ಭಾರತದ ನೂತನ CDS ಆಗಿ ಲೆಫ್ಟಿನೆಂಟ್ ಜನರಲ್ ಎನ್.ಎಸ್. ರಾಜಾ ಸುಬ್ರಮಣಿ ನೇಮಕ
Current AffairsLatest Updates

ಭಾರತದ ನೂತನ CDS ಆಗಿ ಲೆಫ್ಟಿನೆಂಟ್ ಜನರಲ್ ಎನ್.ಎಸ್. ರಾಜಾ ಸುಬ್ರಮಣಿ ನೇಮಕ

Share With Friends

ಭಾರತೀಯ ಸೇನೆಯ ಅನುಭವಿ ಅಧಿಕಾರಿ ಲೆಫ್ಟಿನೆಂಟ್ ಜನರಲ್ ಎನ್.ಎಸ್. ರಾಜ ಸುಬ್ರಮಣಿ (N. S. Raja Subramani ) ಅವರನ್ನು ಭಾರತದ ಮುಂದಿನ ರಕ್ಷಣಾ ಪಡೆಗಳ ಮುಖ್ಯಸ್ಥ (Chief of Defence Staff – CDS -ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ) ಆಗಿ ಕೇಂದ್ರ ಸರ್ಕಾರ ಶನಿವಾರ (ಮೇ 9, 2026) ನೇಮಕ ಮಾಡಿದೆ.

ಪ್ರಸ್ತುತ ಸಿಡಿಎಸ್ ಆಗಿರುವ ಜನರಲ್ ಅನಿಲ್ ಚೌಹಾಣ್ (Anil Chauhan) ಅವರ ಅಧಿಕಾರಾವಧಿಯು ಮೇ 30, 2026 ರಂದು ಮುಕ್ತಾಯಗೊಳ್ಳಲಿದ್ದು, ಅವರ ನಂತರ ಸುಬ್ರಮಣಿ ಅವರು ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಸುಬ್ರಮಣಿ ಅವರು ಹುದ್ದೆ ಸ್ವೀಕರಿಸಿದ ದಿನಾಂಕದಿಂದಲೇ ಹೆಚ್ಚುವರಿ ಜವಾಬ್ದಾರಿಯಾಗಿ ಭಾರತ ಸರ್ಕಾರದ ಡಿಪಾರ್ಟ್‌ಮೆಂಟ್ ಆಫ್ ಮಿಲಿಟರಿ ಅಫೇರ್ಸ್‌ನ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಲಿದ್ದಾರೆ.

ಇದೇ ಸಂದರ್ಭದಲ್ಲಿ ಸರ್ಕಾರವು ವೈಸ್ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್ ಅವರನ್ನು ಭಾರತದ ಮುಂದಿನ ನೌಕಾಪಡೆಯ ಮುಖ್ಯಸ್ಥರನ್ನಾಗಿ ನೇಮಿಸಿದೆ. ಅವರು ಮೇ 31 ರಂದು ಅಡ್ಮಿರಲ್ ದಿನೇಶ್ ಕೆ. ತ್ರಿಪಾಠಿ ಅವರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

2021ರಲ್ಲಿ ಹೆಲಿಕಾಪ್ಟರ್ ದುರಂತದಲ್ಲಿ ಜನರಲ್ ಬಿಪಿನ್ ರಾವತ್ ಮೃತಪಟ್ಟ ಬಳಿಕ ಈ ಹುದ್ದೆ ಖಾಲಿಯಾಗಿತ್ತು. ನಂತರ 2022ರ ಸೆಪ್ಟೆಂಬರ್‌ನಲ್ಲಿ ಜನರಲ್ ಅನಿಲ್ ಚೌಹಾನ್ CDS ಆಗಿ ಅಧಿಕಾರ ಸ್ವೀಕರಿಸಿದ್ದರು.

