‘ವಂದೇ ಮಾತರಂ’ಗೆ ರಾಷ್ಟ್ರಗೀತೆಯ ಸಮಾನ ಕಾನೂನು ಮಾನ್ಯತೆ : ಐತಿಹಾಸಿಕ ನಿರ್ಧಾರ – EXPLANATION
ಭಾರತದ ಸ್ವಾತಂತ್ರ್ಯ ಹೋರಾಟದ ಪ್ರತೀಕವಾಗಿದ್ದ ವಂದೇ ಮಾತರಂ (Vande Mataram) ಗೀತೆಗೆ ರಾಷ್ಟ್ರಗೀತೆ ಜನ ಗಣ ಮನ(Jan Gana Mana)ಗೆ ಇರುವಂತೆಯೇ ಕಾನೂನು ರಕ್ಷಣೆಯನ್ನು ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ವಂದೇ ಮಾತರಂ ರಚನೆಯ 150ನೇ ವರ್ಷದ ಅಂಗವಾಗಿ ಕೇಂದ್ರ ಸಚಿವ ಸಂಪುಟ ಈ ಮಹತ್ವದ ತಿದ್ದುಪಡಿ ಪ್ರಸ್ತಾವನೆಯನ್ನು ಮುಂದಿಟ್ಟಿದೆ.
ಪ್ರಧಾನಿ Narendra Modi ನೇತೃತ್ವದ ಕೇಂದ್ರ ಸಚಿವ ಸಂಪುಟವು 1971ರ ‘ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆ’ (Prevention of Insults to National Honour Act) ಕಾಯ್ದೆಗೆ ತಿದ್ದುಪಡಿ ತರಲು ಸಿದ್ಧತೆ ನಡೆಸಿದೆ. ಈ ತಿದ್ದುಪಡಿಯ ಮೂಲಕ ವಂದೇ ಮಾತರಂ ಗೀತೆಗೆ ರಾಷ್ಟ್ರಗೀತೆಯಷ್ಟೇ ಕಾನೂನು ರಕ್ಷಣೆ ನೀಡುವ ಉದ್ದೇಶ ಹೊಂದಲಾಗಿದೆ.
ವಂದೇ ಮಾತರಂ ಗೀತೆಯ 150ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಈ ನಿರ್ಧಾರ ಹೊರಬಿದ್ದಿರುವುದು ವಿಶೇಷವಾಗಿದೆ. ಪಶ್ಚಿಮ ಬಂಗಾಳದ ಚುನಾವಣೆಗಳ ನಂತರ ಕೇಂದ್ರ ಸಚಿವ ಸಂಪುಟ ಕೈಗೊಂಡ ಮೊದಲ ಪ್ರಮುಖ ನಿರ್ಧಾರ ಇದಾಗಿದೆ.
ಸಚಿವ ಸಂಪುಟದ ಅನುಮೋದನೆಯ ನಂತರ, ಈ ತಿದ್ದುಪಡಿ ಮಸೂದೆಯನ್ನು ಮುಂಬರುವ ಸಂಸತ್ ಅಧಿವೇಶನದಲ್ಲಿ ಮಂಡಿಸಲಾಗುವುದು. ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕಾರಗೊಂಡು ರಾಷ್ಟ್ರಪತಿಗಳ ಸಹಿ ಬಿದ್ದ ನಂತರ ಇದು ಪೂರ್ಣ ಪ್ರಮಾಣದ ಕಾನೂನಾಗಿ ಜಾರಿಗೆ ಬರಲಿದೆ.
ಇದನ್ನೂ ಓದಿ : ಶಾಲೆಗಳು, ಸರಕಾರಿ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ ಕಡ್ಡಾಯ : ಹೊಸ ಮಾರ್ಗಸೂಚಿಯಲ್ಲಿ ಏನಿದೆ..?
✶ ಶಿಷ್ಟಾಚಾರ (Protocol):
ಈ ಹಿಂದೆ ಫೆಬ್ರವರಿಯಲ್ಲಿ ಗೃಹ ಸಚಿವಾಲಯ ಹೊರಡಿಸಿದ್ದ ಮಾರ್ಗಸೂಚಿಗಳಂತೆ, ಸರ್ಕಾರಿ ಕಾರ್ಯಕ್ರಮಗಳಲ್ಲಿ ಈ ಗೀತೆಯನ್ನು ನುಡಿಸುವಾಗ ಎಲ್ಲರೂ ಎದ್ದು ನಿಂತು ಗೌರವ ಸೂಚಿಸುವುದು ಕಡ್ಡಾಯವಾಗಿದೆ.
