ಅಟ್ಲಾಂಟಿಕ್ ಸಮುದ್ರದಲ್ಲಿ ಆತಂಕ ಸೃಷ್ಟಿಸಿದ ಹ್ಯಾಂಟಾವೈರಸ್ : ಏನಿದು ವೈರಸ್..?
ಅಟ್ಲಾಂಟಿಕ್ ಸಮುದ್ರದಲ್ಲಿ ಸಂಚರಿಸುತ್ತಿದ್ದ ಒಂದು ಕ್ರೂಸ್ ಹಡಗಿನಲ್ಲಿ ಹ್ಯಾಂಟಾವೈರಸ್ (Hantavirus) ಸೋಂಕಿನ ಅನುಮಾನದಿಂದ ಮೂವರು ಮೃತಪಟ್ಟಿದ್ದು, ಇನ್ನೂ ಮೂವರು ಅಸ್ವಸ್ಥರಾಗಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ. World Health Organization (WHO) ಮೇ 3 ರಂದು ಈ ಕುರಿತು ಮಾಹಿತಿ ನೀಡಿದೆ.
ನೆದರ್‌ಲ್ಯಾಂಡ್ಸ್ ಕಂಪನಿಯು ನಡೆಸುತ್ತಿರುವ ಈ ಹಡಗು ಮೂರು ವಾರಗಳ ಹಿಂದೆ ಅರ್ಜೆಂಟೀನಾದಿಂದ ಹೊರಟಿದ್ದು, ಕ್ಯಾನರಿ ದ್ವೀಪಗಳತ್ತ ಸಾಗುತ್ತಿತ್ತು. ಆದರೆ ಈಗ ಪಶ್ಚಿಮ ಆಫ್ರಿಕಾದ ಕೇಬೋ ವರ್ಡೆ ಕರಾವಳಿಯ ಸಮೀಪ ನಿಂತಿದೆ ಎಂದು ವರದಿಗಳು ತಿಳಿಸಿವೆ.
WHO ಪ್ರಕಾರ, ಇತ್ತೀಚೆಗೆ ಒಂದು ಹ್ಯಾಂಟಾವೈರಸ್ ಪ್ರಕರಣ ದೃಢಪಟ್ಟಿದ್ದು, ಇನ್ನೂ ಐದು ಪ್ರಕರಣಗಳು ಅನುಮಾನಾಸ್ಪದವಾಗಿವೆ. ಎರಡು ಲಕ್ಷಣ ಹೊಂದಿರುವ ಪ್ರಯಾಣಿಕರ ವೈದ್ಯಕೀಯ ಸ್ಥಳಾಂತರಕ್ಕಾಗಿ ಸದಸ್ಯ ರಾಷ್ಟ್ರಗಳು ಮತ್ತು ಹಡಗು ನಿರ್ವಹಣಾ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಲಾಗುತ್ತಿದೆ. ಜೊತೆಗೆ, ಉಳಿದ ಪ್ರಯಾಣಿಕರ ಆರೋಗ್ಯ ಮೇಲ್ವಿಚಾರಣೆ ಹಾಗೂ ಸಾರ್ವಜನಿಕ ಆರೋಗ್ಯ ಅಪಾಯ ಮೌಲ್ಯಮಾಪನ ಕಾರ್ಯಗಳು ಮುಂದುವರಿದಿವೆ..
2025ರಲ್ಲಿ ಖ್ಯಾತ ನಟ Gene Hackman ಅವರ ಪತ್ನಿ ಬೆಟ್ಸಿ ಅರಕಾವಾ ಹ್ಯಾಂಟಾವೈರಸ್ ಸೋಂಕಿನಿಂದ ಮೃತಪಟ್ಟ ನಂತರ ಈ ರೋಗ ಮತ್ತೊಮ್ಮೆ ಚರ್ಚೆಗೆ ಬಂದಿದೆ.
ಹ್ಯಾಂಟಾವೈರಸ್ ಎಂದರೇನು.. ?
