ಪ್ರಚಲಿತ ಘಟನೆಗಳು CA QUIZ GK JOB NEWS E-BOOK QUIZ TEST Geography History Indian Constitution MCQs
Current AffairsLatest Updates

ಲೋಕಸಭೆಯಲ್ಲಿ ಮಂಡನೆಯಾದ ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆ-2026 ರಲ್ಲಿ ಏನಿದೆ..?

Share With Friends

ನವದೆಹಲಿ, ಜು.29: ಸಾರ್ವಜನಿಕ ಪರೀಕ್ಷೆಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ, ನಕಲು, ನಕಲಿ ಅಭ್ಯರ್ಥಿಗಳ ಮೂಲಕ ಪರೀಕ್ಷೆ ಬರೆಯುವುದು ಸೇರಿದಂತೆ ವಿವಿಧ ಅಕ್ರಮಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಕೇಂದ್ರ ಸರ್ಕಾರ “ಸಾರ್ವಜನಿಕ ಪರೀಕ್ಷೆಗಳು (ಅನ್ಯಾಯ ವಿಧಾನಗಳ ತಡೆ) ತಿದ್ದುಪಡಿ ಮಸೂದೆ–2026” (Public Examinations (Prevention of Unfair Means) Amendment Bill, 2026)ಅನ್ನು ಲೋಕಸಭೆಯಲ್ಲಿ ಮಂಡಿಸಿದೆ. ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಜುಲೈ 27ರಂದು ಈ ಮಸೂದೆಯನ್ನು ಪರಿಚಯಿಸಿದರು.

ಇತ್ತೀಚಿನ ವರ್ಷಗಳಲ್ಲಿ ರಾಷ್ಟ್ರೀಯ ಮಟ್ಟದ ವಿವಿಧ ನೇಮಕಾತಿ ಹಾಗೂ ಪ್ರವೇಶ ಪರೀಕ್ಷೆಗಳಲ್ಲಿ ನಡೆದ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅಕ್ರಮಗಳು ಸಾರ್ವಜನಿಕ ಪರೀಕ್ಷೆಗಳ ವಿಶ್ವಾಸಾರ್ಹತೆಯ ಬಗ್ಗೆ ಆತಂಕ ಮೂಡಿಸಿದ್ದವು. ವಿಶೇಷವಾಗಿ NEET ಪರೀಕ್ಷೆ ವಿವಾದದ ಬಳಿಕ ಪರೀಕ್ಷಾ ವ್ಯವಸ್ಥೆಯನ್ನು ಮತ್ತಷ್ಟು ಪಾರದರ್ಶಕ ಹಾಗೂ ಕಟ್ಟುನಿಟ್ಟಾಗಿಸಲು ಸರ್ಕಾರ ಈ ತಿದ್ದುಪಡಿಗಳನ್ನು ತಂದಿದೆ.

2024ರ ಕಾಯ್ದೆ ಏನು ಹೇಳುತ್ತದೆ..?
ಸಾರ್ವಜನಿಕ ಪರೀಕ್ಷೆಗಳು (ಅನ್ಯಾಯ ವಿಧಾನಗಳ ತಡೆ) ಕಾಯ್ದೆ–2024 ಫೆಬ್ರವರಿ 12, 2024ರಂದು ಜಾರಿಗೊಂಡಿದ್ದು, ಜೂನ್ 21, 2024ರಿಂದ ದೇಶಾದ್ಯಂತ ಜಾರಿಗೆ ಬಂದಿದೆ. ಈ ಕಾಯ್ದೆ UPSC, SSC, ರೈಲ್ವೆ ನೇಮಕಾತಿ ಮಂಡಳಿ (RRBs), IBPS, NTA ಸೇರಿದಂತೆ ಕೇಂದ್ರ ಸರ್ಕಾರದ ವಿವಿಧ ನೇಮಕಾತಿ ಹಾಗೂ ಪ್ರವೇಶ ಪರೀಕ್ಷೆಗಳಿಗೆ ಅನ್ವಯಿಸುತ್ತದೆ.