ಇದನ್ನೂ ಓದಿ : ಸೇನಾ ಸಿಬ್ಬಂದಿ ಮುಖ್ಯಸ್ಥ (Chief of Defence Staff)

ಯಾರು ಲೆ. ಜನರಲ್ ಎನ್.ಎಸ್. ರಾಜಾ ಸುಬ್ರಮಣಿ..?
40 ವರ್ಷಕ್ಕೂ ಅಧಿಕ ಸೈನಿಕ ಸೇವಾ ಅನುಭವ ಹೊಂದಿರುವ ಲೆ. ಜನರಲ್ ರಾಜಾ ಸುಬ್ರಮಣಿ ವಿವಿಧ ಸಂಘರ್ಷ ಪ್ರದೇಶಗಳು ಹಾಗೂ ಕಠಿಣ ಭೌಗೋಳಿಕ ಪರಿಸ್ಥಿತಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಎನ್‌ಡಿಎ (NDA) ಮತ್ತು ಐಎಂಎ (IMA) ಪದವೀಧರರಾಗಿದ್ದು, ಲಂಡನ್‌ನ ಕಿಂಗ್ಸ್ ಕಾಲೇಜ್‌ನಿಂದ ಎಂ.ಎ ಪದವಿ ಪಡೆದಿದ್ದಾರೆ. ಅವರ ಅತ್ಯುತ್ತಮ ಸೇವೆಗಾಗಿ ಪರಮ ವಿಶಿಷ್ಟ ಸೇವಾ ಪದಕ (PVSM) ಸೇರಿದಂತೆ ಹಲವು ಉನ್ನತ ಸೇನಾ ಗೌರವಗಳಿಗೆ ಪಾತ್ರರಾಗಿದ್ದಾರೆ. ಪ್ರಸ್ತುತ ಅವರು ರಾಷ್ಟ್ರೀಯ ಭದ್ರತಾ ಮಂಡಳಿ ಕಾರ್ಯಾಲಯದಲ್ಲಿ (NSCS) ಮಿಲಿಟರಿ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಅವರು 2024ರ ಜುಲೈ 1ರಿಂದ 2025ರ ಜುಲೈ 31ರವರೆಗೆ ಉಪ ಸೇನಾ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. ಇದಕ್ಕೂ ಮೊದಲು 2023ರಿಂದ 2024ರವರೆಗೆ ಸೆಂಟ್ರಲ್ ಕಮಾಂಡ್‌ನ ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಆಗಿದ್ದರು.

National Defence Academy ಹಾಗೂ Indian Military Academy ಪದವೀಧರರಾಗಿರುವ ಅವರು 1985ರ ಡಿಸೆಂಬರ್ 14ರಂದು ಗಢ್ವಾಲ್ ರೈಫಲ್ಸ್‌ನ 8ನೇ ಬ್ಯಾಟಲಿಯನ್‌ಗೆ ನಿಯೋಜಿತರಾಗಿದ್ದರು.

ಅವರು ಬ್ರಿಟನ್‌ನ ಜಾಯಿಂಟ್ ಸರ್ವಿಸಸ್ ಕಮಾಂಡ್ ಅಂಡ್ ಸ್ಟಾಫ್ ಕಾಲೇಜು ಹಾಗೂ ನವದೆಹಲಿಯ ನ್ಯಾಷನಲ್ ಡಿಫೆನ್ಸ್ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿದ್ದಾರೆ. ಲಂಡನ್‌ನ King’s College London ನಿಂದ ಎಂ.ಎ ಪದವಿ ಹಾಗೂ University of Madras ನಿಂದ ರಕ್ಷಣಾ ಅಧ್ಯಯನದಲ್ಲಿ ಎಂಫಿಲ್ ಪದವಿಯನ್ನು ಪಡೆದಿದ್ದಾರೆ.

