ಗಗನಯಾನಕ್ಕೆ ಮಹತ್ವದ ಹೆಜ್ಜೆ : ಮುಖ್ಯ ಪ್ಯಾರಾಚೂಟ್ ಯಶಸ್ವಿ ಪರೀಕ್ಷೆ ನಡೆಸಿದ ಇಸ್ರೋ
ಭಾರತದ ಮಹತ್ವಾಕಾಂಕ್ಷಿ ಗಗನಯಾನ (Gaganyaan) ಮಾನವ ಬಾಹ್ಯಾಕಾಶ ಯೋಜನೆಯತ್ತ ಮತ್ತೊಂದು ಮಹತ್ವದ ಹೆಜ್ಜೆ ಇಡಲಾಗಿದ್ದು, ಇಸ್ರೋ (ISRO) ಗಗನಯಾನದ ಕ್ರೂ ಮಾಡ್ಯೂಲ್‌ನ ಮುಖ್ಯ ಪ್ಯಾರಾಚೂಟ್ (Main Parachute) ಅನ್ನು ಯಶಸ್ವಿಯಾಗಿ ಪರೀಕ್ಷಿಸಿದೆ.
ಜುಲೈ 7ರಂದು ಮಧ್ಯಪ್ರದೇಶದ ಶಿಯೋಪುರದಲ್ಲಿರುವ ಏರಿಯಲ್ ಡೆಲಿವರಿ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಎಸ್ಟಾಬ್ಲಿಷ್‌ಮೆಂಟ್ (ADRDE) ಪರೀಕ್ಷಾ ವಲಯದಲ್ಲಿ ಈ ಪರೀಕ್ಷೆ ನಡೆಯಿತು. ಮೊದಲ ಮಾನವರಹಿತ ಗಗನಯಾನ ಮಿಷನ್‌ನಲ್ಲಿ ಎದುರಾಗುವ ಗರಿಷ್ಠ ಭಾರದ ಪರಿಸ್ಥಿತಿಯಲ್ಲೂ ಪ್ಯಾರಾಚೂಟ್‌ನ ಬಲ ಮತ್ತು ವಿಶ್ವಾಸಾರ್ಹತೆಯನ್ನು ಖಚಿತಪಡಿಸಿಕೊಳ್ಳುವುದು ಪರೀಕ್ಷೆಯ ಮುಖ್ಯ ಉದ್ದೇಶವಾಗಿತ್ತು.
ಈ ವೇಳೆ ಭಾರತೀಯ ವಾಯುಪಡೆಯ IL-76 ವಿಮಾನದಿಂದ ಸುಮಾರು 2.5 ಕಿ.ಮೀ. ಎತ್ತರದಲ್ಲಿ ಮುಖ್ಯ ಪ್ಯಾರಾಚೂಟ್ ಮಾದರಿ ಮತ್ತು ಡಮ್ಮಿ ಭಾರವನ್ನು ಕೆಳಗೆ ಬಿಡಲಾಯಿತು. ಮೊದಲಿಗೆ ಡ್ರೋಗ್ ಪ್ಯಾರಾಚೂಟ್ ತೆರೆದು ಕ್ಯಾಪ್ಸುಲ್‌ನ ವೇಗವನ್ನು ಕಡಿಮೆ ಮಾಡಿತು. ಬಳಿಕ ಮುಖ್ಯ ಪ್ಯಾರಾಚೂಟ್ ಕಾರ್ಯನಿರ್ವಹಿಸಿ ಸುರಕ್ಷಿತ ವೇಗದಲ್ಲಿ ಇಳಿಯುವಂತೆ ಮಾಡಿತು.
ಈ ಪರೀಕ್ಷೆಯನ್ನು ಇಸ್ರೋ, ಡಿಆರ್‌ಡಿಒ (DRDO-Defence Research and Development Organisation ), ಭಾರತೀಯ ವಾಯುಪಡೆ ಹಾಗೂ ಭಾರತೀಯ ಸೇನೆ ಜಂಟಿಯಾಗಿ ಯಶಸ್ವಿಯಾಗಿ ನಡೆಸಿವೆ. ಇದು ಇಂಟಿಗ್ರೇಟೆಡ್ ಮೇನ್ ಪ್ಯಾರಾಚೂಟ್ ಏರ್‌ಡ್ರಾಪ್ ಟೆಸ್ಟ್ (IMAT-integrated main parachute airdrop tests) ಸರಣಿಯ ಐದನೇ ಪರೀಕ್ಷೆಯಾಗಿದ್ದು, ಮೊದಲ ಮಾನವರಹಿತ ಗಗನಯಾನ ಮಿಷನ್‌ಗೆ ಮುಖ್ಯ ಪ್ಯಾರಾಚೂಟ್ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನು ಮತ್ತಷ್ಟು ದೃಢಪಡಿಸಿದೆ.
ಗಗನಯಾನ ಮಿಷನ್ ಬಗ್ಗೆ :
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2018ರ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಗಗನಯಾನ ಯೋಜನೆಯನ್ನು ಘೋಷಿಸಿದ್ದರು. ಈ ಯೋಜನೆಯಡಿ ಮೂವರು ಗಗನಯಾತ್ರಿಗಳನ್ನು 400 ಕಿ.ಮೀ. ಎತ್ತರದ ಕಕ್ಷೆಗೆ ಕಳುಹಿಸಿ, ಮೂರು ದಿನಗಳ ಬಳಿಕ ಸುರಕ್ಷಿತವಾಗಿ ಭಾರತದ ಸಮುದ್ರ ಪ್ರದೇಶದಲ್ಲಿ ಇಳಿಸುವ ಗುರಿ ಹೊಂದಲಾಗಿದೆ.