ಈ ಕಾಯ್ದೆಯಡಿ ಪರೀಕ್ಷಾ ಅಕ್ರಮಗಳಿಗೆ ಸಂಬಂಧಿಸಿದ ಎಲ್ಲಾ ಅಪರಾಧಗಳನ್ನು ಜಾಮೀನು ರಹಿತ, ಸಂಜ್ಞೇಯ (Cognizable) ಹಾಗೂ ರಾಜಿ ಮಾಡಿಕೊಳ್ಳಲಾಗದ (Non-compoundable) ಅಪರಾಧಗಳಾಗಿ ಪರಿಗಣಿಸಲಾಗಿದೆ.

ಪ್ರಸ್ತುತ ಕಾಯ್ದೆಯ ಪ್ರಮುಖ ಅಂಶಗಳು
⮞ ಪರೀಕ್ಷಾ ಅಕ್ರಮಗಳಿಗೆ ಸಂಬಂಧಿಸಿದ ಎಲ್ಲಾ ಅಪರಾಧಗಳು ಜಾಮೀನು ರಹಿತ (Non-Bailable) ಆಗಿವೆ.
⮞ ಪ್ರಕರಣಗಳು ಪೊಲೀಸರು ನೇರವಾಗಿ ದಾಖಲಿಸಬಹುದಾದ (Cognizable) ಅಪರಾಧಗಳಾಗಿವೆ.
⮞ ಪ್ರಕರಣಗಳಲ್ಲಿ ರಾಜಿ (Compounding) ಸಾಧ್ಯವಿಲ್ಲ.
⮞ ಜೈಲು ಶಿಕ್ಷೆ, ದಂಡ ಹಾಗೂ ಆಸ್ತಿ ಜಪ್ತಿ ಸೇರಿದಂತೆ ಕಠಿಣ ಶಿಕ್ಷೆಗಳಿವೆ.

ತಿದ್ದುಪಡಿ ಮಸೂದೆಯ ಪ್ರಮುಖ ಅಂಶಗಳು :
⮞ ಸಾರ್ವಜನಿಕ ಪರೀಕ್ಷೆಗಳಲ್ಲಿ ಅಕ್ರಮಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ತಡೆಯಲು ಸರ್ಕಾರ ಹಲವು ಮಹತ್ವದ ತಿದ್ದುಪಡಿಗಳನ್ನು ಪ್ರಸ್ತಾಪಿಸಿದೆ.

⮞ವಿಶೇಷ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳು:
ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಪರೀಕ್ಷಾ ಅಕ್ರಮ ಪ್ರಕರಣಗಳ ವಿಚಾರಣೆಗೆ ವಿಶೇಷ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳನ್ನು ನೇಮಿಸುವ ಅಧಿಕಾರ ನೀಡಲಾಗುತ್ತದೆ.

⮞ 3 ತಿಂಗಳಲ್ಲಿ ವಿಚಾರಣೆ ಪೂರ್ಣ:
ಆರೋಪಪಟ್ಟಿ ಸಲ್ಲಿಸಿದ ಬಳಿಕ ಪ್ರಕರಣಗಳ ವಿಚಾರಣೆಯನ್ನು ದಿನನಿತ್ಯ ನಡೆಸಿ ಮೂರು ತಿಂಗಳೊಳಗೆ ಪೂರ್ಣಗೊಳಿಸುವ ವ್ಯವಸ್ಥೆ ಕಲ್ಪಿಸಲಾಗಿದೆ.

⮞2 ತಿಂಗಳಲ್ಲಿ ತನಿಖೆ:
ರೀಕ್ಷಾ ಅಕ್ರಮಗಳಿಗೆ ಸಂಬಂಧಿಸಿದ ತನಿಖೆಯನ್ನು ಎರಡು ತಿಂಗಳೊಳಗೆ ಪೂರ್ಣಗೊಳಿಸುವ ಗಡುವು ನಿಗದಿಪಡಿಸಲಾಗಿದೆ.

⮞ವಿಶೇಷ ತನಿಖಾ ತಂಡ (STF):
ಅಗತ್ಯವಿದ್ದರೆ ಕೇಂದ್ರ ಸರ್ಕಾರ ವಿಶೇಷ ತನಿಖಾ ತಂಡವನ್ನು (Special Task Force) ರಚಿಸಿ ಪ್ರಕರಣಗಳ ತನಿಖೆ ನಡೆಸಬಹುದು.

⮞ವಿಶೇಷ ಸರ್ಕಾರಿ ಅಭಿಯೋಜಕರು:
ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಪ್ರಕರಣಗಳ ಪರಿಣಾಮಕಾರಿ ವಿಚಾರಣೆಗೆ ವಿಶೇಷ ಸರ್ಕಾರಿ ಅಭಿಯೋಜಕರನ್ನು ನೇಮಿಸಬಹುದು.

