‘ರೋಬೋಟ್’ಗಳ ಇತಿಹಾಸ ಗೊತ್ತೇ..? | History of Robots
GKTechnology

‘ರೋಬೋಟ್’ಗಳ ಇತಿಹಾಸ ಗೊತ್ತೇ..? | History of Robots

Share With Friends

ಮಾನವನ ಬುದ್ಧಿವಿಕಾಸವಾಗುತ್ತಾ ಹೋಗುತ್ತಿದ್ದಂತೆಲ್ಲಾ ಆಶ್ಚರ್ಯಕರ ತಂತ್ರಜ್ಞಾನಗಳು ಅಭಿವೃದ್ಧಿಗೊಂಡವು. ಅಂತಹವುಗಳಲ್ಲಿ ಈ ಯಂತ್ರಮಾನವ ರೋಬೋಟ್ ಕೂಡ ಒಂದು. ಮೂಲತಃ ರೋಬೋಟ್ ಎಂಬ ಪದವು ರೆಪಕ್ ಭಾಷೆಯ ‘ರೋಬೋಟಾ’ ಎಂಬ ಪದದಿಂದ ಹುಟ್ಟಿದೆ. ರೋಬೋಟಾ ಎಂದರೆ ಕಠಿಣ ಕಾರ್ಮಿಕ ಎಂಬರ್ಥ.

ರೋಬೋಟ್ ಎಂಬ ಯಂತ್ರವು ಚಲಿಸಬಲ್ಲದು, ನಿರ್ದೇಶಿತ ಕಾರ್ಯ ನಿರ್ವಹಿಸಬಲ್ಲದು, ಪ್ರೋಗ್ರಾಂಗಳಿಂದ (ಆಜ್ಞಿತ ಸೂಚನೆ) ಮಾಡಲ್ಪಟ್ಟಿದೆ. 19ನೇ ಶತಮಾನದ ಪೂರ್ವದಲ್ಲೇ ಮಕ್ಕಳ ಆಟಿಕೆಗಳಲ್ಲಿ ರೋಬೋಟ್ ಪರಿಕಲ್ಪನೆಯನ್ನು ಕಾರ್ಯರೂಪಕ್ಕೆ ತರಲಾಗಿದ್ದರೂ ಕೈಗಾರಿಕಾ ಕ್ಷೇತ್ರದಲ್ಲಿ ರೋಬೋಟ್ ಪರಿಚಯ 50ರ ದಶಕದಲ್ಲಿ ಜಾರ್ಜ್ ಡಿವೋಲ್ ಮತ್ತು ಜೋಸೆಫ್ ಎಂಗಲ್‌ಬರ್ಗರ್ ಅವರಿಂದಾಯಿತು.

ಜೋಸೆಫ್ ಎಂಗಲ್‌ಬರ್ಗರ್ ಅವರನ್ನು ರೋಬೋಟಿಕ್ಸ್ ಪಿತಾಮಹ (father of robotics) ಎಂದು ಕರೆಯಲಾಗುತ್ತದೆ. ರೋಬೋಟ್‌ಗಳನ್ನು ಕೈಗಾರಿಕಾ ಕ್ಷೇತ್ರದಲ್ಲಿ ಪರಿಚಯ ಮಾಡಿದಾಗ ತೀವ್ರ ಆರ್ಥಿಕ ತೊಂದರೆಗಳಿಂದ ಆ ಯೋಜನೆ ಬೆಳವಣಿಗೆ ಕಾಣಲಿಲ್ಲ. ಆದರೆ 80ರ ದಶಕದಲ್ಲಿ ಕೈಗಾರಿಕಾ ಕ್ಷೇತ್ರದಲ್ಲಿ ರೋಬೋಟ್‌ಗಳು ಮತ್ತೆ ಪ್ರಚಲಿತಕ್ಕೆ ಬಂದವು.

1950ರಲ್ಲಿ ಐಸಾಕ್ ಅಸಿಮೋವ್ ಅವರು ಕೆಲವು ರೋಬೋಟ್‌ಗಳಿಗೆ ಸಂಬಂಧಿಸಿದ ನಿಯಮಗಳನ್ನು ಪರಿಚಯಿಸಿದರು:

*ರೋಬೋಟ್‌ಗಳು ಮನುಷ್ಯನಿಗೆ ಹಾನಿ ಉಂಟುಮಾಡಬಾರದು ಅಥವಾ ಅದಕ್ಕೆ ಕಾರಣವಾಗಬಾರದು.
*ಮೊದಲ ನಿಯಮವನ್ನು ಉಲ್ಲಂಘಿಸದಂತೆ ಮನುಷ್ಯರ ಆದೇಶ ಪಾಲಿಸಬೇಕು.
*ಮೇಲಿನ ಎರಡು ನಿಯಮಗಳನ್ನು ಉಲ್ಲಂಘಿಸದಂತೆ ರೋಬೋಟ್‌ಗಳು ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು.