✶ ‘ವಂದೇ ಮಾತರಂ’ನ ಐತಿಹಾಸಿಕ ಮಹತ್ವವೇನು?
ವಂದೇ ಮಾತರಂ ಅನ್ನು 1875ರಲ್ಲಿ ಖ್ಯಾತ ಲೇಖಕ Bankim Chandra Chattopadhyay ರಚಿಸಿದ್ದರು. ಈ ಗೀತೆ ಮೂಲತಃ ಸಂಸ್ಕೃತೀಕೃತ ಬೆಂಗಾಲಿ ಭಾಷೆಯಲ್ಲಿ ಬರೆಯಲ್ಪಟ್ಟಿದ್ದು, ನಂತರ ಅವರ ಪ್ರಸಿದ್ಧ ಕಾದಂಬರಿ Anandamath ಯಲ್ಲಿ ಪ್ರಕಟವಾಯಿತು.
ಬ್ರಿಟಿಷರ ವಿರುದ್ಧದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ವಂದೇ ಮಾತರಂ ದೇಶಭಕ್ತಿಯ ಘೋಷವಾಗಿತ್ತು. ಅನೇಕ ಸ್ವಾತಂತ್ರ್ಯ ಹೋರಾಟಗಾರರು ಈ ಗೀತೆಯನ್ನು ಹಾಡುತ್ತಾ ಜನರಲ್ಲಿ ರಾಷ್ಟ್ರೀಯತೆ ಮತ್ತು ಏಕತೆಯ ಭಾವನೆ ಮೂಡಿಸಿದ್ದರು.
1950ರಲ್ಲಿ ಭಾರತ ಗಣರಾಜ್ಯವಾದ ನಂತರ, ಸಂವಿಧಾನ ಸಭೆ Jana Gana Mana ಯನ್ನು ರಾಷ್ಟ್ರಗೀತೆಯಾಗಿ ಅಂಗೀಕರಿಸಿತು. ಅದೇ ವೇಳೆ Vande Mataram ಗೆ ರಾಷ್ಟ್ರೀಯ ಗೀತೆಯ ಸ್ಥಾನಮಾನ ನೀಡಲಾಯಿತು. ಆದರೆ ರಾಷ್ಟ್ರಗೀತೆಗೆ ಮಾತ್ರ ಸ್ಪಷ್ಟ ಕಾನೂನು ರಕ್ಷಣೆ ಲಭ್ಯವಿತ್ತು.
ಸಾಂವಿಧಾನಿಕ ಸ್ಥಾನಮಾನ :
ರಾಷ್ಟ್ರೀಯ ಗೀತೆ (National Song): ಜನವರಿ 24, 1950 ರಂದು ಸಂವಿಧಾನ ಸಭೆಯ ಅಧ್ಯಕ್ಷರಾಗಿದ್ದ ಡಾ. ರಾಜೇಂದ್ರ ಪ್ರಸಾದ್ ಅವರು ‘ವಂದೇ ಮಾತರಂ’ ಅನ್ನು ಭಾರತದ ರಾಷ್ಟ್ರೀಯ ಗೀತೆ ಎಂದು ಘೋಷಿಸಿದರು. ಇದಕ್ಕೆ ರಾಷ್ಟ್ರಗೀತೆ ‘ಜನ ಗಣ ಮನ’ಕ್ಕೆ ಸರಿಸಮಾನವಾದ ಗೌರವ ಮತ್ತು ಸ್ಥಾನಮಾನವಿದೆ. ಕೇಂದ್ರ ಸರ್ಕಾರವು ಈ ಗೀತೆಗೆ ರಾಷ್ಟ್ರಗೀತೆಯಂತೆಯೇ ಕಾನೂನು ಮಾನ್ಯತೆ ನೀಡಲು ಮತ್ತು ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ.
ಸ್ವಾತಂತ್ರ್ಯ ಹೋರಾಟದಲ್ಲಿ ಇದರ ಪಾತ್ರ :
‘ವಂದೇ ಮಾತರಂ’ ಎಂದರೆ “ತಾಯಿಯೇ ನಿನಗೆ ವಂದಿಸುವೆ” ಎಂದರ್ಥ. ಇಲ್ಲಿ ‘ತಾಯಿ’ ಎಂದರೆ ಭಾರತ ಮಾತೆ. 1896ರ ಕಲ್ಕತ್ತಾ ಕಾಂಗ್ರೆಸ್ ಅಧಿವೇಶನದಲ್ಲಿ ರವೀಂದ್ರನಾಥ ಟ್ಯಾಗೋರ್ ಅವರು ಮೊದಲ ಬಾರಿಗೆ ಈ ಗೀತೆಯನ್ನು ಹಾಡಿದರು.
ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ, ವಿಶೇಷವಾಗಿ 1905ರ ಬಂಗಾಳ ವಿಭಜನೆಯ ಸಮಯದಲ್ಲಿ ಇದು ಕ್ರಾಂತಿಕಾರಿಗಳ ಮತ್ತು ಸಾಮಾನ್ಯ ಜನರ ಧ್ವನಿಯಾಯಿತು. ಬ್ರಿಟಿಷರು ಈ ಗೀತೆಯನ್ನು ಸಾರ್ವಜನಿಕವಾಗಿ ಹಾಡುವುದನ್ನು ನಿಷೇಧಿಸಿದ್ದರು.
ಇದನ್ನೂ ಓದಿ : ರಾಷ್ಟ್ರಧ್ವಜದ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
✶ ಹೊಸ ತಿದ್ದುಪಡಿಯ ಉದ್ದೇಶ ಏನು..?
*ಪ್ರಸ್ತಾವಿತ ತಿದ್ದುಪಡಿಯ ಪ್ರಕಾರ, ವಂದೇ ಮಾತರಂ ಗೀತೆಯ ಅವಮಾನ ಅಥವಾ ಉದ್ದೇಶಪೂರ್ವಕ ವ್ಯತ್ಯಯಕ್ಕೂ ರಾಷ್ಟ್ರಗೀತೆಯಂತೆಯೇ ಶಿಕ್ಷಾತ್ಮಕ ಕ್ರಮ ಜಾರಿಯಾಗಬಹುದು.
*ಪ್ರಸ್ತುತ ಕಾಯ್ದೆಯಡಿ ರಾಷ್ಟ್ರಗೀತೆಯ ಸಮಯದಲ್ಲಿ ಅವಮಾನಕಾರಿ ವರ್ತನೆ, ವ್ಯತ್ಯಯ ಅಥವಾ ಹಾಸ್ಯ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬಹುದು. ಆದರೆ ವಂದೇ ಮಾತರಂ ಕುರಿತು ಸ್ಪಷ್ಟ ಕಾನೂನು provisions ಇರಲಿಲ್ಲ.
✶ ಯಾವ ಕ್ರಮಗಳನ್ನು ಅವಮಾನ ಎಂದು ಪರಿಗಣಿಸಬಹುದು?
ತಿದ್ದುಪಡಿ ಜಾರಿಯಾದರೆ ಕೆಳಗಿನ ನಡೆಗಳು ಕಾನೂನು ಉಲ್ಲಂಘನೆ ಎಂದು ಪರಿಗಣಿಸಬಹುದಾಗಿದೆ:
*ಅಧಿಕೃತ ಕಾರ್ಯಕ್ರಮಗಳಲ್ಲಿ ಉದ್ದೇಶಪೂರ್ವಕವಾಗಿ ಗೀತೆಗೆ ವ್ಯತ್ಯಯ ಉಂಟುಮಾಡುವುದು
*ಗೀತೆಯನ್ನು ಅವಹೇಳನಾತ್ಮಕವಾಗಿ ಹಾಸ್ಯ ಅಥವಾ ವ್ಯಂಗ್ಯ ಮಾಡುವುದು
*ಸರ್ಕಾರಿ ಅಥವಾ ಸಂಸ್ಥಾತ್ಮಕ ಕಾರ್ಯಕ್ರಮಗಳಲ್ಲಿ ಅವಮಾನಕಾರಿ ವರ್ತನೆ ತೋರಿಸುವುದು
*ಯೋಜಿತ ರೀತಿಯಲ್ಲಿ ಕಾರ್ಯಕ್ರಮವನ್ನು ಅಸ್ತವ್ಯಸ್ತಗೊಳಿಸುವುದು
✶ ಶಿಕ್ಷೆ ಏನು..? :
ತಿದ್ದುಪಡಿ ಅಂಗೀಕಾರವಾದರೆ, ವಂದೇ ಮಾತರಂ ಅವಮಾನ ಪ್ರಕರಣಗಳಿಗೂ ರಾಷ್ಟ್ರಗೀತೆಯ ಅವಮಾನಕ್ಕೆ ಇರುವಂತೆಯೇ ಶಿಕ್ಷೆ ವಿಧಿಸಬಹುದು.