⮞ಶಿಕ್ಷೆ ಮತ್ತಷ್ಟು ಕಠಿಣ
ಪ್ರಸ್ತುತ ಇರುವ ಕನಿಷ್ಠ 3 ವರ್ಷದಿಂದ ಗರಿಷ್ಠ 5 ವರ್ಷಗಳವರೆಗಿನ ಜೈಲು ಶಿಕ್ಷೆಯನ್ನು ಹೆಚ್ಚಿಸಿ ಕನಿಷ್ಠ 5 ವರ್ಷದಿಂದ ಗರಿಷ್ಠ 10 ವರ್ಷಗಳವರೆಗೆ ವಿಧಿಸಲು ಮಸೂದೆ ಅವಕಾಶ ಕಲ್ಪಿಸಿದೆ.ಅದೇ ರೀತಿ, ಗರಿಷ್ಠ ದಂಡದ ಮೊತ್ತವನ್ನು ₹10 ಲಕ್ಷದಿಂದ ₹50 ಲಕ್ಷಕ್ಕೆ ಹೆಚ್ಚಿಸುವ ಪ್ರಸ್ತಾವವೂ ಇದೆ.

ಮೇಲ್ಮನವಿಗೂ ಕಾಲಮಿತಿ
ಈ ಮಸೂದೆಯ ಪ್ರಕಾರ, ಪರೀಕ್ಷಾ ಅಕ್ರಮ ಪ್ರಕರಣಗಳ ತೀರ್ಪು ವಿರುದ್ಧ ಹೈಕೋರ್ಟ್‌ನ ಇಬ್ಬರು ನ್ಯಾಯಮೂರ್ತಿಗಳ ಪೀಠಕ್ಕೆ ಮೇಲ್ಮನವಿ ಸಲ್ಲಿಸಬಹುದು. ಮೇಲ್ಮನವಿಯನ್ನೂ ಮೂರು ತಿಂಗಳೊಳಗೆ ಇತ್ಯರ್ಥಪಡಿಸುವ ವ್ಯವಸ್ಥೆ ಕಲ್ಪಿಸಲಾಗಿದೆ.

ಉದ್ದೇಶ ಏನು..?
ಪ್ರಶ್ನೆಪತ್ರಿಕೆ ಸೋರಿಕೆ, ನಕಲಿ ಅಭ್ಯರ್ಥಿಗಳ ಮೂಲಕ ಪರೀಕ್ಷೆ ಬರೆಯುವುದು, ಸಂಘಟಿತ ನಕಲು ಜಾಲಗಳು ಸೇರಿದಂತೆ ಎಲ್ಲಾ ರೀತಿಯ ಪರೀಕ್ಷಾ ಅಕ್ರಮಗಳಿಗೆ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಂಡು, ತನಿಖೆ ಮತ್ತು ವಿಚಾರಣೆಯನ್ನು ತ್ವರಿತಗೊಳಿಸುವ ಮೂಲಕ ಸಾರ್ವಜನಿಕ ಪರೀಕ್ಷಾ ವ್ಯವಸ್ಥೆಯ ಪಾರದರ್ಶಕತೆ, ನ್ಯಾಯಸಮ್ಮತತೆ ಹಾಗೂ ವಿಶ್ವಾಸಾರ್ಹತೆಯನ್ನು ಇನ್ನಷ್ಟು ಬಲಪಡಿಸುವುದೇ ಈ ತಿದ್ದುಪಡಿ ಮಸೂದೆಯ ಪ್ರಮುಖ ಉದ್ದೇಶವಾಗಿದೆ.

