ಮೇ 20 : ವಿಶ್ವ ಜೇನುನೊಣ ದಿನ (World Bee Day) – ಇತಿಹಾಸ ಮತ್ತು ಅಗತ್ಯತೆ
ಮೇ 20ರಂದು ವಿಶ್ವ ಜೇನುನೊಣ ದಿನ (World Bee Day)ವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಆಹಾರ ಭದ್ರತೆ, ಜೀವ ವೈವಿಧ್ಯತೆ ಮತ್ತು ಪರಿಸರ ಸಮತೋಲನ ಕಾಪಾಡುವಲ್ಲಿ ಜೇನುನೊಣಗಳು ಹಾಗೂ ಇತರ ಪರಾಗಸ್ಪರ್ಶಕಗಳ (Pollinators) ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶವಾಗಿದೆ. ಜಾಗತಿಕ ಮಟ್ಟದಲ್ಲಿ ಜೇನುನೊಣಗಳ ಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆ, ಅವುಗಳ ಸಂರಕ್ಷಣೆ ಎಷ್ಟು ಅಗತ್ಯ ಎಂಬುದನ್ನು ಈ ದಿನ ನೆನಪಿಸುತ್ತದೆ.
⮞ ‘ವಿಶ್ವ ಜೇನುನೊಣ ದಿನ’ದ ಹಿನ್ನೆಲೆ :
ಮೇ 20, 1734ರಂದು ಜನಿಸಿದ Anton Janša ಅವರನ್ನು ಆಧುನಿಕ ಜೇನು ಸಾಕಾಣಿಕೆಯ ಪಿತಾಮಹ ಎಂದು ಪರಿಗಣಿಸಲಾಗುತ್ತದೆ. ಸ್ಲೋವೇನಿಯಾದ ಜೇನು ಸಾಕಾಣಿಕೆ ಕುಟುಂಬದಲ್ಲಿ ಜನಿಸಿದ ಅವರು ಜೇನು ಸಾಕಾಣಿಕೆ ಮತ್ತು ಜೇನು ಉತ್ಪಾದನೆಯ ಆಧುನಿಕ ವಿಧಾನಗಳಿಗೆ ಮಹತ್ವದ ಕೊಡುಗೆ ನೀಡಿದ್ದರು. ಅವರ ಸೇವೆಯನ್ನು ಗೌರವಿಸುವ ಸಲುವಾಗಿ ವಿಶ್ವಸಂಸ್ಥೆ ಮೇ 20ರಂದು ವಿಶ್ವ ಜೇನುನೊಣ ದಿನವನ್ನು ಆಚರಿಸಲು ನಿರ್ಧರಿಸಿತು.
2016ರಲ್ಲಿ ಸ್ಲೊವೇನಿಯಾ ದೇಶದ ಜೇನುಸಾಕಣೆದಾರರ ಸಂಘವು (Slovenian Beekeepers’ Association) ಜಾಗತಿಕ ಮಟ್ಟದಲ್ಲಿ ಜೇನುನೊಣಗಳ ರಕ್ಷಣೆಗಾಗಿ ಒಂದು ಪ್ರತ್ಯೇಕ ದಿನದ ಅಗತ್ಯವನ್ನು ಪ್ರತಿಪಾದಿಸಿತು. ಇದಕ್ಕೆ ವಿಶ್ವಸಂಸ್ಥೆಯ ಎಲ್ಲಾ ದೇಶಗಳು (ಭಾರತ ಸೇರಿದಂತೆ 115 ಕ್ಕೂ ಹೆಚ್ಚು ಸಹ-ಪ್ರಾಯೋಜಕ ದೇಶಗಳು) ಬೆಂಬಲ ನೀಡಿದವು.
2017ರಲ್ಲಿ United Nations General Assembly ಮೇ.20 ಅನ್ನು ಅಧಿಕೃತವಾಗಿ ವಿಶ್ವ ಜೇನುನೊಣ ದಿನವೆಂದು ಘೋಷಿಸಿತು. 2018 ಮೇ 20 ರಂದು ಮೊದಲ ಬಾರಿಗೆ ವಿಶ್ವದಾದ್ಯಂತ ಅಧಿಕೃತ ಆಚರಣೆ ನಡೆಯಿತು.
⮞ 2026ರ ವಿಶ್ವ ಜೇನುನೊಣ ದಿನದ ಥೀಮ್ :
“Bee together for people and the planet – A partnership that sustains us all” ಎಂಬುದು 2026ರ ವಿಶ್ವ ಜೇನುನೊಣ ದಿನದ ಅಧಿಕೃತ ಘೋಷವಾಕ್ಯವಾಗಿದೆ.
