ಭಾರತದ ರಕ್ಷಣಾ ಸಾಮರ್ಥ್ಯಕ್ಕೆ ಮತ್ತೊಂದು ಮೈಲಿಗಲ್ಲು : ರುದ್ರಮ್-II ಕ್ಷಿಪಣಿಯ ಯಶಸ್ವಿ ಪರೀಕ್ಷೆ
Current AffairsLatest Updates

ಭಾರತದ ರಕ್ಷಣಾ ಸಾಮರ್ಥ್ಯಕ್ಕೆ ಮತ್ತೊಂದು ಮೈಲಿಗಲ್ಲು : ರುದ್ರಮ್-II ಕ್ಷಿಪಣಿಯ ಯಶಸ್ವಿ ಪರೀಕ್ಷೆ

Share With Friends

ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಹಾಗೂ ಭಾರತೀಯ ವಾಯುಪಡೆ (IAF) ಜೂನ್ 2ರಂದು ಸ್ವದೇಶಿ ನಿರ್ಮಿತ ರುದ್ರಮ್-II (RudraM-II) ವಾಯುವಿನಿಂದ ಭೂಮಿಗೆ ದಾಳಿ ಮಾಡುವ ಕ್ಷಿಪಣಿಯ ಯಶಸ್ವಿ ಹಾರಾಟ ಪರೀಕ್ಷೆಯನ್ನು ನಡೆಸಿವೆ. ಕಠಿಣ ಕಾರ್ಯಾಚರಣಾ ಪರಿಸ್ಥಿತಿಗಳಲ್ಲಿ ನಡೆದ ಈ ಪರೀಕ್ಷೆಯಲ್ಲಿ ಕ್ಷಿಪಣಿ ತನ್ನ ಗುರಿಯನ್ನು ಅತ್ಯಂತ ನಿಖರವಾಗಿ ಹೊಡೆದು ಯಶಸ್ಸು ಸಾಧಿಸಿದೆ.

ಈ ಪರೀಕ್ಷೆಯನ್ನು ವಾಯು ವೇದಿಕೆಯಿಂದ ಅತ್ಯಂತ ಸವಾಲಿನ ಪರಿಸ್ಥಿತಿಗಳಲ್ಲಿ ನಡೆಸಲಾಯಿತು. ಉಡಾವಣೆಯ ನಂತರ ಕ್ಷಿಪಣಿ ಪೂರ್ವನಿರ್ಧರಿತ ಗುರಿಯತ್ತ ಯಶಸ್ವಿಯಾಗಿ ಚಲಿಸಿ, ಅತ್ಯಂತ ನಿಖರತೆಯಿಂದ ಗುರಿಯನ್ನು ಭೇದಿಸಿತು. ಒಡಿಶಾದ ಚಾಂದಿಪುರದಲ್ಲಿರುವ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ (ITR) ನಿಯೋಜಿಸಿದ್ದ ಸುಧಾರಿತ ಟ್ರ್ಯಾಕಿಂಗ್ ಸಾಧನಗಳ ಮೂಲಕ ಪರೀಕ್ಷೆಯ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಲಾಯಿತು. ಮಿಷನ್‌ನ ಎಲ್ಲ ಉದ್ದೇಶಗಳು ಯಶಸ್ವಿಯಾಗಿ ಸಾಧಿಸಲ್ಪಟ್ಟಿವೆ ಎಂದು DRDO ತಿಳಿಸಿದೆ.

ರುದ್ರಮ್-II ಯಶಸ್ವಿ ಪರೀಕ್ಷೆಯು ಭಾರತೀಯ ವಾಯುಪಡೆಯ ದೂರದ ಗುರಿಗಳ ಮೇಲೆ ನಿಖರ ದಾಳಿ ನಡೆಸುವ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲಿದೆ. ಸುರಕ್ಷಿತ ಅಂತರದಿಂದಲೇ ಶತ್ರುಗಳ ಪ್ರಮುಖ ನೆಲಾಧಾರಿತ ಗುರಿಗಳನ್ನು ನಾಶಪಡಿಸುವ ಸಾಮರ್ಥ್ಯ ಈ ಕ್ಷಿಪಣಿಗಿದೆ.

ಈ ಪರೀಕ್ಷೆಯ ಮೂಲಕ ದೃಢೀಕರಿಸಲಾದ ಪ್ರಮುಖ ಅಂಶಗಳು :
*ಕ್ಷಿಪಣಿಯ ಅತ್ಯಾಧುನಿಕ ಮಾರ್ಗದರ್ಶನ (Guidance) ಮತ್ತು ನ್ಯಾವಿಗೇಶನ್ ವ್ಯವಸ್ಥೆ.
*ಹಾರಾಟ ನಿಯಂತ್ರಣ ತಂತ್ರಜ್ಞಾನ (Flight Control mechanisms).
*ಶತ್ರುಗಳ ಗುರಿಯನ್ನು ನಿಖರವಾಗಿ ಗುರುತಿಸುವ ಸಾಮರ್ಥ್ಯ (Target acquisition).
*ಪ್ರತಿಕೂಲ ಪರಿಸ್ಥಿತಿಗಳಲ್ಲೂ ನಿಖರ ದಾಳಿ ಮತ್ತು ಒಟ್ಟಾರೆ ವ್ಯವಸ್ಥೆಯ ವಿಶ್ವಾಸಾರ್ಹತೆ.

