ಭಾರತದ ಮೊದಲ ಹೈಡ್ರೋಜನ್ ರೈಲಿಗೆ ಚಾಲನೆ : ಏನಿದರ ವಿಶೇಷತೆ..? ಇದು ಹೇಗೆ ಕಾರ್ಯನಿರ್ವಹಿಸುತ್ತೆ..?
ನವದೆಹಲಿ, ಜುಲೈ 18: ಭಾರತವು ಹಸಿರು ಸಾರಿಗೆ ಕ್ಷೇತ್ರದಲ್ಲಿ ಮತ್ತೊಂದು ಐತಿಹಾಸಿಕ ಹೆಜ್ಜೆ ಇಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಜುಲೈ 17ರಂದು ಹರಿಯಾಣದ ಜಿಂದ್–ಸೋನಿಪತ್ ಮಾರ್ಗದಲ್ಲಿ ದೇಶದ ಮೊದಲ ಹೈಡ್ರೋಜನ್ ಚಾಲಿತ ರೈಲಿಗೆ ಚಾಲನೆ ನೀಡಿದರು. ಇದರೊಂದಿಗೆ ಜರ್ಮನಿ, ಜಪಾನ್, ಚೀನಾ ಮತ್ತು ಅಮೆರಿಕದಂತಹ ರಾಷ್ಟ್ರಗಳ ಸಾಲಿಗೆ ಭಾರತವೂ ಸೇರ್ಪಡೆಯಾಗಿದೆ.
89 ಕಿ.ಮೀ. ದೂರದ ಜಿಂದ್–ಸೋನಿಪತ್ ಮಾರ್ಗವನ್ನು ರೈಲು ಸುಮಾರು 2 ಗಂಟೆಗಳಲ್ಲಿ ಕ್ರಮಿಸಲಿದೆ. ಮಧ್ಯದಲ್ಲಿ 12 ನಿಲ್ದಾಣಗಳಲ್ಲಿ ರೈಲು ನಿಲುಗಡೆಯಾಗಲಿದೆ. ಸಾಮಾನ್ಯ ಕಾರ್ಯಾಚರಣೆಯ ಪರಿಸ್ಥಿತಿಯಲ್ಲಿ ಹೈಡ್ರೋಜನ್ ರೈಲಿನ ಕಾರ್ಯಕ್ಷಮತೆ, ಸುರಕ್ಷತೆ ಹಾಗೂ ವಿಶ್ವಾಸಾರ್ಹತೆಯನ್ನು ಪರೀಕ್ಷಿಸುವ ಉದ್ದೇಶದಿಂದ ಈ ಮಾರ್ಗವನ್ನು ಆಯ್ಕೆ ಮಾಡಲಾಗಿದೆ.
⮞ ಹೈಡ್ರೋಜನ್ ರೈಲು ಹೇಗೆ ಕಾರ್ಯನಿರ್ವಹಿಸುತ್ತದೆ..?
ಹೈಡ್ರೋಜನ್ ರೈಲು ಹೈಡ್ರೋಜನ್ ಫ್ಯೂಯೆಲ್ ಸೆಲ್ (Hydrogen Fuel Cell) ತಂತ್ರಜ್ಞಾನದ ಮೂಲಕ ವಿದ್ಯುತ್ ಉತ್ಪಾದಿಸಿ ಸಂಚರಿಸುತ್ತದೆ. ರೈಲಿನೊಳಗಿನ ಹೈಡ್ರೋಜನ್ ಸಿಲಿಂಡರ್ಗಳಲ್ಲಿ ಸಂಗ್ರಹಿಸಿರುವ ಹೈಡ್ರೋಜನ್, ಗಾಳಿಯಲ್ಲಿರುವ ಆಮ್ಲಜನಕದೊಂದಿಗೆ ಫ್ಯೂಯೆಲ್ ಸೆಲ್ನಲ್ಲಿ ರಾಸಾಯನಿಕ ಕ್ರಿಯೆ ನಡೆಸುತ್ತದೆ. ಈ ಕ್ರಿಯೆಯಿಂದ ಉತ್ಪತ್ತಿಯಾಗುವ ವಿದ್ಯುತ್ ಟ್ರಾಕ್ಷನ್ ಮೋಟರ್ಗಳಿಗೆ ಶಕ್ತಿ ನೀಡಿ ರೈಲಿನ ಚಕ್ರಗಳನ್ನು ಚಲಿಸುತ್ತದೆ.