⮞ ಜೇನುನೊಣಗಳು ಏಕೆ ಅತ್ಯಂತ ಮುಖ್ಯ..?
✶ಜೇನುನೊಣಗಳು ವಿಶ್ವದ ಪ್ರಮುಖ ಪರಾಗಸ್ಪರ್ಶಕಗಳಾಗಿವೆ. ಅವುಗಳು ಹೂವಿನ ಸಸ್ಯಗಳ ಸಂತಾನೋತ್ಪತ್ತಿಗೆ ನೆರವಾಗುತ್ತವೆ. ಕೃಷಿ ಉತ್ಪಾದನೆಯನ್ನು ಹೆಚ್ಚಿಸುತ್ತವೆ. ಪರಿಸರ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತವೆ. ಜೀವ ವೈವಿಧ್ಯತೆಯನ್ನು ಉಳಿಸಲು ಸಹಕಾರಿಯಾಗುತ್ತವೆ.
✶ಜಗತ್ತಿನ ಮುಕ್ಕಾಲು ಭಾಗದಷ್ಟು ಪ್ರಮುಖ ಬೆಳೆಗಳು ಮತ್ತು ಹಣ್ಣು-ತರಕಾರಿಗಳು ಉತ್ತಮ ಇಳುವರಿ ನೀಡಲು ಜೇನುನೊಣಗಳಂತಹ ಪರಾಗಸ್ಪರ್ಶಕಗಳೇ (Pollinators) ಕಾರಣ.
✶ ಅತಿಯಾದ ಕೀಟನಾಶಕಗಳ ಬಳಕೆ, ಹವಾಮಾನ ಬದಲಾವಣೆ, ನಗರೀಕರಣ ಮತ್ತು ಅರಣ್ಯ ನಾಶದಿಂದಾಗಿ ಇಂದು ಜೇನುನೊಣಗಳ ಸಂತತಿ ತೀವ್ರವಾಗಿ ಕ್ಷೀಣಿಸುತ್ತಿದೆ.
✶ ನಾವು ತಿನ್ನುವ ಅಕ್ಕಿ, ಗೋಧಿ, ಆಲೂಗಡ್ಡೆಯಂತಹ ಪ್ರಮುಖ ಧಾನ್ಯಗಳಿಗೆ ಜೇನುನೊಣಗಳ ಅಗತ್ಯವಿಲ್ಲದಿದ್ದರೂ, ನಮಗೆ ಅಗತ್ಯವಿರುವ ಜೀವಸತ್ವಗಳು ಮತ್ತು ಖನಿಜಗಳನ್ನು ನೀಡುವ ಮಾವಿನಹಣ್ಣು, ಸೇಬು, ಬಾದಾಮಿ, ಟೊಮೆಟೊ, ಈರುಳ್ಳಿ ಮತ್ತು ಕಾಫಿಯಂತಹ ಬೆಳೆಗಳು ಸಂಪೂರ್ಣವಾಗಿ ಜೇನುನೊಣಗಳನ್ನೇ ನಂಬಿವೆ. ಜೇನುನೊಣಗಳಿಂದ ಸಮರ್ಪಕವಾಗಿ ಪರಾಗಸ್ಪರ್ಶವಾದ ಹಣ್ಣುಗಳು ಉತ್ತಮ ಗಾತ್ರ, ರುಚಿ ಮತ್ತು ಆಕಾರವನ್ನು ಹೊಂದಿರುತ್ತವೆ.
✶ ಜಾಗತಿಕ ಆರ್ಥಿಕ ಮೌಲ್ಯ: ಇಂಟರ್‌ಗವರ್ನ್‌ಮೆಂಟಲ್ ಸೈನ್ಸ್-ಪಾಲಿಸಿ ಪ್ಲಾಟ್‌ಫಾರ್ಮ್ (IPBES) ಪ್ರಕಾರ, ಜೇನುನೊಣಗಳು ಕೃಷಿಗೆ ನೀಡುವ ಉಚಿತ ಶ್ರಮದ ಜಾಗತಿಕ ಆರ್ಥಿಕ ಮೌಲ್ಯ ವರ್ಷಕ್ಕೆ ಸುಮಾರು $235 ಶತಕೋಟಿಯಿಂದ $577 ಶತಕೋಟಿ ಡಾಲರ್ (ಲಕ್ಷಾಂತರ ಕೋಟಿ ರೂಪಾಯಿಗಳು) ಎಂದು ಅಂದಾಜಿಸಲಾಗಿದೆ.
