ಚಿತ್ರದುರ್ಗದ ಕೋಟೆ(Chitradurga Fort)ಯ ಬಗ್ಗೆ ನಿಮಗೆಷ್ಟು ಗೊತ್ತು..?
GKHistoryLatest Updates

ಚಿತ್ರದುರ್ಗದ ಕೋಟೆ(Chitradurga Fort)ಯ ಬಗ್ಗೆ ನಿಮಗೆಷ್ಟು ಗೊತ್ತು..?

Share With Friends

ಚಿತ್ರದುರ್ಗ ಕೋಟೆ (Chitradurga Fort)ಯ ಒಳಗೆ ಏಳು ಬೆಟ್ಟಗಳು ಅಂತರ್ಗತವಾಗಿವೆ. ಏಳು ಸುತ್ತಿನ ಈ ಕೋಟೆಯ 3 ಸುತ್ತನ್ನು ನೆಲದ ಮೇಲೂ, ಇನ್ನುಳಿದ 4 ಸುತ್ತನ್ನು ಬೆಟ್ಟದ ಮೇಲೂ ನಿರ್ಮಾಣ ಮಾಡಲಾಗಿದೆ. ಈ ಕೋಟೆಗೆ ಒಟ್ಟು 19 ಬಾಗಿಲುಗಳು, 35 ಗುಪ್ತ ಮಾರ್ಗಗಳು, 35 ದಿಡ್ಡಿ ಬಾಗಿಲುಗಳು ಮತ್ತು 4 ಕಳ್ಳಬಾಗಿಲುಗಳೂ ಇವೆ.

ಪೂರ್ವ ದಿಕ್ಕಿನಿಂದ ಹೊರಟು ಬೆಟ್ಟದ ಅರಮನೆ ಪ್ರದೇಶ ತಲುಪಲು 9 ಬಾಗಿಲುಗಳನ್ನು ದಾಟಬೇಕು. ಈ ಪೂರ್ವ ದಿಕ್ಕಿನ ಮುಖ್ಯವಾದ ದ್ವಾರವನ್ನು ರಂಗಯ್ಯನ ಬಾಗಿಲು ಎಂದೂ, ಸಿರಾದರ್ವಾಜ ಎಂದೂ ಕರೆಯುತ್ತಾರೆ. ಮೊದಲನೆಯ ಸುತ್ತಿನ ಕೋಟೆಯನ್ನು ದಾಟಿದರೆ ಉತ್ಸವಾಂಬಾ ದೇಗುಲ ದೊರೆಯುತ್ತದೆ.

ಇದರ ಪಕ್ಕ ಇರುವ ಬಾಗಿಲು ಗಾರೆ ಬಾಗಿಲು. ಮೂರನೆಯ ಸುತ್ತಿನ ಬಾಗಿಲಿನ ಹೆಸರು ಕಾಮನ ಬಾಗಿಲು. ಇಲ್ಲಿಯೇ ಎಣ್ಣೆಕೊಳ ಹಾಗೂ ಗವಿ ಇವೆ. ಇಲ್ಲಿಂದ ದಕ್ಷಿಣಕ್ಕೆ 4 ದೊಡ್ಡ ಬೀಸುವ ಕಲ್ಲುಗಳಿವೆ. ಮದ್ದನ್ನು ಅರೆಯಲು ಇದನ್ನು ಆನೆಗಳ ಸಹಾಯದಿಂದ ಉಪಯೋಗಿಸುತ್ತಿದ್ದರು ಎನ್ನುವುದು ಐತಿಹ್ಯ.

ನಾಲ್ಕನೆಯ ಬಾಗಿಲು ಬಳಿಯಿರುವ ಕೊತ್ತಳವನ್ನು ವೀರಭದ್ರ ಕೊತ್ತಳ ಎನ್ನುತ್ತಾರೆ. ಇದನ್ನು ದಾಟಿ ಮುಂದೆ ನಡೆದಲ್ಲಿ 5ನೇ ಬಾಗಿಲು ಸಿಗುತ್ತದೆ. 5ನೇ ಬಾಗಿಲು ಹಾಗೂ 6ನೇ ಬಾಗಿಲುಗಳು ಸುಲಭವಾಗಿ ಗೋಚರವಾಗದಂತೆ ನಿರ್ಮಿಸಲಾಗಿದೆ.