ಈ ಕಾಯ್ದೆ ಯಾವ ಪರೀಕ್ಷೆಗಳಿಗೆ ಅನ್ವಯಿಸುತ್ತದೆ:
UPSC
SSC
Railway Recruitment Boards (RRBs)
Institute of Banking Personnel Selection (IBPS)
National Testing Agency (NTA)
ಕೇಂದ್ರ ಸರ್ಕಾರದ ಸಚಿವಾಲಯಗಳು ಹಾಗೂ ಇಲಾಖೆಗಳ ನೇಮಕಾತಿ ಪರೀಕ್ಷೆಗಳು
ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸುವ ಇತರೆ ಪರೀಕ್ಷಾ ಸಂಸ್ಥೆಗಳು


ಫಾಸ್ಟ್‌ಟ್ರ್ಯಾಕ್ ಕೋರ್ಟ್‌ಗೆ ನ್ಯಾಯಾಧೀಶೆ ಅನು ಗ್ರೋವರ್ ಬಲಿಗಾ ನೇಮಕ

2026ರ ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ದೆಹಲಿಯಲ್ಲಿ ವಿಶೇಷ ಫಾಸ್ಟ್‌ಟ್ರ್ಯಾಕ್ ನ್ಯಾಯಾಲಯವನ್ನು ಸ್ಥಾಪಿಸಲಾಗಿದೆ. ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ಅವರು ರೌಸ್ ಅವೆನ್ಯೂ ನ್ಯಾಯಾಲಯ ಸಂಕೀರ್ಣದಲ್ಲಿ ಕಾರ್ಯನಿರ್ವಹಿಸಲಿರುವ ಈ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆಯಾಗಿ ಹಿರಿಯ ನ್ಯಾಯಾಧೀಶೆ ಅನು ಗ್ರೋವರ್ ಬಲಿಗಾ ಅವರನ್ನು ನೇಮಕ ಮಾಡಿದ್ದಾರೆ. ಹೊಸ ನ್ಯಾಯಾಲಯವು ಸಾರ್ವಜನಿಕ ಪರೀಕ್ಷೆಗಳು (ಅಕ್ರಮ ಮಾರ್ಗಗಳ ತಡೆ) ಕಾಯ್ದೆ ಅಡಿಯಲ್ಲಿ ದಾಖಲಾಗುವ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ಎಲ್ಲಾ ಪ್ರಮುಖ ಪ್ರಕರಣಗಳ ವಿಚಾರಣೆ ನಡೆಸಲಿದೆ.

ಯಾರು ಅನು ಗ್ರೋವರ್ ಬಲಿಗಾ..?
1969ರಲ್ಲಿ ಜನಿಸಿದ ಅನು ಗ್ರೋವರ್ ಬಲಿಗಾ ಅವರು 2000ರಲ್ಲಿ ದೆಹಲಿ ನ್ಯಾಯಾಂಗ ಸೇವೆ (DJS)ಗೆ ಸೇರ್ಪಡೆಗೊಂಡು ತಿಸ್ ಹಜಾರಿ ನ್ಯಾಯಾಲಯದಲ್ಲಿ ಸಿವಿಲ್ ನ್ಯಾಯಾಧೀಶೆಯಾಗಿ ವೃತ್ತಿಜೀವನ ಆರಂಭಿಸಿದರು. 2010ರಲ್ಲಿ ದೆಹಲಿ ಉನ್ನತ ನ್ಯಾಯಾಂಗ ಸೇವೆಗೆ (DJHS) ಪದೋನ್ನತಿ ಹೊಂದಿ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶೆಯಾಗಿ ಸೇವೆ ಸಲ್ಲಿಸಿದರು. ಪ್ರಸ್ತುತ ಅವರು ದೆಹಲಿಯ ಹಿರಿಯ ಜಿಲ್ಲಾ ನ್ಯಾಯಾಧೀಶೆಯಾಗಿದ್ದು, 2029ರಲ್ಲಿ ನಿವೃತ್ತಿಯಾಗಲಿದ್ದಾರೆ.

Anu-Grover-Baliga
Anu Grover Baliga

ಅನು ಗ್ರೋವರ್ ಬಲಿಗಾ ಅವರು 2022ರಲ್ಲಿ ರೌಸ್ ಅವೆನ್ಯೂ ನ್ಯಾಯಾಲಯದಲ್ಲಿ ನಾಲ್ಕು ತಿಂಗಳ ಕಾಲ ಸಿಬಿಐ ವಿಶೇಷ ನ್ಯಾಯಾಧೀಶೆಯಾಗಿ ಕಾರ್ಯನಿರ್ವಹಿಸಿದ್ದರು. ತಿಸ್ ಹಜಾರಿ ನ್ಯಾಯಾಲಯದ ಮಧ್ಯಸ್ಥಿಕೆ ಕೇಂದ್ರದ ಉಸ್ತುವಾರಿಯನ್ನೂ ವಹಿಸಿದ್ದರು. ಡಿಸೆಂಬರ್ 2025ರವರೆಗೆ ಸಾಕೇತ್ ವಾಣಿಜ್ಯ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶೆಯಾಗಿದ್ದ ಅವರು, ಹೆಚ್ಚಿನ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಿದ ನ್ಯಾಯಾಧೀಶೆಯಾಗಿ ಗುರುತಿಸಿಕೊಂಡಿದ್ದಾರೆ.