⮞ ಜೇನುನೊಣಗಳು ಎದುರಿಸುತ್ತಿರುವ ಗಂಭೀರ ಸವಾಲುಗಳು (Threats to Bees)
✶ ಏಕಬೆಳೆ ಪದ್ಧತಿ (Monocropping): ಕೃಷಿಯಲ್ಲಿ ಒಂದೇ ರೀತಿಯ ಬೆಳೆಯನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯುವುದರಿಂದ, ವರ್ಷವಿಡೀ ಜೇನುನೊಣಗಳಿಗೆ ವೈವಿಧ್ಯಮಯ ಆಹಾರ (ಮಕರಂದ ಮತ್ತು ಪರಾಗ) ಸಿಗುತ್ತಿಲ್ಲ.
✶ ರಾಸಾಯನಿಕ ಕೀಟನಾಶಕಗಳು: ನಿಯೋನಿಕೋಟಿನಾಯ್ಡ್ಸ್ (Neonicotinoids) ನಂತಹ ತೀವ್ರ ಕೀಟನಾಶಕಗಳು ಜೇನುನೊಣಗಳ ನರಮಂಡಲದ ಮೇಲೆ ದಾಳಿ ಮಾಡುತ್ತವೆ. ಇದರಿಂದ ಅವು ದಾರಿ ತಪ್ಪಿ ತಮ್ಮ ಜೇನುಗೂಡಿಗೆ ಮರಳಲು ಸಾಧ್ಯವಾಗದೆ ಸಾಯುತ್ತವೆ.
✶ ಹವಾಮಾನ ಬದಲಾವಣೆ: ಗ್ಲೋಬಲ್ ವಾರ್ಮಿಂಗ್‌ನಿಂದಾಗಿ ಹೂ ಬಿಡುವ ಕಾಲ ಮತ್ತು ಜೇನುನೊಣಗಳು ಸಕ್ರಿಯವಾಗುವ ಕಾಲದ ನಡುವೆ ಅಸಮತೋಲನ (Eco-seasonal mismatch) ಉಂಟಾಗುತ್ತಿದೆ.
✶ನಗರೀಕರಣ ಮತ್ತು ಆವಾಸಸ್ಥಾನ ನಾಶ: ಕಾಡುಗಳ ನಾಶ ಹಾಗೂ ನಗರಗಳಲ್ಲಿ ಹೂ ಬಿಡುವ ಮರಗಳ ಕೊರತೆಯಿಂದಾಗಿ ಕಾಡು ಜೇನುನೊಣಗಳು ಕಣ್ಮರೆಯಾಗುತ್ತಿವೆ.
ಇದನ್ನೂ ಓದಿ : ಮೇ ತಿಂಗಳ ಪ್ರಮುಖ ದಿನಗಳು / Important days in May
⮞ ನಾವು ಏನು ಮಾಡಬಹುದು? (How Can We Help?)
*ಸ್ಥಳೀಯ ಹೂವಿನ ಗಿಡಗಳನ್ನು ಬೆಳೆಸುವುದು: ನಿಮ್ಮ ಮನೆ ಅಥವಾ ತೋಟದ ಸುತ್ತಮುತ್ತ ವರ್ಷದ ವಿವಿಧ ಅವಧಿಯಲ್ಲಿ ಹೂ ಬಿಡುವ ಸ್ಥಳೀಯ ಜಾತಿಯ ಗಿಡಗಳನ್ನು ನೆಡುವುದು.
*ರಾಸಾಯನಿಕ ಮುಕ್ತ ತೋಟಗಾರಿಕೆ: ಕೀಟನಾಶಕಗಳು ಮತ್ತು ಕಳೆನಾಶಕಗಳ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸುವುದು ಅಥವಾ ನೈಸರ್ಗಿಕ ವಿಧಾನಗಳನ್ನು ಅಳವಡಿಸಿಕೊಳ್ಳುವುದು.
*ನೀರಿನ ವ್ಯವಸ್ಥೆ: ಜೇನುನೊಣಗಳು ಕುಡಿಯಲು ತೋಟಗಳಲ್ಲಿ ಸಣ್ಣ ಪಾತ್ರೆಯಲ್ಲಿ ನೀರು ಮತ್ತು ಅದರಲ್ಲಿ ಜೇನುನೊಣಗಳು ಕುಳಿತುಕೊಳ್ಳಲು ಸಣ್ಣ ಕಲ್ಲುಗಳು ಅಥವಾ ಮರದ ತುಂಡುಗಳನ್ನು ಇಡುವುದು.
