ಜೂನ್ 1ರಿಂದ ಹೊಸ ವಲಸೆ ಮತ್ತು ವಿದೇಶಿಗರ ನೋಂದಣಿ ನಿಯಮಗಳು ಜಾರಿ
Current AffairsLatest Updates

ಜೂನ್ 1ರಿಂದ ಹೊಸ ವಲಸೆ ಮತ್ತು ವಿದೇಶಿಗರ ನೋಂದಣಿ ನಿಯಮಗಳು ಜಾರಿ

Share With Friends

ಕೇಂದ್ರ ಗೃಹ ಸಚಿವಾಲಯವು (MHA) 2025ರ ವಲಸೆ ಮತ್ತು ವಿದೇಶಿಗರ (Immigration and Foreigners Rules, 2025) ನಿಯಮಗಳಲ್ಲಿ ಮಹತ್ವದ ತಿದ್ದುಪಡಿಗಳನ್ನು ಪ್ರಕಟಿಸಿದ್ದು, ಅವು 2026ರ ಜೂನ್ 1ರಿಂದ ಜಾರಿಗೆ ಬಂದಿವೆ.

ಈ ಹೊಸ ತಿದ್ದುಪಡಿಯ ಮೂಲಕ 2025ರ ಮೂಲ ವಲಸೆ ಮತ್ತು ವಿದೇಶಿಗರ ನಿಯಮಗಳಲ್ಲಿದ್ದ ನೋಂದಣಿ ಅವಧಿ ಹಾಗೂ ಮೇಲ್ಮನವಿ ಸಲ್ಲಿಕೆಯ ನಿಯಮಾವಳಿಗಳಲ್ಲಿ ಪ್ರಮುಖ ಬದಲಾವಣೆಗಳನ್ನು ತರಲಾಗಿದ್ದು, ವಿದೇಶಿ ನಾಗರಿಕರಿಗೆ ಹೆಚ್ಚಿನ ನಮ್ಯತೆ (Flexibility) ನೀಡಲಾಗಿದೆ.

ಹೊಸ ನಿಯಮಗಳ ಪ್ರಕಾರ ವಿದೇಶಿ ವೀಸಾ ಹೊಂದಿರುವವರ ನೋಂದಣಿ ಅವಧಿ, ವಿದೇಶಿ ಪೋಷಕರಿಗೆ ಜನಿಸುವ ಮಕ್ಕಳ ಮಾಹಿತಿ ನೀಡುವ ವಿಧಾನ ಹಾಗೂ ಆಸ್ಪತ್ರೆಗಳ ವರದಿ ಸಲ್ಲಿಕೆ ಕುರಿತಂತೆ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ.

ಈ ತಿದ್ದುಪಡಿಗಳ ಮೂಲಕ ಭಾರತದಲ್ಲಿರುವ ವಿದೇಶಿಗರ ನೋಂದಣಿ ಮತ್ತು ಮೇಲ್ವಿಚಾರಣಾ ವ್ಯವಸ್ಥೆಯನ್ನು ಇನ್ನಷ್ಟು ಕಟ್ಟುನಿಟ್ಟಾಗಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