ಇದರ ಬಳಿ ಗಣೇಶನ ಗುಡಿಯಿದೆ. 7ನೇ ಬಾಗಿಲನ್ನು ಪ್ರವೇಶಿಸಿದರೆ ಏಕನಾಥೇಶ್ವರಿ ದೇವಾಲಯ ಸಿಗುತ್ತದೆ. ಕಲ್ಲಿನ ಆಯತಾಕಾರದ ಕಣಜವೂ ಇದೆ. 8ನೇ ಬಾಗಿಲು ದಾಟಿದರೆ ವಿಶಾಲವಾದ ಬೃಹನ್ಮಠ, ಸಂಪಿಗೆ ಸಿದ್ದೇಶ್ವರ ದೇವಾಲಯ, ಹಿಡಿಂಬೇಶ್ವರ ದೇವಾಲಯ, ತುಪ್ಪದ ಕೊಳ, ದ್ವಾರಗೋಪುರ, ಉಯ್ಯಾಲೆ ಕಂಬ, ದೀಪಸ್ಥಂಭಗಳು ದೊರಕುತ್ತವೆ. ಚಿತ್ರದುರ್ಗದ ಬಹಳ ಮುಖ್ಯವಾದ ರಚನೆಗಳಿವು.

9ನೇ ಬಾಗಿಲನ್ನು ದಾಟಿದರೆ ಗೋಪಾಲಕೃಷ್ಣ ದೇಗುಲ ಸಿಗುತ್ತದೆ. ಇಲ್ಲಿ ಮದ್ದಿನ ಮನೆ, ಗುಪ್ತ ಗುಹೆ, ಗೋಪಾಲಸ್ವಾಮಿ ಹೊಂಡ, ಅರಮನೆ ಬಯಲುಗಳು ಇವೆ. ಅರಮನೆಯಂತಹ ಅನೇಕ ದೊಡ್ಡ ಕಟ್ಟಡಗಳು ಇಲ್ಲಿವೆ. ಇವುಗಳನ್ನು ಮಣ್ಣಿನಿಂದ ಕಟ್ಟಲಾಗಿದೆ. ಇಲ್ಲಿ ಭಾರೀ ಕಣಜಗಳು ಹಾಗೂ ಮುದ್ರಾಶಾಲೆಗಳಿವೆ.

ಇದು ಚಿತ್ರದುರ್ಗದ ಆತ್ಮ ಪ್ರದೇಶವಾಗಿದೆ. ಈ ಪ್ರದೇಶದ ಸುತ್ತಲೂ ಬೆಟ್ಟಗಳಿರುವುದರಿಂದ ಸ್ವಾಭಾವಿಕವಾದ ರಕ್ಷಣೆ ಇದ್ದೇ ಇದೆ. ಆದರೂ ಸುತ್ತಲೂ ಇರುವ ಬೆಟ್ಟಗಳ ಮೇಲೆ ಬತ್ತೇರಿಗಳನ್ನು ನಿರ್ಮಿಸಿ ಯಾವುದೇ ಶತ್ರುವೂ ಒಳನುಸುಳದಂತೆ ವ್ಯವಸ್ಥೆ ಕಲ್ಪಿಸಲಾಗಿದೆ.

ನೆಲ್ಲಿಕಾಯಿ ಸಿದ್ದೇಶ್ವರ ಬತ್ತೇರಿ, ಝಂಡಾ ಬತ್ತೇರಿ, ಲಾಲ್ ಬತ್ತೇರಿ, ತುಪ್ಪದ ಕೊಳದ ಬತ್ತೇರಿ, ಕಹಳೆ ಬತ್ತೇರಿ, ಬಸವನ ಬತ್ತೇರಿ ಮುಖ್ಯವಾದ ಬತ್ತೇರಿಗಳಾಗಿವೆ. ಚಿತ್ರದುರ್ಗದ ಪಾಳೆಯಗಾರರು ಈ ಕೋಟೆಯನ್ನು ಅತ್ಯಂತ ಸದೃಢವಾಗಿ ಕಟ್ಟಿದರು.

ದೊಡ್ಡ ದೊಡ್ಡ ಭಾರೀ ಕಲ್ಲುಗಳನ್ನು ಆಯತಾಕಾರವಾಗಿ ಕತ್ತರಿಸಿ ಈ ಕೋಟೆಯನ್ನು ನಿರ್ಮಿಸಲಾಗಿದೆ. 14 ದೇವಾಲಯಗಳು ಈ ಕೋಟೆಯಲ್ಲಿವೆ. ಈ ಕೋಟೆಯ ಎತ್ತರ 15ರಿಂದ 40 ಅಡಿಗಳಷ್ಟಿದೆ. ಕೆಲವು ಕಡೆ ಇಟ್ಟಿಗೆ ಗೋಡೆಗಳನ್ನು ಕೋಟೆ ಗೋಡೆಯ ಮೇಲೆ ಕಟ್ಟಲಾಗಿದೆ. ಹೊರಗಿನ 3 ಸುತ್ತಿನ ಗೋಡೆಗಳ ಸುತ್ತ ಕಂದಕಗಳಿವೆ.