ಅಸ್ಸಾಂನಲ್ಲಿ ‘ಆಪರೇಶನ್ ರೈನೋ’ (Operation Rhino)ವೇಳೆ ಕೌಂಟರ್ ಇನ್ಸರ್ಜೆನ್ಸಿ ಕಾರ್ಯಾಚರಣೆಗಳಲ್ಲಿ 16 ಗಢ್ವಾಲ್ ರೈಫಲ್ಸ್‌ಗೆ ನಾಯಕತ್ವ ವಹಿಸಿದ್ದ ಅವರು, ಜಮ್ಮು-ಕಾಶ್ಮೀರದಲ್ಲಿ 168 ಇನ್ಫ್ಯಾಂಟ್ರಿ ಬ್ರಿಗೇಡ್ ಮತ್ತು ಸೆಂಟ್ರಲ್ ಸೆಕ್ಟರ್‌ನಲ್ಲಿ 17 ಮೌಂಟನ್ ಡಿವಿಷನ್‌ನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು.

ಪಶ್ಚಿಮ ಗಡಿಯಲ್ಲಿ ಭಾರತೀಯ ಸೇನೆಯ ಪ್ರಮುಖ ಸ್ಟ್ರೈಕ್ ಕಾರ್ಪ್ಸ್ ಸೇರಿದಂತೆ ಎರಡು ಕಾರ್ಪ್ಸ್‌ಗಳಿಗೆ ಕಮಾಂಡ್ ನೀಡಿದ ಅನುಭವವೂ ಅವರಿಗೆ ಇದೆ. ಅವರ ವಿಶಿಷ್ಟ ಸೇವೆಗೆ ಪರಂ ವಿಶಿಷ್ಟ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ, ಸೇನಾ ಪದಕ ಹಾಗೂ ವಿಶಿಷ್ಟ ಸೇವಾ ಪದಕಗಳನ್ನು ನೀಡಿ ಗೌರವಿಸಲಾಗಿದೆ.

ಗೌರವ ಮತ್ತು ಪ್ರಶಸ್ತಿಗಳು:
ಅವರ ಅತ್ಯುತ್ತಮ ಸೇವೆಗಾಗಿ ಅವರಿಗೆ ಪರಮ ವಿಶಿಷ್ಟ ಸೇವಾ ಪದಕ (PVSM), ಅತಿ ವಿಶಿಷ್ಟ ಸೇವಾ ಪದಕ (AVSM), ಸೇನಾ ಪದಕ (SM) ಮತ್ತು ವಿಶಿಷ್ಟ ಸೇವಾ ಪದಕ (VSM) ಗಳನ್ನು ನೀಡಿ ಗೌರವಿಸಲಾಗಿದೆ.

CDS ಹುದ್ದೆ ಬಗ್ಗೆ :
CDS ಹುದ್ದೆಯನ್ನು ಭಾರತದಲ್ಲಿ 2019ರಲ್ಲಿ ಸ್ಥಾಪಿಸಲಾಯಿತು. ದೇಶದ ಮೊದಲ CDS ಆಗಿ ಜನರಲ್ ಬಿಪಿನ್ ರಾವತ್ ಸೇವೆ ಸಲ್ಲಿಸಿದ್ದರು. Chief of Defence Staff (CDS) ಎಂಬುದು ಭಾರತೀಯ ಸಶಸ್ತ್ರ ಪಡೆಗಳ ಅತ್ಯುನ್ನತ ಸೇನಾ ಹುದ್ದೆಯಾಗಿದೆ. ಸೇನೆ, ನೌಕಾಪಡೆ ಮತ್ತು ವಾಯುಪಡೆಯ ನಡುವಿನ ಸಮನ್ವಯವನ್ನು ಬಲಪಡಿಸುವುದು CDS ಹುದ್ದೆಯ ಮುಖ್ಯ ಜವಾಬ್ದಾರಿಯಾಗಿದೆ.

