ಭಾರತೀಯ ನೌಕಾಪಡೆಯ ‘ಸೀ ಕಿಂಗ್ 42B’ ಸ್ಕ್ವಾಡ್ರನ್‌ಗೆ ವಿದಾಯ
ಭಾರತೀಯ ನೌಕಾಪಡೆಯ ಹೆಲಿಕಾಪ್ಟರ್ ಸ್ಕ್ವಾಡ್ರನ್ ಐಎನ್‌ಎಎಸ್ 330 (Indian Naval Air Squadron 330), “ದಿ ಹಾರ್ಪೂನ್ಸ್” ಎಂದು ಪ್ರಸಿದ್ಧವಾಗಿದ್ದ ಘಟಕವು 55 ವರ್ಷಗಳ ಸುದೀರ್ಘ ಸೇವೆಯ ನಂತರ 2026ರ ಜೂನ್ 14ರಂದು ಅಧಿಕೃತವಾಗಿ ಕಾರ್ಯನಿರ್ವಹಣೆಯಿಂದ ನಿವೃತ್ತಿಯಾಯಿತು.
ಈ ಸ್ಕ್ವಾಡ್ರನ್ ಅನ್ನು 1971ರ ಏಪ್ರಿಲ್ 17ರಂದು ಕೊಚ್ಚಿಯ INS Garuda ನೌಕಾ ವಾಯುನೆಲೆಯಲ್ಲಿ ಕಮಾಂಡರ್ ಎಂ.ಪಿ. ವಾಧವನ್ ಅವರ ನೇತೃತ್ವದಲ್ಲಿ ಸ್ಥಾಪಿಸಲಾಗಿತ್ತು. ಐಎನ್‌ಎಎಸ್ 330 ಭಾರತೀಯ ನೌಕಾಪಡೆಯ ಪ್ರಮುಖ ಹೆಲಿಕಾಪ್ಟರ್ ಘಟಕಗಳಲ್ಲಿ ಒಂದಾಗಿದ್ದು, ಸೀ ಕಿಂಗ್ Mk 42B ಹೆಲಿಕಾಪ್ಟರ್‌ಗಳನ್ನು ನಿರ್ವಹಿಸುತ್ತಿತ್ತು.
ಸೀ ಕಿಂಗ್ 42B ಪಡೆಯ ನಿವೃತ್ತಿಯೊಂದಿಗೆ ಭಾರತೀಯ ನೌಕಾಪಡೆಯ ವಾಯುಯಾನ ಇತಿಹಾಸದ ಒಂದು ಮಹತ್ವದ ಅಧ್ಯಾಯ ಅಂತ್ಯಗೊಂಡಿದ್ದು, ಹೊಸ ತಲೆಮಾರಿನ ಹೆಲಿಕಾಪ್ಟರ್‌ಗಳ ಯುಗಕ್ಕೆ ನೌಕಾಪಡೆ ಕಾಲಿಡುತ್ತಿದೆ.
36 ವರ್ಷಗಳ ಸೇವೆಗೆ ಅಂತ್ಯ :
“ಸೀ ಕಿಂಗ್ ಬ್ರಾವೋ” (Sea King Bravo) ಎಂದು ಕರೆಯಲ್ಪಡುವ ಈ ಹೆಲಿಕಾಪ್ಟರ್ ಪಡೆಯು 36 ವರ್ಷಗಳ ಸೇವೆಯ ಬಳಿಕ 2026ರ ಜೂನ್ 14ರಂದು ಮುಂಬೈನ INS Shikra ನಿಂದ ನಡೆದ ವಿಶೇಷ ವಿಧಿವಿಧಾನಗಳ ಅಂತಿಮ ಹಾರಾಟದೊಂದಿಗೆ ನಿವೃತ್ತಿಯಾಯಿತು. ನಿವೃತ್ತಿಯ ಸಮಯದಲ್ಲಿ ಸುಮಾರು ಎಂಟು ಸೀ ಕಿಂಗ್ ಬ್ರಾವೋ ಹೆಲಿಕಾಪ್ಟರ್‌ಗಳು ಸೇವೆಯಲ್ಲಿ ಉಳಿದಿದ್ದವು.