*ಗರಿಷ್ಠ 3 ವರ್ಷಗಳ ಜೈಲು ಶಿಕ್ಷೆ, ದಂಡ ಅಥವಾ ಜೈಲು ಶಿಕ್ಷೆ ಮತ್ತು ದಂಡ ಎರಡೂ
ಈ ಪ್ರಸ್ತಾವನೆ ದೇಶದ ರಾಷ್ಟ್ರೀಯ ಚಿಹ್ನೆಗಳ ಗೌರವ ಮತ್ತು ಸಂವಿಧಾನಾತ್ಮಕ ಮೌಲ್ಯಗಳ ಕುರಿತ ಚರ್ಚೆಗೆ ಹೊಸ ಆಯಾಮ ನೀಡುವ ಸಾಧ್ಯತೆ ಇದೆ. ವಂದೇ ಮಾತರಂ ಕೇವಲ ಒಂದು ಗೀತೆಯಲ್ಲ, ಅದು ಭಾರತೀಯರ ರಾಷ್ಟ್ರೀಯತೆಯ ಸಂಕೇತವಾಗಲಿದೆ.
ಇದನ್ನೂ ಓದಿ : ಭಾರತದ ರಾಷ್ಟ್ರೀಯ ಚಿಹ್ನೆಗಳು : National Symbols of India
| ✶NOTES : *ರಚನೆ: ಈ ಗೀತೆಯನ್ನು ಪ್ರಸಿದ್ಧ ಬಂಗಾಳಿ ಲೇಖಕ ಬಂಕಿಮ ಚಂದ್ರ ಚಟರ್ಜಿ ಅವರು 1870ರ ದಶಕದಲ್ಲಿ (ಸುಮಾರು 1876) ರಚಿಸಿದರು. *ಮೂಲ: ಇದನ್ನು ಅವರ ಪ್ರಸಿದ್ಧ ಕಾದಂಬರಿ ‘ಆನಂದಮಠ’ (1882) ದಲ್ಲಿ ಅಳವಡಿಸಲಾಯಿತು. *ಭಾಷೆ: ಈ ಗೀತೆಯು ಸಂಸ್ಕೃತ ಮತ್ತು ಬಂಗಾಳಿ ಭಾಷೆಗಳ ಮಿಶ್ರಣದಲ್ಲಿದೆ. *ಅಧಿಕೃತವಾಗಿ ಈ ಗೀತೆಯ ಮೊದಲ ಎರಡು ಚರಣಗಳನ್ನು ಹಾಡಲು ಸುಮಾರು 65 ಸೆಕೆಂಡುಗಳು ಬೇಕಾಗುತ್ತದೆ. *ರವೀಂದ್ರನಾಥ ಟ್ಯಾಗೋರ್ ಅವರು ರಾಷ್ಟ್ರಗೀತೆ (ಜನ ಗಣ ಮನ) ರಚಿಸಿದ್ದಲ್ಲದೆ, ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ಗೆ ರಾಗ ಸಂಯೋಜಿಸಿ ಮೊದಲ ಬಾರಿ ಹಾಡಿದ್ದರು. |
- ಭಾರತದಲ್ಲಿ ‘ಡಿಜಿಟಲ್ ಕ್ರಾಂತಿ’ ಮಾಡಿದ ಜನಧನ್ ಯೋಜನೆ (Jan Dhan Yojana) । EXPLANATION
- ಸುವೇಂದು ಅಧಿಕಾರಿ ಪಶ್ಚಿಮ ಬಂಗಾಳದ ನೂತನ ಮುಖ್ಯಮಂತ್ರಿ
- ಇಂದಿನ ಪ್ರಚಲಿತ ವಿದ್ಯಮಾನಗಳು | 08-05-2026
- ಪಶ್ಚಿಮ ಬಂಗಾಳ ವಿಧಾನಸಭೆ ರದ್ದು : ಮಮತಾ ಬ್ಯಾನರ್ಜಿ ಸರ್ಕಾರದ ಅವಧಿ ಅಂತ್ಯ
- ‘ತಾಯಂದಿರ ದಿನ’ (Mother’s Day) : ಹಿನ್ನಲೆ ಮತ್ತು ಮಹತ್ವ
Centre Moves to Grant Vande Mataram Anthem Like Legal Status to Vande Mataram
ಇದನ್ನೂ ಓದಿ : ರಾಷ್ಟ್ರಗೀತೆ ‘ಜನ ಗಣ ಮನ’ದ ಇತಿಹಾಸ | National Anthem ‘Jana Gana Mana’