ಇದನ್ನೂ ಓದಿ : ಭಾರತೀಯ ಸೇನೆಗೆ ಸಂಬಂಧಿಸಿದ ಪ್ರಮುಖ 20 ಪ್ರಶ್ನೆಗಳ ಸಂಗ್ರಹ

ಭಾರತದ ಮೊದಲ CDS ಬಿಪಿನ್ ರಾವತ್ (Bipin Rawat) :
ಭಾರತದ ಮೊದಲ Chief of Defence Staff (CDS) ಆಗಿ ಜನರಲ್ ಬಿಪಿನ್ ರಾವತ್ ಅವರು ನೇಮಕಗೊಂಡಿದ್ದರು. ಅವರು 1 ಜನವರಿ 2020ರಂದು ಭಾರತದ ಮೊದಲ CDS ಆಗಿ ಅಧಿಕಾರ ಸ್ವೀಕರಿಸಿದರು. CDS ಹುದ್ದೆಯನ್ನು ಮೂರು ಸೇನಾ ಪಡೆಗಳ ಸಮನ್ವಯ ಮತ್ತು ರಾಷ್ಟ್ರೀಯ ಭದ್ರತೆಯನ್ನು ಬಲಪಡಿಸುವ ಉದ್ದೇಶದಿಂದ ಭಾರತ ಸರ್ಕಾರ ಸ್ಥಾಪಿಸಿತು. ಜನರಲ್ ಬಿಪಿನ್ ರಾವತ್ ಅವರು 8 ಡಿಸೆಂಬರ್ 2021ರಂದು ತಮಿಳುನಾಡಿನ ಕೂನೂರಿನ ಸಮೀಪ ಸಂಭವಿಸಿದ ಭಾರತೀಯ ವಾಯುಪಡೆಯ Mi-17V5 ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟರು.

ಈ ದುರ್ಘಟನೆಯಲ್ಲಿ ಅವರ ಪತ್ನಿ ಮಧುಲಿಕಾ ರಾವತ್ ಸೇರಿದಂತೆ ಹಲವಾರು ಸೇನಾ ಅಧಿಕಾರಿಗಳೂ ಸಾವನ್ನಪ್ಪಿದರು. ಜನರಲ್ ಬಿಪಿನ್ ರಾವತ್ ಅವರ ನಿಧನ ದೇಶದ ರಕ್ಷಣಾ ಕ್ಷೇತ್ರಕ್ಕೆ ದೊಡ್ಡ ನಷ್ಟವೆಂದು ಪರಿಗಣಿಸಲಾಯಿತು.

ಪ್ರಮುಖ ಜವಾಬ್ದಾರಿಗಳು :
*ಮೂರು ಸೇನಾ ಪಡೆಗಳ ನಡುವಿನ ಸಮನ್ವಯ
*ರಾಷ್ಟ್ರೀಯ ಭದ್ರತಾ ಸಲಹೆಗಳಲ್ಲಿ ಸರ್ಕಾರಕ್ಕೆ ಮಾರ್ಗದರ್ಶನ
*ಆಧುನಿಕ ಸೇನಾ ಸುಧಾರಣೆಗಳ ಜಾರಿಗೆ ಸಹಕಾರ
*Department of Military Affairs ಕಾರ್ಯಾಚರಣೆಯ ಮೇಲ್ವಿಚಾರಣೆ

ನಿಗದಿತ CDS ಸೇವಾವಧಿ ಇಲ್ಲ :
ಮೂರು ಸೇನಾ ಮುಖ್ಯಸ್ಥರ ಗರಿಷ್ಠ ವಯೋಮಿತಿ 62 ವರ್ಷಗಳಾಗಿದ್ದರೂ, CDS ಹುದ್ದೆಗೆ 65 ವರ್ಷಗಳವರೆಗೆ ಸೇವೆ ಸಲ್ಲಿಸಲು ಅವಕಾಶವಿದೆ. ಈ ಹುದ್ದೆಗೆ ನಿಗದಿತ ಅವಧಿ ಇರುವುದಿಲ್ಲ.

#LtGenNSRajaSubramani, #ChiefofDefenceStaff,


error: Content Copyright protected !!