ಹಳೆಯ ನಿಯಮ ಏನಿತ್ತು..?:ಈಗಿನ ಬದಲಾವಣೆ ಏನು..?
ಈ ಹಿಂದಿನ ನಿಯಮದ ಪ್ರಕಾರ, ವಿದೇಶಿಗರು ಭಾರತಕ್ಕೆ ಆಗಮಿಸಿದ ನಂತರ 180 ದಿನಗಳು ಪೂರ್ಣಗೊಂಡ ಬಳಿಕ ಮುಂದಿನ 14 ದಿನಗಳ ಒಳಗಾಗಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕಾಗಿತ್ತು.ಆ ಕಟ್ಟುನಿಟ್ಟಿನ ನಿಯಮವನ್ನು ಸಡಿಲಗೊಳಿಸಲಾಗಿದ್ದು, 180 ದಿನಗಳ ಒಳಗಾಗಿ ಯಾವಾಗ ಬೇಕಿದ್ದರೂ ನೋಂದಣಿ ಮಾಡಿಕೊಳ್ಳಬಹುದು. ಆದರೆ, ಈ 180 ದಿನಗಳ ಮಿತಿ ಮೀರಿದ ನಂತರದ ತಡವಾದ ನೋಂದಣಿಗೆ ಕೇವಲ “ತುರ್ತು ಅಥವಾ ವಿಶೇಷ ಸಂದರ್ಭಗಳಲ್ಲಿ” ಮಾತ್ರ ಅನುಮತಿ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ವೀಸಾ ಹೊಂದಿರುವ ವಿದೇಶಿಗರಿಗೆ ಹೊಸ ನೋಂದಣಿ ನಿಯಮ :
180 ದಿನಗಳ ಅಥವಾ ಅದಕ್ಕಿಂತ ಕಡಿಮೆ ಅವಧಿಗೆ ಮಾನ್ಯವಾಗಿರುವ ವೀಸಾದೊಂದಿಗೆ ಭಾರತಕ್ಕೆ ಬರುವ ವಿದೇಶಿಗರು 180 ದಿನಗಳಿಗಿಂತ ಹೆಚ್ಚು ಕಾಲ ಭಾರತದಲ್ಲಿ ಉಳಿಯಲು ಬಯಸಿದರೆ, 180 ದಿನಗಳ ಅವಧಿ ಮುಗಿಯುವ ಮೊದಲುಲೇ ಸಂಬಂಧಿತ ಅಧಿಕಾರಿಗಳ ಬಳಿ ನೋಂದಣಿ ಮಾಡಿಸಿಕೊಳ್ಳಬೇಕು.

ಹಿಂದಿನ ನಿಯಮದ ಪ್ರಕಾರ, ಭಾರತಕ್ಕೆ ಆಗಮಿಸಿದ ನಂತರ 180 ದಿನಗಳು ಪೂರ್ಣಗೊಂಡ ಬಳಿಕ 14 ದಿನಗಳೊಳಗೆ ನೋಂದಣಿ ಮಾಡಿಕೊಳ್ಳಲು ಅವಕಾಶ ಇತ್ತು. ಆದರೆ ಈಗ ಆ ಅವಕಾಶವನ್ನು ತೆಗೆದುಹಾಕಲಾಗಿದೆ.

ಇದೇ ರೀತಿ, 180 ದಿನಗಳಿಗಿಂತ ಹೆಚ್ಚು ಅವಧಿಯ ವೀಸಾ ಹೊಂದಿದ್ದರೂ ಪ್ರತಿಯೊಂದು ವಾಸ್ತವ್ಯದ ಗರಿಷ್ಠ ಮಿತಿ 180 ದಿನಗಳಾಗಿದ್ದರೆ, ಅವರು ಸಹ 180 ದಿನಗಳು ಪೂರ್ಣಗೊಳ್ಳುವ ಮೊದಲು ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಬೇಕು.

⮞ ತುರ್ತು ಪರಿಸ್ಥಿತಿಯಲ್ಲಿ ಮಾತ್ರ ವಾಸ್ತವ್ಯ ವಿಸ್ತರಣೆ :
ತಿದ್ದುಪಡಿ ನಿಯಮಗಳ ಪ್ರಕಾರ, 180 ದಿನಗಳ ಮಿತಿಯನ್ನು ಮೀರಿ ಭಾರತದಲ್ಲಿ ಉಳಿಯಲು ನೋಂದಣಿ ಮತ್ತು ಅನುಮತಿ ಪಡೆಯುವುದು ಕೇವಲ “ತುರ್ತು ಅಥವಾ ವಿಶೇಷ ಸಂದರ್ಭಗಳಲ್ಲಿ” ಮಾತ್ರ ಸಾಧ್ಯವಾಗಲಿದೆ. ಇದು ಭಾರತದಲ್ಲಿ ವಾಸಿಸುವ ವಿದೇಶಿಗರ ಮೇಲಿನ ಮೇಲ್ವಿಚಾರಣೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಜಾರಿಗೆ ತರಲಾಗಿದೆ ಎಂದು ತಿಳಿದುಬಂದಿದೆ.