ಈ ಪ್ರಕ್ರಿಯೆಯಲ್ಲಿ ನೀರಿನ ಆವಿ ಮತ್ತು ಉಷ್ಣ ಮಾತ್ರ ಉಪ ಉತ್ಪನ್ನಗಳಾಗಿ ಹೊರಬರುತ್ತವೆ. ಹೊಗೆ, ಕಾರ್ಬನ್ ಡೈಆಕ್ಸೈಡ್ ಅಥವಾ ಇತರೆ ಹಾನಿಕಾರಕ ವಾಯುಗಳ ಹೊರಸೂಸುವಿಕೆ ಇಲ್ಲದಿರುವುದರಿಂದ ಇದು ಪರಿಸರ ಸ್ನೇಹಿ ತಂತ್ರಜ್ಞಾನವಾಗಿದೆ.
⮞ ಪ್ರೋಟಾನ್ ಎಕ್ಸ್ಚೇಂಜ್ ಮೆಂಬ್ರೇನ್ ಫ್ಯೂಯೆಲ್ ಸೆಲ್ (PEMFC) ಎಂದರೇನು..?
ಈ ರೈಲಿನಲ್ಲಿ Proton Exchange Membrane Fuel Cell (PEMFC) ಬಳಸಲಾಗಿದೆ. ಇದು Perfluorosulfonic Acid (PFSA) ಪಾಲಿಮರ್ ಮೆಂಬ್ರೇನ್ ಮೂಲಕ ಹೈಡ್ರೋಜನ್ ಮತ್ತು ಆಮ್ಲಜನಕದ ನಡುವಿನ ರಾಸಾಯನಿಕ ಕ್ರಿಯೆಯಿಂದ ವಿದ್ಯುತ್ ಉತ್ಪಾದಿಸುತ್ತದೆ. ಇದರಲ್ಲಿ ಯಾವುದೇ ದಹನ (Combustion) ನಡೆಯುವುದಿಲ್ಲ. ಆದ್ದರಿಂದ ಹೊಗೆ, ಕಾರ್ಬನ್ ಉತ್ಸರ್ಗ ಅಥವಾ ಶಬ್ದ ಮಾಲಿನ್ಯ ಬಹಳ ಕಡಿಮೆಯಾಗುತ್ತದೆ.
ಹೈಡ್ರೋಜನ್ ರೈಲಿನ ಪ್ರಮುಖ ವೈಶಿಷ್ಟ್ಯಗಳು :
*1,200 ಕಿಲೋವ್ಯಾಟ್ ಸಾಮರ್ಥ್ಯದ ಹೈಡ್ರೋಜನ್ ಫ್ಯೂಯೆಲ್ ಸೆಲ್ ಪ್ರೊಪಲ್ಷನ್ ವ್ಯವಸ್ಥೆ.
*10 ಬೋಗಿಗಳ ರೈಲು, ಸುಮಾರು 2,600 ಪ್ರಯಾಣಿಕರ ಸಾಮರ್ಥ್ಯ.
*2 Hydrogen Driving Power Cars (DPC) ಹಾಗೂ 8 ಟ್ರೈಲರ್ ಕೋಚ್ಗಳು.
*ಪ್ರತಿ DPCಯಲ್ಲಿ ಫ್ಯೂಯೆಲ್ ಸೆಲ್, ಲಿಥಿಯಂ ಐರನ್ ಫಾಸ್ಫೇಟ್ (LFP) ಬ್ಯಾಟರಿ ಹಾಗೂ ಹೈಡ್ರೋಜನ್ ಸಂಗ್ರಹ ಸಿಲಿಂಡರ್ಗಳು.
*ಜಿಂದ್–ಸೋನಿಪತ್ ಮಾರ್ಗದಲ್ಲಿ 75 ಕಿ.ಮೀ./ಗಂಟೆ ಕಾರ್ಯಾಚರಣಾ ವೇಗ, ವಿನ್ಯಾಸದ ಗರಿಷ್ಠ ವೇಗ 110 ಕಿ.ಮೀ./ಗಂಟೆ.
*ಡೀಸೆಲ್ ರೈಲುಗಳಿಗೆ ಹೋಲಿಸಿದರೆ ಕಡಿಮೆ ಶಬ್ದ, ಶೂನ್ಯ ಟೇಲ್ಪೈಪ್ ಉತ್ಸರ್ಗ ಹಾಗೂ *ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆ ಕಡಿಮೆ.
*ವಿದ್ಯುತ್ ರೈಲುಗಳಂತೆ ನಿರಂತರ ಓವರ್ಹೆಡ್ ವಿದ್ಯುತ್ ತಂತಿಗಳ ಅಗತ್ಯವಿಲ್ಲ.