ರೌಸ್ ಅವೆನ್ಯೂ ನ್ಯಾಯಾಲಯದ ವಿಶೇಷತೆ
2019ರಲ್ಲಿ ಸ್ಥಾಪನೆಯಾದ ರೌಸ್ ಅವೆನ್ಯೂ ನ್ಯಾಯಾಲಯವು ಸಂಸದರು, ಶಾಸಕರು ಹಾಗೂ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ (ED) ತನಿಖೆ ನಡೆಸುವ ಭ್ರಷ್ಟಾಚಾರ ಮತ್ತು ಆರ್ಥಿಕ ಅಪರಾಧ ಪ್ರಕರಣಗಳ ವಿಚಾರಣೆಗೆ ವಿಶೇಷವಾಗಿ ಮೀಸಲಾಗಿದೆ. ಇದೀಗ ಇದೇ ನ್ಯಾಯಾಲಯದಲ್ಲಿ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗಾಗಿ ಪ್ರತ್ಯೇಕ ಫಾಸ್ಟ್‌ಟ್ರ್ಯಾಕ್ ನ್ಯಾಯಾಲಯ ಕಾರ್ಯನಿರ್ವಹಿಸಲಿದೆ.


ಪರೀಕ್ಷಾ ವ್ಯವಸ್ಥೆ ಸುಧಾರಣೆಗೆ ನಂದನ್ ನೀಲೇಕಣಿ ನೇತೃತ್ವದ 6 ಸದಸ್ಯರ ಟಾಸ್ಕ್‌ಫೋರ್ಸ್

Exam-Task-Force

ದೇಶದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳ ಕುರಿತು ಹೆಚ್ಚುತ್ತಿರುವ ಆತಂಕದ ನಡುವೆ, ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಪರೀಕ್ಷಾ ವ್ಯವಸ್ಥೆಯನ್ನು ಪಾರದರ್ಶಕ, ಸುರಕ್ಷಿತ ಹಾಗೂ ತಂತ್ರಜ್ಞಾನ ಆಧಾರಿತವಾಗಿಸಲು ಉನ್ನತ ಮಟ್ಟದ 6 ಸದಸ್ಯರ ಟಾಸ್ಕ್‌ಫೋರ್ಸ್ ರಚಿಸಿದ್ದಾರೆ. ಈ ಸಮಿತಿಯ ಅಧ್ಯಕ್ಷರಾಗಿ ಇನ್ಫೋಸಿಸ್ ಸಹ-ಸಂಸ್ಥಾಪಕ ನಂದನ್ ನೀಲೇಕಣಿ ಅವರನ್ನು ನೇಮಕ ಮಾಡಲಾಗಿದೆ. ಶಿಕ್ಷಣ, ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ಭದ್ರತೆ, ಆಡಳಿತ, ವಿಜ್ಞಾನ ಹಾಗೂ ಲಾಜಿಸ್ಟಿಕ್ಸ್ ಕ್ಷೇತ್ರಗಳ ಪರಿಣಿತರನ್ನು ಸಮಿತಿಯಲ್ಲಿ ಸೇರಿಸಲಾಗಿದೆ.

ಟಾಸ್ಕ್‌ಫೋರ್ಸ್‌ನ 6 ಸದಸ್ಯರು ಯಾರು?
✶ನಂದನ್ ನೀಲೇಕಣಿ – ಅಧ್ಯಕ್ಷರು
ಇನ್ಫೋಸಿಸ್‌ನ ಸಹ-ಸಂಸ್ಥಾಪಕ ಹಾಗೂ ಅಧ್ಯಕ್ಷರಾಗಿರುವ ನಂದನ್ ನೀಲೇಕಣಿ ಅವರು, ಆಧಾರ್ ಯೋಜನೆಯನ್ನು ಜಾರಿಗೊಳಿಸಿದ UIDAI ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (Digital Public Infrastructure) ಕ್ಷೇತ್ರದಲ್ಲಿ ಮಹತ್ವದ ಕೊಡುಗೆ ನೀಡಿರುವ ಅವರು, ಐಐಟಿ ಬಾಂಬೆ ಪದವೀಧರರಾಗಿದ್ದಾರೆ.