ಚಲಿಸಬಲ್ಲ ರೋಬೋಟ್‌ಗಳು 1983ರಲ್ಲಿ ಚಾಲನೆಗೆ ಬಂದವು. ಮೊದಲ ರೋಬೋಟ್ 6 ಕಾಲುಗಳನ್ನು ಹೊಂದಿದ್ದು ತನ್ನ ತೂಕದ 5.6 ಪಟ್ಟು ಹೆಚ್ಚಿನ ತೂಕವನ್ನು ಹೊತ್ತೊಯ್ಯಬಲ್ಲದು. ವಿಜ್ಞಾನ ಯುಗದಲ್ಲಿ ಈ ರೋಬೋಟ್‌ಗಳು ಸಾಕಷ್ಟು ಕ್ಷೇತ್ರಗಳಲ್ಲಿ ತಮ್ಮ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿವೆ.

ರೋಬೋಟ್‌ಗಳ ಉಪಯುಕ್ತತೆ:
ಮನುಷ್ಯನಿಗೆ ಮಾರಕವಾದ/ಪುನರಾವರ್ತಿತ ಕೆಲಸಗಳನ್ನು ಮಾಡಬಲ್ಲದು.
1995ರಲ್ಲಿ ಸುಮಾರು 7,00,000 ರೋಬೋಟ್‌ಗಳು ಕೈಗಾರಿಕಾ ಕ್ಷೇತ್ರದಲ್ಲಿ ಅಪಾಯಕಾರಿ ಕೆಲಸಗಳನ್ನು ನಿರ್ವಹಿಸುತ್ತಿದ್ದವು, ಈಗ ರೋಬೋಟ್‌ಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ.
ಮಾನವ ಸಂಪನ್ಮೂಲ ಕಡಿಮೆ ಇರುವಲ್ಲಿ ರೋಬೋಟ್ ತುಂಬ ಉಪಯುಕ್ತ.
ವೈದ್ಯಕೀಯ, ಯಂತ್ರಜೋಡಣೆ, ಸಾಗರದ ಆಳ ತಿಳಿಯಲು, ವೆಲ್ಡಿಂಗ್, ಪೇಂಟಿಂಗ್, ಯಂತ್ರಗಳ ಭಾಗಗಳನ್ನು ಸಾಗಿಸುವಲ್ಲಿ, 24 ಗಂಟೆಗಳ ಕಾಲ ಕೆಲಸ ಮಾಡುತ್ತವೆ.

ದುರದೃಷ್ಟಕರ:
ಭಾರತದಂತಹ ದೇಶಗಳಲ್ಲಿ ರೋಬೋಟ್ ನಿರುದ್ಯೋಗ ಸೃಷ್ಟಿಸಬಹುದೆಂಬ ಆತಂಕವಿದೆ.

ಭವಿಷ್ಯದ ರೋಬೋಟ್‌ಗಳು:
ಭವಿಷ್ಯದ ರೋಬೋಟ್‌ಗಳು ಪ್ರೋಗ್ರಾಂಗಳ ಆಜ್ಞೆಗಳಿಗೆ ಮಾತ್ರ ಸೀಮಿತವಾಗದೆ ಸ್ವಂತ ಬುದ್ಧಿ ಹೊಂದಿ, ತಮ್ಮ ತಪ್ಪುಗಳಿಂದ ಕಲಿಯುವ ರೀತಿಯಲ್ಲಿ ಅಭಿವೃದ್ಧಿಯಾಗಲಿವೆ. ಅಂತರಿಕ್ಷ ನೌಕೆಗಳಲ್ಲಿ ದೋಷ ಸರಿಪಡಿಸಲು, ಯುದ್ಧಭೂಮಿಯಲ್ಲಿ ಕಾರ್ಯನಿರ್ವಹಿಸಲು, ಕೈಗಾರಿಕೆಗಳನ್ನು ಮುನ್ನಡೆಸಲು ತೀಕ್ಷ್ಣ ಬುದ್ಧಿಯ ರೋಬೋಟ್‌ಗಳು ಬಳಕೆಯಾಗಲಿವೆ. ಅದರಲ್ಲೂ ಇತ್ತೀಚಿಗೆ ಎಐ ಹೊಂದಿರುವ ರೋಬೊಟ್ಸ್ ತಂತ್ರಜ್ಞಾನದ ಚಿತ್ರಣವನ್ನೇ ಬದಲಿಸುತ್ತಿವೆ.


error: Content Copyright protected !!