ರುದ್ರಮ್-II ಎಂದರೇನು..?
ರುದ್ರಮ್-II ಭಾರತದಲ್ಲಿ ಅಭಿವೃದ್ಧಿಪಡಿಸಲಾದ ಅತ್ಯಾಧುನಿಕ ವಾಯುವಿನಿಂದ ಭೂಮಿಗೆ ದಾಳಿ ಮಾಡುವ ಕ್ಷಿಪಣಿಯಾಗಿದೆ. ಯುದ್ಧ ವಿಮಾನಗಳಿಂದ ಉಡಾವಣೆಗೊಳ್ಳುವ ಈ ಕ್ಷಿಪಣಿ ದೂರದಲ್ಲಿರುವ ಶತ್ರುಗಳ ನೆಲಾಧಾರಿತ ಗುರಿಗಳನ್ನು ನಿಖರವಾಗಿ ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ. ದೇಶದ ಸ್ವದೇಶಿ ನಿಖರ ಮಾರ್ಗದರ್ಶಿತ ಶಸ್ತ್ರಾಸ್ತ್ರಗಳ ಅಭಿವೃದ್ಧಿ ಯೋಜನೆಯಲ್ಲಿ ಇದು ಪ್ರಮುಖ ಸಾಧನೆಯಾಗಿದೆ.

ಈ ಕ್ಷಿಪಣಿಯನ್ನು ಹೈದರಾಬಾದ್‌ನ ರಿಸರ್ಚ್ ಸೆಂಟರ್ ಇಮಾರತ್ (RCI) ನೇತೃತ್ವದಲ್ಲಿ ಅಭಿವೃದ್ಧಿಪಡಿಸಲಾಗಿದ್ದು, DRDOಯ ಹಲವು ಪ್ರಯೋಗಾಲಯಗಳು ಹಾಗೂ ಭಾರತೀಯ ರಕ್ಷಣಾ ಉದ್ಯಮಗಳು ಈ ಯೋಜನೆಗೆ ಸಹಕಾರ ನೀಡಿವೆ.

ಸ್ವದೇಶಿ ತಂತ್ರಜ್ಞಾನದ ಬಲ (‘ಆತ್ಮನಿರ್ಭರ ಭಾರತ’)
ರುದ್ರಮ್-II ಯೋಜನೆಯ ಯಶಸ್ಸು ಭಾರತದ ರಕ್ಷಣಾ ಉತ್ಪಾದನಾ ವಲಯದ ಸ್ವಾವಲಂಬನೆಗೆ ಹಿಡಿದ ಕೈಗನ್ನಡಿಯಾಗಿದೆ. ‘ಆತ್ಮನಿರ್ಭರ ಭಾರತ’ ಅಭಿಯಾನದಡಿ ದೇಶದ ಪ್ರಮುಖ ಸಂಸ್ಥೆಗಳು ಒಟ್ಟಾಗಿ ಈ ಯಶಸ್ಸಿಗೆ ಕಾರಣವಾಗಿವೆ.

ಯೋಜನೆಯಲ್ಲಿ ಭಾಗವಹಿಸಿದ ಪ್ರಮುಖ ಸಂಸ್ಥೆಗಳು:
ರಿಸರ್ಚ್ ಸೆಂಟರ್ ಇಮಾರತ್ (RCI), ಹೈದರಾಬಾದ್
ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಲ್ಯಾಬೊರೇಟರಿ (DRDL)
ಹೈ ಎನರ್ಜಿ ಮೆಟೀರಿಯಲ್ಸ್ ರಿಸರ್ಚ್ ಲ್ಯಾಬೊರೇಟರಿ (HEMRL)
ಆರ್ಮಮೆಂಟ್ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಎಸ್ಟಾಬ್ಲಿಷ್‌ಮೆಂಟ್ (ARDE)
ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ (ITR), ಚಾಂದಿಪುರ
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL)
ರೀಜನಲ್ ಸೆಂಟರ್ ಫಾರ್ ಮಿಲಿಟರಿ ಏರ್‌ವರ್ತಿನೆಸ್
ಮಿಸೈಲ್ ಸಿಸ್ಟಮ್ ಕ್ವಾಲಿಟಿ ಅಶ್ಯೂರೆನ್ಸ್ ಏಜೆನ್ಸಿ


error: Content Copyright protected !!