ಯೋಜನೆಯಡಿ ಒಟ್ಟು ಮೂರು ಮಾನವರಹಿತ ಮಿಷನ್‌ಗಳು ಮತ್ತು ಒಂದು ಮಾನವಸಹಿತ ಮಿಷನ್ ಕೈಗೊಳ್ಳಲಾಗುತ್ತದೆ. ಮೊದಲ ಮಾನವರಹಿತ ಮಿಷನ್‌ನಲ್ಲಿ ವ್ಯೋಮಮಿತ್ರ (Vyommitra) ಎಂಬ ಮಾನವಾಕಾರದ ರೋಬೋಟ್‌ನ್ನು ಕಳುಹಿಸುವ ಯೋಜನೆ ಇದೆ. ಮೊದಲ ಮಾನವಸಹಿತ ಗಗನಯಾನ ಮಿಷನ್ 2027–28ರ ವೇಳೆಗೆ ಉಡಾವಣೆಯಾಗುವ ಗುರಿ ಹೊಂದಿದೆ.
ಗಗನಯಾನ ಯೋಜನೆಗಾಗಿ ಕೇಂದ್ರ ಸರ್ಕಾರ ₹9,023 ಕೋಟಿ ಅನುದಾನ ಮೀಸಲಿಟ್ಟಿದ್ದು, ಉಡಾವಣಾ ವಾಹಕ, ಕ್ರೂ ಮಾಡ್ಯೂಲ್, ಜೀವಸಹಾಯಕ ವ್ಯವಸ್ಥೆ, ಕ್ರೂ ಎಸ್ಕೇಪ್ ಸಿಸ್ಟಮ್, ತರಬೇತಿ ಮತ್ತು ಮರುಪಡೆಯುವಿಕೆ ಸೇರಿದಂತೆ ಅಗತ್ಯ ತಂತ್ರಜ್ಞಾನಗಳನ್ನು ಇಸ್ರೋ ಸ್ವದೇಶೀಯವಾಗಿ ಅಭಿವೃದ್ಧಿಪಡಿಸಿದೆ. ಈ ಯಶಸ್ವಿ ಪ್ಯಾರಾಚೂಟ್ ಪರೀಕ್ಷೆಯು ಭಾರತದ ಮೊದಲ ಮಾನವ ಬಾಹ್ಯಾಕಾಶ ಯಾನವನ್ನು ಯಶಸ್ವಿಗೊಳಿಸುವತ್ತ ಮಹತ್ವದ ಮೈಲಿಗಲ್ಲಾಗಿದೆ.
| EXAM NOTES : ✶ಗಗನಯಾನ ಭಾರತದ ಮೊದಲ ಮಾನವ ಬಾಹ್ಯಾಕಾಶ ಯಾನ ಯೋಜನೆಯಾಗಿದೆ. ✶ಗಗನಯಾನದ ಮುಖ್ಯ ಪ್ಯಾರಾಚೂಟ್ ಪರೀಕ್ಷೆಯನ್ನು ISRO ಯಶಸ್ವಿಯಾಗಿ ನಡೆಸಿದೆ. ಪರೀಕ್ಷೆ 2026ರ ಜುಲೈ 7ರಂದು ನಡೆಯಿತು.ಪರೀಕ್ಷೆಯ ಸ್ಥಳ ಶಿಯೋಪುರ (Sheopur), ಮಧ್ಯಪ್ರದೇಶ. ✶ಗಗನಯಾನದ ಕ್ರೂ ಮಾಡ್ಯೂಲ್‌ನಲ್ಲಿ ಒಟ್ಟು 10 ಪ್ಯಾರಾಚೂಟ್‌ಗಳಿವೆ. ✶ಗಗನಯಾನ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು 2018ರಲ್ಲಿ ಘೋಷಿಸಿದರು. ✶ಮಿಷನ್‌ನ ಗುರಿ 3 ಗಗನಯಾತ್ರಿಗಳನ್ನು 400 ಕಿ.ಮೀ. ಕಕ್ಷೆಗೆ ಕಳುಹಿಸುವುದು. ಮಿಷನ್‌ನ ಅವಧಿ 3 ದಿನಗಳು. ✶ಗಗನಯಾನ ಯೋಜನೆಯ ಒಟ್ಟು ವೆಚ್ಚ ₹9,023 ಕೋಟಿ. ✶ಮೊದಲ ಮಾನವರಹಿತ ಮಿಷನ್‌ನಲ್ಲಿ ವ್ಯೋಮಮಿತ್ರ (Vyommitra) ಹ್ಯೂಮನಾಯ್ಡ್ ರೋಬೋಟ್ ಹಾರಾಟ ನಡೆಸಲಿದೆ. ✶ಗಗನಯಾನ ಕಾರ್ಯಕ್ರಮದಲ್ಲಿ 3 ಮಾನವರಹಿತ ಮತ್ತು 1 ಮಾನವಸಹಿತ ಮಿಷನ್ ಸೇರಿವೆ. ಮೊದಲ ಮಾನವಸಹಿತ ಗಗನಯಾನ ಮಿಷನ್‌ನ ಗುರಿ 2027–28. |