⮞ ವಿದೇಶಿ ಪೋಷಕರ ಮಕ್ಕಳ ಕುರಿತು ವಿಶೇಷ ನಿಯಮ :
ಹೊಸ ನಿಯಮಗಳ ಪ್ರಕಾರ, ಭಾರತದಲ್ಲಿ ಜನಿಸಿದ ಮಗುವಿನ ತಂದೆ ಅಥವಾ ತಾಯಿ ಭಾರತೀಯ ನಾಗರಿಕರಾಗಿದ್ದು, ಮಗುವಿನ ಭಾರತೀಯ ಪೌರತ್ವವನ್ನು ಉಳಿಸಿಕೊಳ್ಳಲು ಬಯಸಿದರೆ, 30 ದಿನಗಳೊಳಗೆ ನೋಂದಣಿ ಅಧಿಕಾರಿಗೆ ಆನ್‌ಲೈನ್ ಮೂಲಕ ಮಾಹಿತಿ ನೀಡುವ ಕಡ್ಡಾಯ ನಿಯಮ ಅನ್ವಯಿಸುವುದಿಲ್ಲ.

ಆದರೆ, ವಿದೇಶಿ ಪೋಷಕರಿಗೆ ಭಾರತದಲ್ಲಿ ಜನಿಸಿದ ಮಗು ನಂತರ ವಿದೇಶಿ ಪೌರತ್ವವನ್ನು ಪಡೆದರೆ, ಆ ಬದಲಾವಣೆಯ ಬಗ್ಗೆ ಮಗುವಿನ ಪೋಷಕರು 30 ದಿನಗಳೊಳಗೆ ನೋಂದಣಿ ಅಧಿಕಾರಿಗೆ ಮಾಹಿತಿ ನೀಡುವುದು ಕಡ್ಡಾಯವಾಗಿದೆ.

⮞ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್‌ಗಳಿಗೆ ಹೊಸ ಹೊಣೆಗಾರಿಕೆ :
ಭಾರತದಲ್ಲಿ ವಿದೇಶಿ ನಾಗರಿಕರಿಗೆ ಚಿಕಿತ್ಸೆ ಅಥವಾ ವಸತಿ ಸೌಲಭ್ಯ ಒದಗಿಸುವ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್‌ಗಳು ಈಗಿನಿಂದ ಸಂಬಂಧಿತ ನೋಂದಣಿ ಅಧಿಕಾರಿಗೆ ಅಗತ್ಯ ಮಾಹಿತಿಯನ್ನು ಸಲ್ಲಿಸಬೇಕಾಗುತ್ತದೆ.

ಈ ಮಾಹಿತಿಯಲ್ಲಿ ವಿದೇಶಿಗರ ಗುರುತು, ವಾಸ್ತವ್ಯದ ವಿವರಗಳು ಹಾಗೂ ಇತರ ಅಗತ್ಯ ಮಾಹಿತಿಗಳನ್ನು ಒಳಗೊಂಡಿರಬಹುದು. ಸರ್ಕಾರದ ಪ್ರಕಾರ, ಇದು ವಿದೇಶಿಗರ ಚಲನವಲನದ ದಾಖಲೆ ನಿರ್ವಹಣೆಯನ್ನು ಸುಧಾರಿಸುವ ಉದ್ದೇಶದಿಂದ ಜಾರಿಗೆ ತರಲಾಗಿದೆ.


error: Content Copyright protected !!