ಹ್ಯಾಂಟಾವೈರಸ್ ಎಂಬುದು ಬುನ್ಯಾವಿರಿಡೀ (Bunyaviridae) ಕುಟುಂಬಕ್ಕೆ ಸೇರಿದ ವೈರಸ್‌ಗಳ ಗುಂಪಾಗಿದೆ. ಈ ವೈರಸ್‌ಗಳು ಮಾನವರಲ್ಲಿ ಗಂಭೀರ ರೋಗಗಳಿಗೆ ಕಾರಣವಾಗುತ್ತವೆ. ಹ್ಯಾಂಟವೈರಸ್ (Hantavirus) ಎನ್ನುವುದು ಮುಖ್ಯವಾಗಿ ಇಲಿಗಳು ಮತ್ತು ಇತರ ದಂಶಕಗಳ ಮೂಲಕ ಹರಡುವ ಒಂದು ಅಪಾಯಕಾರಿ ವೈರಾಣು ಸೋಂಕು. ಇದು ಮನುಷ್ಯರಲ್ಲಿ ತೀವ್ರವಾದ ಉಸಿರಾಟದ ತೊಂದರೆ ಅಥವಾ ಮೂತ್ರಪಿಂಡದ ಸಮಸ್ಯೆಗಳನ್ನು ಉಂಟುಮಾಡಬಹುದು.
ಹೇಗೆ ಹರಡುತ್ತೆ..?
*ಗಾಳಿಯ ಮೂಲಕ (Aerosolization): ಇಲಿಗಳ ಒಣಗಿದ ಮಲ ಅಥವಾ ಮೂತ್ರವಿರುವ ಜಾಗವನ್ನು ಗುಡಿಸಿದಾಗ ಅಥವಾ ಅಲುಗಾಡಿಸಿದಾಗ ವೈರಾಣು ಗಾಳಿಯಲ್ಲಿ ಸೇರುತ್ತದೆ. ಇದನ್ನು ಉಸಿರಾಡುವುದೇ ಸೋಂಕು ಹರಡಲು ಇರುವ ಪ್ರಮುಖ ಕಾರಣ.
*ಆಹಾರದ ಮೂಲಕ: ಇಲಿಗಳು ಕಚ್ಚಿದ ಅಥವಾ ಅವುಗಳ ಲಾಲಾರಸ ತಗುಲಿದ ಆಹಾರವನ್ನು ಸೇವಿಸುವುದರಿಂದ.
*ಮನುಷ್ಯರಿಂದ ಮನುಷ್ಯರಿಗೆ: ಸಾಮಾನ್ಯವಾಗಿ ಇದು ಮನುಷ್ಯರಿಂದ ಮನುಷ್ಯರಿಗೆ ಹರಡುವುದಿಲ್ಲ. ಆದರೆ ದಕ್ಷಿಣ ಅಮೇರಿಕಾದಲ್ಲಿ ಕಂಡುಬರುವ ಆಂಡಿಸ್ ವೈರಸ್ (Andes virus) ಎಂಬ ಹ್ಯಾಂಟಾವೈರಸ್ ವಿಧವು ಹತ್ತಿರದ ಸಂಪರ್ಕವಿರುವ ಮನುಷ್ಯರಲ್ಲಿ ಹರಡಬಲ್ಲದು ಎಂದು ದಾಖಲಾಗಿದೆ.
ಪ್ರಮುಖ ಲಕ್ಷಣಗಳು :
*ಸೋಂಕು ತಗುಲಿದ 1 ರಿಂದ 8 ವಾರಗಳ ಒಳಗೆ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ:
ಆರಂಭಿಕ ಲಕ್ಷಣಗಳು: ಜ್ವರ (101°F ಗಿಂತ ಹೆಚ್ಚು), ವಿಪರೀತ ಸುಸ್ತು, ಸ್ನಾಯು ನೋವು (ವಿಶೇಷವಾಗಿ ಬೆನ್ನು, ಸೊಂಟ ಮತ್ತು ತೊಡೆಗಳಲ್ಲಿ), ತಲೆನೋವು, ವಾಕರಿಕೆ ಮತ್ತು ವಾಂತಿ.
