ಕರ್ನಾಟಕದಲ್ಲಿ ಶಾಲಾ ಸಿಬ್ಬಂದಿ ಹಾಜರಾತಿಗೆ ‘ಕರ್ತವ್ಯ-KAAMS’ ಆ್ಯಪ್ ಜಾರಿ
Current AffairsLatest Updates

ಕರ್ನಾಟಕದಲ್ಲಿ ಶಾಲಾ ಸಿಬ್ಬಂದಿ ಹಾಜರಾತಿಗೆ ‘ಕರ್ತವ್ಯ-KAAMS’ ಆ್ಯಪ್ ಜಾರಿ

Share With Friends

ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ 2026ರ ಏಪ್ರಿಲ್ 27ರಂದು ಹೊರಡಿಸಿದ ಸರ್ಕ್ಯುಲರ್ ಮೂಲಕ “ಕರ್ನಾಟಕ ಅಡ್ವಾನ್ಸ್ಡ್ ಅಟೆಂಡನ್ಸ್ ಮ್ಯಾನೇಜ್‌ಮೆಂಟ್ ಸಿಸ್ಟಂ” (KAAMS – Karnataka Advanced Attendance Management System) ಅಥವಾ “ಕರ್ತವ್ಯ-KAAMS” ಮೊಬೈಲ್ ಆ್ಯಪ್ ಅನ್ನು ಪರಿಚಯಿಸಿದೆ. ಈ ಹೊಸ ವ್ಯವಸ್ಥೆಯನ್ನು ಸರ್ಕಾರಿ ಶಿಕ್ಷಣ ಸಂಸ್ಥೆಗಳು ಹಾಗೂ ಕಚೇರಿಗಳಲ್ಲಿ ಕಾರ್ಯನಿರ್ವಹಿಸುವ ಶಾಶ್ವತ ಶಿಕ್ಷಕರು, ಮುಖ್ಯ ಶಿಕ್ಷಕರು, ಸಮಾನ ಹುದ್ದೆಯ ಅಧಿಕಾರಿಗಳು ಮತ್ತು ಬೋಧಕೇತರ ಸಿಬ್ಬಂದಿಯ ಹಾಜರಾತಿ ಮೇಲ್ವಿಚಾರಣೆಗೆ ರೂಪಿಸಲಾಗಿದೆ.

ಯಾವ ಇಲಾಖೆ ಅಭಿವೃದ್ಧಿಪಡಿಸಿದೆ..?
ಈ ಆ್ಯಪ್ ಅನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (e-Governance) ಅಭಿವೃದ್ಧಿಪಡಿಸಿದೆ. ಆರೋಗ್ಯ, ಶಿಕ್ಷಣ ಇಲಾಖೆ ಹಾಗೂ ವಿಧಾನಸಭಾ ಕಾರ್ಯಾಲಯ ಸೇರಿದಂತೆ ಹಲವು ಇಲಾಖೆಗಳಲ್ಲೂ ಈಗಾಗಲೇ ಪೈಲಟ್ ಯೋಜನೆಯಾಗಿ ಪರೀಕ್ಷಿಸಲಾಗಿದೆ.

KAAMS ಆ್ಯಪ್‌ನ ಪ್ರಮುಖ ವೈಶಿಷ್ಟ್ಯಗಳು :
*ಕರ್ತವ್ಯ-KAAMS ಆ್ಯಪ್‌ನಲ್ಲಿ ಕೃತಕ ಬುದ್ಧಿಮತ್ತೆ (Artificial Intelligence), ಫೇಷಿಯಲ್ ರೆಕಗ್ನಿಷನ್ (Facial Recognition) ಮತ್ತು ಜಿಯೋ-ಫೆನ್ಸಿಂಗ್ (Geo-Fencing) ತಂತ್ರಜ್ಞಾನಗಳನ್ನು ಬಳಸಲಾಗಿದೆ.
*ಸಿಬ್ಬಂದಿ ತಮ್ಮ ಅಧಿಕೃತ ವಿವರಗಳೊಂದಿಗೆ ನೋಂದಣಿ ಮಾಡಿಕೊಳ್ಳಬೇಕು.
*ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ (HRMS)ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯನ್ನು ದೃಢೀಕರಿಸಿ, ಮುಖ ಗುರುತಿನ ದೃಢೀಕರಣ ಪೂರ್ಣಗೊಳಿಸಿ, ಲೊಕೇಶನ್ ಅನುಮತಿಯನ್ನು ಸಕ್ರಿಯಗೊಳಿಸಬೇಕಾಗಿದೆ.

ಹಾಜರಾತಿ ದಾಖಲಿಸುವ ವಿಧಾನ :
ಈ ಆ್ಯಪ್ ಮೂಲಕ ಸಿಬ್ಬಂದಿ ದಿನಕ್ಕೆ ಎರಡು ಬಾರಿ ಹಾಜರಾತಿ ದಾಖಲಿಸಬೇಕಾಗುತ್ತದೆ. ಕರ್ತವ್ಯ ಸ್ಥಳದಲ್ಲೇ “In Time” ಹಾಜರಾತಿ ಮತ್ತು ಕಾರ್ಯ ಮುಗಿಸಿ ಹೊರಡುವ ಮುನ್ನ “Out Time” ಹಾಜರಾತಿ ನಮೂದಿಸಬೇಕು. ಜಿಯೋ-ಫೆನ್ಸಿಂಗ್ ತಂತ್ರಜ್ಞಾನದಿಂದ ಅಧಿಕೃತ ಕಾರ್ಯಸ್ಥಳದ ಹೊರಗೆ ಹಾಜರಾತಿ ದಾಖಲಿಸಲು ಸಾಧ್ಯವಾಗುವುದಿಲ್ಲ.