✶ಅಮೃತ್ ಲಾಲ್ ಮೀನಾ – ಲಾಜಿಸ್ಟಿಕ್ಸ್ ತಜ್ಞರು
1989ರ ಬ್ಯಾಚ್‌ನ ನಿವೃತ್ತ ಐಎಎಸ್ ಅಧಿಕಾರಿಯಾಗಿರುವ ಅಮೃತ್ ಲಾಲ್ ಮೀನಾ ಅವರು ಬಿಹಾರದ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಕೇಂದ್ರ ಕಲ್ಲಿದ್ದಲು ಸಚಿವಾಲಯ ಹಾಗೂ DPIITನಲ್ಲಿ ವಿಶೇಷ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿರುವ ಅವರು, 30ಕ್ಕೂ ಹೆಚ್ಚು ವರ್ಷಗಳ ಆಡಳಿತಾತ್ಮಕ ಅನುಭವ ಹೊಂದಿದ್ದಾರೆ.

✶ ಅನಿತಾ ಕರ್ವಾಲ್ – ಶಿಕ್ಷಣ ತಜ್ಞೆ
1988ರ ಬ್ಯಾಚ್‌ನ ನಿವೃತ್ತ ಐಎಎಸ್ ಅಧಿಕಾರಿ ಅನಿತಾ ಕರ್ವಾಲ್ ಅವರು ಭಾರತದ ಶಿಕ್ಷಣ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. 2017ರಿಂದ 2020ರವರೆಗೆ CBSE ಅಧ್ಯಕ್ಷೆಯಾಗಿದ್ದ ಅವರು, ರಾಷ್ಟ್ರೀಯ ಶಿಕ್ಷಣ ನೀತಿ (NEP-2020) ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

✶ಎಸ್. ಸೋಮನಾಥ್ – ವಿಜ್ಞಾನ ಮತ್ತು ತಂತ್ರಜ್ಞಾನ ತಜ್ಞರು
ಇಸ್ರೋದ ಮಾಜಿ ಅಧ್ಯಕ್ಷರಾಗಿರುವ ಎಸ್. ಸೋಮನಾಥ್ ಅವರ ನೇತೃತ್ವದಲ್ಲಿ ಚಂದ್ರಯಾನ-3 ಮತ್ತು ಆದಿತ್ಯ-L1 ಯೋಜನೆಗಳು ಯಶಸ್ವಿಯಾಗಿ ಪೂರ್ಣಗೊಂಡವು. SSLV ಹಾಗೂ LVM3 ಉಡಾವಣಾ ವಾಹನಗಳ ಅಭಿವೃದ್ಧಿಗೂ ಅವರು ಪ್ರಮುಖ ನಾಯಕತ್ವ ನೀಡಿದ್ದರು.

✶ಡಾ. ವಿ. ಕಾಮಕೋಟಿ – ಕೃತಕ ಬುದ್ಧಿಮತ್ತೆ (AI) ತಜ್ಞರು
ಐಐಟಿ ಮದ್ರಾಸ್ ನಿರ್ದೇಶಕರಾಗಿರುವ ಡಾ. ವಿ. ಕಾಮಕೋಟಿ ಅವರು, ಭಾರತದ ಸ್ವದೇಶಿ ‘ಶಕ್ತಿ’ ಮೈಕ್ರೋಪ್ರೊಸೆಸರ್ ಯೋಜನೆಯ ಪ್ರಮುಖ ವಿಜ್ಞಾನಿಯಾಗಿದ್ದಾರೆ. ಸೈಬರ್ ಭದ್ರತೆ, ಕೃತಕ ಬುದ್ಧಿಮತ್ತೆ (AI) ಹಾಗೂ ಹೈ-ಪರ್ಫಾರ್ಮೆನ್ಸ್ ಕಂಪ್ಯೂಟಿಂಗ್ ಕ್ಷೇತ್ರದಲ್ಲಿ ಪರಿಣತಿ ಹೊಂದಿದ್ದಾರೆ.