⮞ ಹೈಡ್ರೋಜನ್ನ ವಿಶೇಷತೆ :
ಹೈಡ್ರೋಜನ್ ಅತ್ಯಧಿಕ ಶಕ್ತಿಯ ಇಂಧನವಾಗಿದ್ದು, ಇದರ ಶಕ್ತಿಮೌಲ್ಯ 120 ಮೆಗಾಜೂಲ್/ಕೆಜಿ (MJ/kg) ಆಗಿದೆ. ಇದು ಡೀಸೆಲ್ನ 43 MJ/kg ಗಿಂತ ಸುಮಾರು ಮೂರು ಪಟ್ಟು ಹೆಚ್ಚು. ನಿರ್ವಹಣಾ ವೆಚ್ಚವೂ ಕಡಿಮೆಯಾಗಿದ್ದು, ಕಾರ್ಬನ್ footprint ಕೂಡ ಕಡಿಮೆಯಾಗಿದೆ.
⮞ ಜಿಂದ್ನಲ್ಲಿ ದೇಶದ ಅತಿದೊಡ್ಡ ಹೈಡ್ರೋಜನ್ ಸಂಗ್ರಹ ಕೇಂದ್ರ :
ಹರಿಯಾಣದ ಜಿಂದ್ನಲ್ಲಿ ಭಾರತೀಯ ರೈಲ್ವೆಯ ಅತಿದೊಡ್ಡ ಹೈಡ್ರೋಜನ್ ಸಂಗ್ರಹ ಮತ್ತು ಇಂಧನ ತುಂಬುವ (Refuelling) ಕೇಂದ್ರ ಸ್ಥಾಪಿಸಲಾಗಿದೆ. ಇಲ್ಲಿ ಒಂದೇ ಬಾರಿ ಸುಮಾರು 3,000 ಕೆಜಿ ಹೈಡ್ರೋಜನ್ ಸಂಗ್ರಹಿಸಬಹುದಾಗಿದೆ. ಈ ಕೇಂದ್ರಕ್ಕೆ Petroleum and Explosives Safety Organisation (PESO) ಅಗತ್ಯ ಪರವಾನಗಿ ನೀಡಿದೆ.
⮞ ಸುರಕ್ಷತೆಗೆ ಹೆಚ್ಚಿನ ಆದ್ಯತೆ
ಹೈಡ್ರೋಜನ್ ಬಣ್ಣವಿಲ್ಲದ, ವಾಸನೆಯಿಲ್ಲದ ಮತ್ತು ವಿಷಕಾರಿಯಲ್ಲದ ಅನಿಲ. ಆದರೆ ಇದು ಅತ್ಯಂತ ಸುಲಭವಾಗಿ ಹೊತ್ತಿ ಉರಿಯುವ (Highly Inflammable) ಗುಣ ಹೊಂದಿರುವುದರಿಂದ ಸುರಕ್ಷತಾ ಕ್ರಮಗಳಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ.
ಅತಿ ಸಣ್ಣ ಸೋರಿಕೆಯನ್ನೂ ತಕ್ಷಣ ಪತ್ತೆಹಚ್ಚುವ ಸಂವೇದಕಗಳು (Sensors), ಸ್ವಯಂಚಾಲಿತ ಸುರಕ್ಷತಾ ವ್ಯವಸ್ಥೆಗಳು ಹಾಗೂ ಅಂತರರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾದ ಹೈಡ್ರೋಜನ್ ಪರಿಸರ ವ್ಯವಸ್ಥೆಯನ್ನು ಈ ಯೋಜನೆಯಲ್ಲಿ ಅಳವಡಿಸಲಾಗಿದೆ.
⮞ ಹಸಿರು ಸಾರಿಗೆಯತ್ತ ಭಾರತದ ಮಹತ್ವದ ಹೆಜ್ಜೆ
ಹೈಡ್ರೋಜನ್ ರೈಲು ಯೋಜನೆಯು ಭಾರತದಲ್ಲಿ ಸ್ವಚ್ಛ, ಸುಸ್ಥಿರ ಹಾಗೂ ಪರಿಸರ ಸ್ನೇಹಿ ರೈಲು ಸಾರಿಗೆ ಅಭಿವೃದ್ಧಿಗೆ ಹೊಸ ದಿಕ್ಕು ನೀಡಲಿದೆ. ಮುಂದಿನ ದಿನಗಳಲ್ಲಿ ಡೀಸೆಲ್ ರೈಲುಗಳಿಗೆ ಪರ್ಯಾಯವಾಗಿ ಹೈಡ್ರೋಜನ್ ರೈಲುಗಳು ದೇಶದ ವಿವಿಧ ಮಾರ್ಗಗಳಲ್ಲಿ ಸಂಚರಿಸುವ ಸಾಧ್ಯತೆ ಇದೆ.