*ಮುಖ ಚಹರೆ ಗುರುತಿಸುವ ತಂತ್ರಜ್ಞಾನ:
ಈ ಆಪ್ ಕೃತಕ ಬುದ್ಧಿಮತ್ತೆ (AI) ಮತ್ತು ಜಿಪಿಎಸ್ (GPS) ಆಧಾರಿತವಾಗಿದ್ದು, ಶಿಕ್ಷಕರು ತಮ್ಮ ಕೆಲಸದ ಸ್ಥಳದಲ್ಲಿ ನಿಂತು ಮುಖ ಚಹರೆ (Face Recognition) ಮೂಲಕ ಹಾಜರಾತಿ ನೀಡಬೇಕು.

*ಯಾರಿಗೆ ಅನ್ವಯ..?:
ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು, ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಣ ಇಲಾಖೆಯ ಕಚೇರಿಗಳಲ್ಲಿ ಕಾರ್ಯನಿರ್ವಹಿಸುವ ಬೋಧಕೇತರ ಸಿಬ್ಬಂದಿಗೆ ಇದು ಅನ್ವಯಿಸುತ್ತದೆ.

*ದಿನಕ್ಕೆರಡು ಬಾರಿ ಹಾಜರಾತಿ:
ಶಿಕ್ಷಕರು ಪ್ರತಿದಿನ ಶಾಲೆಗೆ ಬರುವಾಗ (In-Time) ಮತ್ತು ಶಾಲೆಯಿಂದ ಬಿಡುವಾಗ (Out-Time) ಹೀಗೆ ಎರಡು ಬಾರಿ ಆಪ್ನಲ್ಲಿ ಹಾಜರಾತಿ ದಾಖಲಿಸಬೇಕು.

*ತರಬೇತಿ ಮತ್ತು ಮೌಲ್ಯಮಾಪನಕ್ಕೂ ಅನ್ವಯ:
ಕೇವಲ ಶಾಲೆಗಳಲ್ಲದೆ, ಶಿಕ್ಷಕರು ತರಬೇತಿ ಶಿಬಿರಗಳಲ್ಲಿ ಅಥವಾ 10ನೇ ತರಗತಿ ಮೌಲ್ಯಮಾಪನ ಕೇಂದ್ರಗಳಲ್ಲಿ ಇದ್ದಾಗಲೂ ಇದೇ ಆಪ್ ಮೂಲಕ ಹಾಜರಾತಿ ನೀಡಬೇಕಾಗುತ್ತದೆ.

*ವೇತನಕ್ಕೆ ಹಾಜರಾತಿಯೇ ಆಧಾರ:
ಮುಂದಿನ ದಿನಗಳಲ್ಲಿ ಈ ‘ಕರ್ತವ್ಯ’ ಆಪ್ ಮೂಲಕ ದಾಖಲಾಗುವ ಹಾಜರಾತಿಯನ್ನು ಆಧರಿಸಿಯೇ ಶಿಕ್ಷಕರ ವೇತನ ಪ್ರಕ್ರಿಯೆಯನ್ನು ನಡೆಸಲಾಗುವುದು ಎಂದು ಇಲಾಖೆ ಸ್ಪಷ್ಟಪಡಿಸಿದೆ. ಈ ಆಪ್ ಅನ್ನು HRMS ಮತ್ತು SATS ತಂತ್ರಾಂಶಗಳೊಂದಿಗೆ ಜೋಡಿಸಲಾಗುವುದು.

2026-27 ಶೈಕ್ಷಣಿಕ ವರ್ಷದಿಂದ ಜಾರಿ
ಈ ವ್ಯವಸ್ಥೆಯನ್ನು 2026-27ನೇ ಶೈಕ್ಷಣಿಕ ವರ್ಷದಿಂದ ಜಾರಿಗೆ ತರಲಾಗಿದ್ದು, 2026ರ ಮೇ 1ರಿಂದ ಹಳೆಯ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬದಲಿಸಲಾಗಿದೆ. ಸರ್ಕಾರದ ವಿವಿಧ ಇಲಾಖೆಗಳು, ಮಂಡಳಿಗಳು ಹಾಗೂ ನಿಗಮಗಳಲ್ಲಿಯೂ ಈ ವ್ಯವಸ್ಥೆಯನ್ನು ಅನ್ವಯಿಸಲಾಗುತ್ತಿದೆ.

HRMS ಹಾಗೂ SATS ಜತೆ ಸಂಪರ್ಕ
ಕರ್ತವ್ಯ-KAAMS ವ್ಯವಸ್ಥೆ ಹಾಜರಾತಿ ಮಾಹಿತಿಯನ್ನು ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ (HRMS) ಮತ್ತು ವಿದ್ಯಾರ್ಥಿಗಳ ಸಾಧನೆ ಟ್ರ್ಯಾಕಿಂಗ್ ವ್ಯವಸ್ಥೆ (SATS) ಜತೆ ಸಂಪರ್ಕಿಸುತ್ತದೆ. ಸಿಬ್ಬಂದಿ ಹಾಜರಾತಿ, ಆಡಳಿತಾತ್ಮಕ ಕಾರ್ಯಕ್ಷಮತೆ ಮತ್ತು ಡಿಜಿಟಲ್ ಮೇಲ್ವಿಚಾರಣೆಯನ್ನು ಸುಧಾರಿಸುವ ಉದ್ದೇಶದಿಂದ ಈ ವ್ಯವಸ್ಥೆ ಅಭಿವೃದ್ಧಿಪಡಿಸಲಾಗಿದೆ.


error: Content Copyright protected !!