✶ತಪನ್ ಡೇಕಾ – ಭದ್ರತಾ ತಜ್ಞರು
ಗುಪ್ತಚರ ಇಲಾಖೆ (IB) ಮಾಜಿ ನಿರ್ದೇಶಕರಾಗಿರುವ ತಪನ್ ಡೇಕಾ ಅವರು 1988ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದಾರೆ. ಭಯೋತ್ಪಾದನೆ ನಿಗ್ರಹ, ಗುಪ್ತಚರ ಕಾರ್ಯಾಚರಣೆ ಮತ್ತು ಆಂತರಿಕ ಭದ್ರತೆ ಕ್ಷೇತ್ರದಲ್ಲಿ ಸುಮಾರು ನಾಲ್ಕು ದಶಕಗಳ ಅನುಭವ ಹೊಂದಿದ್ದಾರೆ.

ಟಾಸ್ಕ್‌ಫೋರ್ಸ್‌ನ ಪ್ರಮುಖ ಜವಾಬ್ದಾರಿಗಳು :
ಕೇಂದ್ರ ಸರ್ಕಾರ ಈ ಸಮಿತಿಗೆ ಕೆಳಕಂಡ ವಿಷಯಗಳ ಕುರಿತು ಶಿಫಾರಸುಗಳನ್ನು ಸಲ್ಲಿಸುವ ಜವಾಬ್ದಾರಿ ನೀಡಿದೆ.ಸಾರ್ವಜನಿಕ ಪರೀಕ್ಷೆಗಳಲ್ಲಿ ತಂತ್ರಜ್ಞಾನ ಆಧಾರಿತ ಸುಧಾರಣೆಗಳನ್ನು ಜಾರಿಗೆ ತರುವುದು.ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳನ್ನು ತಡೆಯಲು ಪರಿಣಾಮಕಾರಿ ಕ್ರಮಗಳನ್ನು ಸೂಚಿಸುವುದು. ಸೈಬರ್ ಭದ್ರತೆ ಮತ್ತು ಡಿಜಿಟಲ್ ಸುರಕ್ಷತೆಯನ್ನು ಬಲಪಡಿಸುವುದು.ಪರೀಕ್ಷಾ ವ್ಯವಸ್ಥೆಯ ಆಡಳಿತಾತ್ಮಕ ಹಾಗೂ ಲಾಜಿಸ್ಟಿಕ್ಸ್ ವ್ಯವಸ್ಥೆಯನ್ನು ಸುಧಾರಿಸುವುದು.ಪರೀಕ್ಷಾ ವ್ಯವಸ್ಥೆಯನ್ನು ಹೆಚ್ಚು ಪಾರದರ್ಶಕ, ಸುರಕ್ಷಿತ ಹಾಗೂ ವಿಶ್ವಾಸಾರ್ಹವಾಗಿಸುವ ರಚನಾತ್ಮಕ ಸುಧಾರಣೆಗಳನ್ನು ಶಿಫಾರಸು ಮಾಡುವುದು.

ಏಕೆ ಈ ಸಮಿತಿ ರಚಿಸಲಾಗಿದೆ..?
ಇತ್ತೀಚಿನ ದಿನಗಳಲ್ಲಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಅಕ್ರಮಗಳ ಆರೋಪಗಳು ದೇಶಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿದ್ದವು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ವಿಶ್ವಾಸವನ್ನು ಮರುಸ್ಥಾಪಿಸಿ, ತಂತ್ರಜ್ಞಾನ ಆಧಾರಿತ ಸುರಕ್ಷಿತ ಪರೀಕ್ಷಾ ವ್ಯವಸ್ಥೆಯನ್ನು ನಿರ್ಮಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಉನ್ನತ ಮಟ್ಟದ ಟಾಸ್ಕ್‌ಫೋರ್ಸ್ ಅನ್ನು ರಚಿಸಿದೆ. ಸಮಿತಿ ಸಲ್ಲಿಸುವ ಶಿಫಾರಸುಗಳ ಆಧಾರದ ಮೇಲೆ ದೇಶದ ಪರೀಕ್ಷಾ ವ್ಯವಸ್ಥೆಯಲ್ಲಿ ವ್ಯಾಪಕ ಸುಧಾರಣೆಗಳನ್ನು ಜಾರಿಗೆ ತರಲು ಸರ್ಕಾರ ಮುಂದಾಗಲಿದೆ.


error: Content Copyright protected !!