*ಸ್ಥಳೀಯ ಜೇನುತುಪ್ಪದ ಖರೀದಿ: ಸ್ಥಳೀಯ ಜೇನು ಕೃಷಿಕರಿಂದ ನೇರವಾಗಿ ಜೇನುತುಪ್ಪ ಖರೀದಿಸುವ ಮೂಲಕ ಜೇನು ಸಾಕಾಣಿಕೆ ಉದ್ಯಮಕ್ಕೆ ಬೆಂಬಲ ನೀಡುವುದು.
⮞ ಭಾರತ ಮತ್ತು ಜೇನುನೊಣಗಳ ಪ್ರಸ್ತುತ ಸ್ಥಿತಿ :
ತಮಿಳುನಾಡು ಕೃಷಿ ವಿಶ್ವವಿದ್ಯಾಲಯದ (TNAU) ಸಂಶೋಧನೆಯ ಪ್ರಕಾರ, ಭಾರತದಲ್ಲಿ ಸಾಸಿವೆ, ಸೂರ್ಯಕಾಂತಿ, ಹತ್ತಿ, ಸೇಬು ಮುಂತಾದ ಬೆಳೆಗಳಿಗೆ ಸರಿಸುಮಾರು 50 ಮಿಲಿಯನ್ ಹೆಕ್ಟೇರ್ ಪ್ರದೇಶದಲ್ಲಿ ಜೇನುನೊಣಗಳ ಅವಶ್ಯಕತೆ ಇದೆ. ದೇಶದ ಒಟ್ಟು ಅಗತ್ಯಕ್ಕೆ 150 ಮಿಲಿಯನ್ ಜೇನು ವಸಾಹತುಗಳ (Bee Colonies) ಅಗತ್ಯವಿದ್ದರೂ, ಭಾರತದಲ್ಲಿ ಪ್ರಸ್ತುತ ಕೇವಲ 1.2 ರಿಂದ 2 ಮಿಲಿಯನ್ ವಸಾಹತುಗಳು ಮಾತ್ರ ಲಭ್ಯವಿವೆ.
ಜೇನುನೊಣಗಳ ಸರಿಯಾದ ಬಳಕೆಯಿಂದ ಹತ್ತಿ ಮತ್ತು ಸೇಬು ಬೆಳೆಗಳ ಇಳುವರಿಯಲ್ಲಿ 17% ರಿಂದ 44% ರಷ್ಟು ಪ್ರಗತಿ ಕಂಡುಬಂದಿದೆ. ಆದಾಗ್ಯೂ, ಭಾರತದಲ್ಲಿ ಜೇನುಸಾಕಣೆಯನ್ನು ಕೇವಲ ಉಪ ಕಸುಬಾಗಿ ನೋಡಲಾಗುತ್ತಿದೆಯೇ ಹೊರತು, ಕೃಷಿಯ ಪ್ರಮುಖ ಮೂಲಸೌಕರ್ಯವಾಗಿ ಪರಿಗಣಿಸುತ್ತಿಲ್ಲ.
2026ರ ವಿಶ್ವ ಜೇನುನೊಣ ದಿನವು ಕೆಳಗಿನ ಜಾಗತಿಕ ಕಾರ್ಯಕ್ರಮಗಳೊಂದಿಗೆ ಹೊಂದಾಣಿಕೆಯಲ್ಲಿದೆ:
International Year of Rangelands and Pastoralists 2026
International Year of the Woman Farmer 2026
- ಜಗತ್ತಿನ ಶ್ರೇಷ್ಠ ಜಾಝ್ ಸ್ಯಾಕ್ಸೋಫೋನ್ ವಾದಕ ಸೊನ್ನಿ ರೋಲಿನ್ಸ್ (Sonny Rollins) ನಿಧನ
- ಜನಸಂಖ್ಯಾ ಬದಲಾವಣೆ (Demography Changes) ಅಧ್ಯಯನಕ್ಕೆ ಉನ್ನತ ಮಟ್ಟದ ಸಮಿತಿ ರಚನೆ
- ಅಸ್ಸಾಂ ವಿಧಾನಸಭೆಯಲ್ಲಿ ಏಕರೂಪ ನಾಗರಿಕ ಸಂಹಿತೆ (Uniform Civil Code) ಮಸೂದೆ ಅಂಗೀಕಾರ
- ಭ್ರಷ್ಟಾಚಾರ ನಿರ್ಮೂಲನೆಗೆ ಕೇರಳದಲ್ಲಿ ‘ಪ್ರಾಜೆಕ್ಟ್ ಜೀರೋ’ (Project Zero) ಆರಂಭ
- 10 ಬಿಲಿಯನ್ ವರ್ಷ ಹಳೆಯ ರೇಡಿಯೋ ಸಂಕೇತ ಪತ್ತೆ ಮಾಡಿದ ವಿಜ್ಞಾನಿಗಳು

