದೃಢಪಡಿಸಲಾಯಿತು. ವಿಯೆಟ್ನಾಂ ಜೊತೆಗಿನ ಒಪ್ಪಂದದಲ್ಲಿ ಕ್ಷಿಪಣಿ ವ್ಯವಸ್ಥೆಗಳು, ಸಿಬ್ಬಂದಿಗೆ ತರಬೇತಿ ಹಾಗೂ ಅಗತ್ಯ ಲಾಜಿಸ್ಟಿಕ್ಸ್ ಬೆಂಬಲವೂ ಒಳಗೊಂಡಿದೆ. ಈ ಒಪ್ಪಂದದ ಮೌಲ್ಯ ಸುಮಾರು ₹6,000 ಕೋಟಿ (ಅಂದಾಜು 629 ಮಿಲಿಯನ್ ಅಮೆರಿಕನ್ ಡಾಲರ್) ಎಂದು ಅಂದಾಜಿಸಲಾಗಿದೆ.
Philippines ದೇಶವು ಜನವರಿ 2022ರಲ್ಲಿ ಬ್ರಹ್ಮೋಸ್ ಕ್ಷಿಪಣಿ ವ್ಯವಸ್ಥೆಯನ್ನು ಖರೀದಿಸಿದ ಮೊದಲ ವಿದೇಶಿ ರಾಷ್ಟ್ರವಾಗಿದೆ. ಸುಮಾರು 375 ಮಿಲಿಯನ್ ಡಾಲರ್ ಮೌಲ್ಯದ ಈ ಒಪ್ಪಂದವು ಕರಾವಳಿ ಆಧಾರಿತ ಹಡಗು-ವಿರೋಧಿ ಕ್ಷಿಪಣಿ ವ್ಯವಸ್ಥೆಯನ್ನು ಒಳಗೊಂಡಿತ್ತು. ಮತ್ತೊಂದೆಡೆ, Indonesia ದೇಶವು ಬ್ರಹ್ಮೋಸ್‌ನ ನೌಕಾಪಡೆ ಆವೃತ್ತಿ ಖರೀದಿಸಲು ಆಸಕ್ತಿ ತೋರಿದ್ದು, ಮಾತುಕತೆಗಳು ಅಂತಿಮ ಹಂತದಲ್ಲಿವೆ.
ಬ್ರಹ್ಮೋಸ್ ಕ್ಷಿಪಣಿ ಕುರಿತ ಮಾಹಿತಿ :
ಬ್ರಹ್ಮೋಸ್ (BrahMos) ಭಾರತ ಮತ್ತು ರಷ್ಯಾ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿ (Supersonic Cruise Missile) ಆಗಿದೆ. ಇದು ವಿಶ್ವದ ಅತ್ಯಂತ ವೇಗದ ಕಾರ್ಯಾಚರಣೆಯಲ್ಲಿರುವ ಕ್ರೂಸ್ ಕ್ಷಿಪಣಿಗಳಲ್ಲಿ ಒಂದಾಗಿದೆ. ಭಾರತದ ಬ್ರಹ್ಮಪುತ್ರಾ ನದಿ (Brahmaputra River) ಮತ್ತು ರಷ್ಯಾದ ಮೊಸ್ಕ್ವಾ ನದಿ(Moskva River)ಗಳ ಹೆಸರನ್ನು ಸಂಯೋಜಿಸಿ ಇದಕ್ಕೆ “ಬ್ರಹ್ಮೋಸ್” ಎಂದು ಹೆಸರಿಡಲಾಗಿದೆ.
ಇದು ಮ್ಯಾಕ್ 2.8 ರಿಂದ 3.0 ವೇಗದಲ್ಲಿ ಸಂಚರಿಸಬಲ್ಲದು, ಅಂದರೆ ಧ್ವನಿಯ ವೇಗಕ್ಕಿಂತ ಸುಮಾರು ಮೂರು ಪಟ್ಟು ಹೆಚ್ಚು ವೇಗ ಹೊಂದಿದೆ. ಬ್ರಹ್ಮೋಸ್ ಕ್ಷಿಪಣಿಯ ವ್ಯಾಪ್ತಿ 290 ಕಿ.ಮೀ.ನಿಂದ 800 ಕಿ.ಮೀ.ಕ್ಕಿಂತ ಹೆಚ್ಚಿದ್ದು, 200–300 ಕೆ.ಜಿ. ತೂಕದ ವಾರ್‌ಹೆಡ್‌ನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಕಡಿಮೆ ಎತ್ತರದಲ್ಲಿ ಹಾರಾಟ ನಡೆಸುವ ಸಾಮರ್ಥ್ಯ, ಅತ್ಯಂತ ನಿಖರ ದಾಳಿ ಮತ್ತು “ಫೈರ್ ಅಂಡ್ ಫರ್ಗೆಟ್” ತಂತ್ರಜ್ಞಾನ ಇದರ ಪ್ರಮುಖ ವೈಶಿಷ್ಟ್ಯಗಳಾಗಿವೆ.
ಬ್ರಹ್ಮೋಸ್ ಕ್ಷಿಪಣಿಯನ್ನು ಭೂಮಿ, ಯುದ್ಧನೌಕೆ, ಜಲಾಂತರ್ಗಾಮಿ ನೌಕೆ ಹಾಗೂ Sukhoi Su-30MKI ಯುದ್ಧವಿಮಾನಗಳಿಂದ ಉಡಾಯಿಸಬಹುದಾಗಿದೆ. ಇದರಿಂದ ಇದು ವಿಶ್ವದ ಅತ್ಯಂತ ಬಹುಮುಖ ಕ್ಷಿಪಣಿ ವ್ಯವಸ್ಥೆಗಳಲ್ಲಿ ಒಂದಾಗಿದೆ.
ಬ್ರಹ್ಮೋಸ್-NG :
ಭಾರತವು ಈಗ ಬ್ರಹ್ಮೋಸ್-ಎನ್‌ಜಿ (Next Generation) ಆವೃತ್ತಿಯನ್ನು ಅಭಿವೃದ್ಧಿಪಡಿಸುತ್ತಿದ್ದು, ಇದು ಗಾತ್ರದಲ್ಲಿ ಚಿಕ್ಕದಾಗಿದ್ದು, ತೂಕ ಕಡಿಮೆ ಹಾಗೂ ಹೆಚ್ಚಿನ ಯುದ್ಧವಿಮಾನಗಳಲ್ಲಿ ಅಳವಡಿಸಬಹುದಾಗಿದೆ.
ASEAN ಬಗ್ಗೆ :
Association of Southeast Asian Nations (ASEAN) ಆಗ್ನೇಯ ಏಷ್ಯಾದ 10 ರಾಷ್ಟ್ರಗಳ ಪ್ರಾದೇಶಿಕ ಸಂಘಟನೆಯಾಗಿದೆ. ಸ್ನೇಹಪರ ರಾಷ್ಟ್ರಗಳೊಂದಿಗೆ ಸುಧಾರಿತ ರಕ್ಷಣಾ ತಂತ್ರಜ್ಞಾನಗಳನ್ನು ಹಂಚಿಕೊಳ್ಳುವ ಭಾರತದ ನೀತಿಯ ಭಾಗವಾಗಿ ಈ ಒಪ್ಪಂದಗಳು ಮಹತ್ವ ಪಡೆದಿವೆ.