*ತೀವ್ರ ಲಕ್ಷಣಗಳು: ಸೋಂಕು ಉಲ್ಬಣಗೊಂಡಂತೆ ಶ್ವಾಸಕೋಶದಲ್ಲಿ ನೀರು ತುಂಬಿಕೊಂಡು ಉಸಿರಾಟದ ತೊಂದರೆ ಮತ್ತು ಒಣ ಕೆಮ್ಮು ಕಾಣಿಸಿಕೊಳ್ಳುತ್ತದೆ. ಇದನ್ನು ‘ಹ್ಯಾಂಟವೈರಸ್ ಪಲ್ಮನರಿ ಸಿಂಡ್ರೋಮ್’ (HPS) ಎನ್ನಲಾಗುತ್ತದೆ.
ಹ್ಯಾಂಟಾವೈರಸ್‌ನ ಪ್ರಮುಖ ರೋಗಗಳು :
*ಹ್ಯಾಂಟಾವೈರಸ್ ಪಲ್ಮನರಿ ಸಿಂಡ್ರೋಮ್ (HPS)
ಶ್ವಾಸಕೋಶಗಳಿಗೆ ತೀವ್ರ ಹಾನಿ ಉಂಟುಮಾಡುತ್ತದೆ
ಜೀವಕ್ಕೆ ಅಪಾಯಕಾರಿಯಾಗಿದೆ
ಲಕ್ಷಣಗಳು ಕಾಣಿಸಿಕೊಂಡವರಲ್ಲಿ ಸುಮಾರು 38% ಸಾವಿನ ಪ್ರಮಾಣ ಇದೆ
*ಹೆಮೋರಾಜಿಕ್ ಫೀವರ್ ವಿತ್ ರೀನಲ್ ಸಿಂಡ್ರೋಮ್ (HFRS) :
ಮೂತ್ರಪಿಂಡಗಳನ್ನು ಪ್ರಭಾವಿಸುತ್ತದೆ
ಯುರೋಪ್ ಮತ್ತು ಏಷ್ಯಾದಲ್ಲಿ ಹೆಚ್ಚು ಕಂಡುಬರುತ್ತದೆ
‘ಸಿಯೋಲ್ ವೈರಸ್’ ಎಂಬ ಪ್ರಭೇದ ವಿಶ್ವದಾದ್ಯಂತ ಕಂಡುಬರುತ್ತದೆ
*ಚಿಕಿತ್ಸೆ ಮತ್ತು ತಡೆಗಟ್ಟುವಿಕೆ :
ಪ್ರಸ್ತುತ ಹ್ಯಾಂಟವೈರಸ್‌ಗೆ ಯಾವುದೇ ನಿರ್ದಿಷ್ಟ ಲಸಿಕೆ ಅಥವಾ ಚಿಕಿತ್ಸೆ ಇಲ್ಲ. ಆದರೆ ಆರಂಭಿಕ ಹಂತದಲ್ಲಿ ಪತ್ತೆಹಚ್ಚಿ ಆಸ್ಪತ್ರೆಗೆ ದಾಖಲಾದರೆ ಗುಣಪಡಿಸಬಹುದು.
ಚಿಕಿತ್ಸೆ: ತೀವ್ರ ನಿಗಾ ಘಟಕದಲ್ಲಿ (ICU) ಆಮ್ಲಜನಕದ ಚಿಕಿತ್ಸೆ (Oxygen Therapy) ಮತ್ತು ವೆಂಟಿಲೇಟರ್ ಸಹಾಯದ ಮೂಲಕ ರೋಗಿಯನ್ನು ಚೇತರಿಸಿಕೊಳ್ಳುವಂತೆ ಮಾಡಲಾಗುತ್ತದೆ.
ತಡೆಗಟ್ಟುವಿಕೆ: * ಮನೆ ಮತ್ತು ಸುತ್ತಮುತ್ತ ಇಲಿಗಳು ಬರದಂತೆ ಜಾಗ್ರತೆ ವಹಿಸುವುದು.
ಇಲಿಗಳ ತ್ಯಾಜ್ಯವಿರುವ ಜಾಗವನ್ನು ಶುಚಿಗೊಳಿಸುವಾಗ ಮಾಸ್ಕ್ ಮತ್ತು ಕೈಗವಸು ಧರಿಸುವುದು.
ಆಹಾರ ಪದಾರ್ಥಗಳನ್ನು ಇಲಿಗಳು ಮುಟ್ಟದಂತೆ ಸುರಕ್ಷಿತವಾಗಿಡುವುದು.