ಸಮುದ್ರ ಭದ್ರತೆಯಲ್ಲಿ ಮಹತ್ವದ ಪಾತ್ರ :
ಸೀ ಕಿಂಗ್ Mk 42B ಹೆಲಿಕಾಪ್ಟರ್‌ಗಳು ಜಲಾಂತರ್ಗಾಮಿ ವಿರೋಧಿ ಕಾರ್ಯಾಚರಣೆ (Anti-Submarine Warfare), ಶತ್ರು ನೌಕೆಗಳ ವಿರುದ್ಧದ ಕಾರ್ಯಾಚರಣೆಗಳು (Anti-Ship Missions) ಹಾಗೂ ಶೋಧ ಮತ್ತು ರಕ್ಷಣಾ ಕಾರ್ಯಗಳಲ್ಲಿ (Search and Rescue) ಪ್ರಮುಖ ಪಾತ್ರವಹಿಸಿದ್ದವು. ಇವು ನೌಕಾಪಡೆಯ ಹಡಗುಗಳಿಂದ ಹಾಗೂ ಕರಾವಳಿ ನೆಲೆಗಳಿಂದ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಹೊಂದಿದ್ದವು.
ನೌಕಾಪಡೆಗೆ ಬಲ ತುಂಬಲಿವೆ ಹೊಸ ತಲೆಮಾರಿನ ಹೆಲಿಕಾಪ್ಟರ್‌ಗಳು :
ಸೀ ಕಿಂಗ್ ಹೆಲಿಕಾಪ್ಟರ್‌ಗಳ ಜಾಗವನ್ನು ತುಂಬಲು ಭಾರತೀಯ ನೌಕಾಪಡೆಯು ಈಗಾಗಲೇ 24 MH-60R ಸೀಹಾಕ್ (MH-60R Seahawk) ಹೆಲಿಕಾಪ್ಟರ್‌ಗಳನ್ನು ಖರೀದಿಸಲು ಆದೇಶಿಸಿದೆ. ಇದರೊಂದಿಗೆ ಭಾರತದಲ್ಲೇ ದೇಶೀಯವಾಗಿ ಅಭಿವೃದ್ಧಿಪಡಿಸಲಾಗುತ್ತಿರುವ ಇಂಡಿಯನ್ ಮಲ್ಟಿ ರೋಲ್ ಹೆಲಿಕಾಪ್ಟರ್ (IMRH) ಮತ್ತು ಡೆಕ್ ಬೇಸ್ಡ್ MRH ಯೋಜನೆಗಳು ಪ್ರಸ್ತುತ ಪ್ರಗತಿಯಲ್ಲಿದ್ದು, ಮುಂದಿನ ದಿನಗಳಲ್ಲಿ ನೌಕಾಪಡೆಯ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಲಿವೆ.
ನೌಕಾಪಡೆ ಹೆಲಿಕಾಪ್ಟರ್‌ಗಳು ಸಮುದ್ರ ಮೇಲ್ವಿಚಾರಣೆ, ನೌಕಾಪಡೆ ಬೆಂಬಲ ಹಾಗೂ ರಕ್ಷಣಾ ಕಾರ್ಯಾಚರಣೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ವಿಶೇಷವಾಗಿ ಜಲಾಂತರ್ಗಾಮಿ ವಿರೋಧಿ ಹೆಲಿಕಾಪ್ಟರ್‌ಗಳು ಸುಧಾರಿತ ಸಂವೇದಕಗಳು ಮತ್ತು ಶಸ್ತ್ರಾಸ್ತ್ರಗಳನ್ನು ಬಳಸಿ ಸಮುದ್ರದಡಿ ಕಾರ್ಯನಿರ್ವಹಿಸುವ ಶತ್ರು ಜಲಾಂತರ್ಗಾಮಿಗಳನ್ನು ಪತ್ತೆಹಚ್ಚಿ ನಿಷ್ಕ್ರಿಯಗೊಳಿಸುವ ಸಾಮರ್ಥ್ಯ ಹೊಂದಿರುತ್ತವೆ.

