ಪ್ರಚಲಿತ ಘಟನೆಗಳು CA QUIZ GK JOB NEWS E-BOOK QUIZ TEST Geography History Indian Constitution MCQs
Current AffairsLatest Updates

ಬಲವಂತದ ಕಾರ್ಮಿಕರಿಂದ ತಯಾರಾದ ವಸ್ತುಗಳ ಆಮದಿಗೆ ನಿಷೇಧ ಹೇರಿದ ಭಾರತ

Share With Friends

ಬಲವಂತದ ಕಾರ್ಮಿಕರ (Forced Labour) ಮೂಲಕ ತಯಾರಿಸಲಾದ ವಸ್ತುಗಳ ಆಮದನ್ನು ಭಾರತ ಸರ್ಕಾರ ನಿಷೇಧಿಸಿದೆ. ಈ ಸಂಬಂಧ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಧೀನದಲ್ಲಿರುವ ಡೈರೆಕ್ಟರೇಟ್ ಜನರಲ್ ಆಫ್ ಫಾರೆನ್ ಟ್ರೇಡ್ (DGFT-Directorate General of Foreign Trade) ಜುಲೈ 13ರಂದು ಅಧಿಸೂಚನೆ ಹೊರಡಿಸಿದೆ.

ಹೊಸ ನಿಯಮವನ್ನು ವಿದೇಶಿ ವ್ಯಾಪಾರ ನೀತಿ (Foreign Trade Policy-2023)ಯ ಪ್ಯಾರಾಗ್ರಾಫ್ 2.20B ಅಡಿಯಲ್ಲಿ ಸೇರಿಸಲಾಗಿದ್ದು, ಬಲವಂತದ ಕಾರ್ಮಿಕರ ಶ್ರಮದಿಂದ ತಯಾರಾದ ಆಮದು ವಸ್ತುಗಳ ವಿರುದ್ಧ ಭಾರತ ಕೈಗೊಂಡಿರುವ ಮೊದಲ ವಿಶೇಷ ನಿರ್ಬಂಧವಾಗಿದೆ.

ಅಧಿಸೂಚನೆಯ ಪ್ರಕಾರ, ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ILO-International Labour Organization)ಯ 1930ರ ಬಲವಂತದ ಕಾರ್ಮಿಕರ ಒಪ್ಪಂದ (Convention No.29)ದಲ್ಲಿರುವ ವ್ಯಾಖ್ಯಾನವನ್ನೇ ಭಾರತ ಅಳವಡಿಸಿಕೊಂಡಿದೆ. ವ್ಯಕ್ತಿಯ ಸ್ವಇಚ್ಛೆಗೆ ವಿರುದ್ಧವಾಗಿ, ಶಿಕ್ಷೆಯ ಭೀತಿಯಡಿ ಮಾಡಿಸಲ್ಪಡುವ ಕೆಲಸವನ್ನು ಬಲವಂತದ ಕಾರ್ಮಿಕ ಎಂದು ಪರಿಗಣಿಸಲಾಗಿದೆ.

ಹೊಸ ನಿಯಮದ ಅನ್ವಯ, ಆಮದು ಮಾಡಲಾಗುವ ವಸ್ತುಗಳ ಉತ್ಪಾದನೆಯಲ್ಲಿ ಬಲವಂತದ ಕಾರ್ಮಿಕರನ್ನು ಬಳಸಲಾಗಿದೆ ಎಂಬ ಆರೋಪಗಳ ಕುರಿತು DGFT ತನಿಖೆ ನಡೆಸಲಿದೆ. ಸಾಕ್ಷ್ಯಾಧಾರಗಳು ದೊರೆತಲ್ಲಿ ಅಂತಹ ವಸ್ತುಗಳ ಆಮದನ್ನು ನಿಷೇಧಿಸಲು ಶಿಫಾರಸು ಮಾಡುವ ಅಧಿಕಾರವೂ ಡಿಜಿಎಫ್‌ಟಿಗೆ ನೀಡಲಾಗಿದೆ.

ಈ ನಿಯಮಗಳು ರಾಜಪತ್ರದಲ್ಲಿ ಪ್ರಕಟವಾದ 30 ದಿನಗಳ ಬಳಿಕ ಜಾರಿಗೆ ಬರಲಿವೆ. ಜಾಗತಿಕ ಮಟ್ಟದಲ್ಲಿ ಸರಕು ಸರಪಳಿಯಲ್ಲಿ ಕಾರ್ಮಿಕರ ಹಕ್ಕುಗಳ ರಕ್ಷಣೆ ಮತ್ತು ಮಾನವ ಹಕ್ಕುಗಳ ಪಾಲನೆಗೆ ಒತ್ತು ನೀಡುತ್ತಿರುವ ಸಂದರ್ಭದಲ್ಲಿ ಭಾರತ ಈ ಮಹತ್ವದ ಕ್ರಮ ಕೈಗೊಂಡಿದೆ.

ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಈ ಅಧಿಸೂಚನೆಗೆ ಅನುಮೋದನೆ ನೀಡಿದ್ದು, ಬಲವಂತದ ಕಾರ್ಮಿಕರ ಶ್ರಮದಿಂದ ತಯಾರಾದ ಆಮದು ವಸ್ತುಗಳ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳಲು ಇದರಿಂದ ಸ್ಪಷ್ಟವಾದ ವ್ಯವಸ್ಥೆ ರೂಪುಗೊಂಡಿದೆ.


error: Content Copyright protected !!