ಕೋಟೆಯ ಇತಿಹಾಸ :

ಕೋಟೆಯಲ್ಲಿ ನಡೆದ ಯುದ್ಧದಲ್ಲಿ ಹೈದರಾಲಿಯು ವೀರ ಮದಕರಿ ನಾಯಕನನ್ನು ಸೋಲಿಸಿದನು. ಚಿತ್ರದುರ್ಗ ಕೋಟೆ, ಸಾವನದುರ್ಗ ಕೋಟೆ ಇವುಗಳಲ್ಲಿ ಪ್ರಮುಖವಾಗಿವೆ. ಈ ಕೋಟೆಯು ಹಂಪಿಯಿಂದ 120 ಕಿ.ಮೀ ಹಾಗೂ ಬೆಂಗಳೂರಿನಿಂದ 200 ಕಿ.ಮೀ ದೂರದಲ್ಲಿದೆ. ಕೋಟೆಯ ಸುತ್ತ ಚಾಲುಕ್ಯರ ಶಾಸನಗಳನ್ನು ಕಾಣಬಹುದು.

ತಿಮ್ಮಪ್ಪ ನಾಯಕ ಎಂಬ ನಾಯಕ ವರ್ಗದವನು ಮೊದಲು ಚಿತ್ರದುರ್ಗದ ಕೋಟೆಯನ್ನು ಆಳುತ್ತಿದ್ದನು. ಇವರು ಚಿತ್ರದುರ್ಗದ ಜೊತೆಗೆ ಅದರ ಸುತ್ತಮುತ್ತ ಪ್ರದೇಶಗಳಾದ ದಾವಣಗೆರೆ, ಜಗಳೂರು, ಹರಿಹರ ಪ್ರದೇಶಗಳ ಉಸ್ತುವಾರಿ ವಹಿಸಿದ್ದರು. ಇವರ ನಂತರ ಇವರ ಮಗನಾದ ಮದಕರಿ ನಾಯಕ ಕೋಟೆಯನ್ನು ಆಳುತ್ತಿದ್ದನು. ಇವರ ನಂತರ ಭರಮಪ್ಪ ನಾಯಕ ತುಂಬ ಹೆಸರುವಾಸಿಯಾದನು.

ಇವನ ಕಾಲದಲ್ಲಿ ಅನೇಕ ಕೋಟೆಗಳು, ಅರಮನೆಗಳು, ದೇವಾಲಯಗಳು ಕಟ್ಟಲ್ಪಟ್ಟವು. ಮೈಸೂರು ಹೈದರಾಲಿ ಕೋಟೆಯನ್ನು ಅನೇಕ ಬಾರಿ ಆಕ್ರಮಿಸಿದನು — ಮೊದಲ ಬಾರಿ 1760ರಲ್ಲಿ, ಎರಡನೇ ಬಾರಿ 1770ರಲ್ಲಿ ಹಾಗೂ ಕೊನೆಯದಾಗಿ 1779ರಲ್ಲಿ ಆಕ್ರಮಿಸಿ ಮದಕರಿ ನಾಯಕನನ್ನು ಸೋಲಿಸಿದನು. ಇದಾದ ನಂತರ ಕೋಟೆಯ ಜವಾಬ್ದಾರಿಯನ್ನು ಮೈಸೂರು ಸರ್ಕಾರ ವಹಿಸಿತು.

ದಂತಕಥೆ :

ಜನಪದ ದಂತಕಥೆಯ ಪ್ರಕಾರ, ಮಹಾಭಾರತದ ಕಾಲದಲ್ಲಿ ಹಿಡಿಂಬಸುರ ಎಂಬ ನರಭಕ್ಷಕ ದೈತ್ಯ ಚಿತ್ರದುರ್ಗ ಬೆಟ್ಟದಲ್ಲಿ ವಾಸಿಸುತ್ತಿದ್ದನು. ಪಾಂಡವರು ತಮ್ಮ ಅಜ್ಞಾತವಾಸದ ಸಮಯದಲ್ಲಿ ತಾಯಿ ಕುಂತಿಯೊಂದಿಗೆ ಇಲ್ಲಿ ಬಂದಾಗ, ಭೀಮನು ಹಿಡಿಂಬಸುರನೊಂದಿಗೆ ಯುದ್ಧ ಮಾಡಿ ಅವನನ್ನು ಸಂಹರಿಸಿದನು.

ಚಲನಚಿತ್ರಗಳು :

ಅನೇಕ ಕನ್ನಡ ಸಿನಿಮಾಗಳ ಚಿತ್ರೀಕರಣ ಇಲ್ಲಿ ನಡೆದಿದೆ. ಈ ಕೋಟೆಯಲ್ಲಿ ಚಿತ್ರೀಕರಿಸಿದ ಪ್ರಮುಖ ಚಿತ್ರಗಳು ನಾಗರಹಾವು ಹಾಗೂ ಹಂಸಗೀತೆ. ವೀರ ಮದಕರಿ ನಾಯಕ ಚಿತ್ರದ ಮೂಲಕ ನಾಯಕರ ಕುರಿತು ಮಾಹಿತಿಯನ್ನು ನೀಡಲಾಗಿದೆ.

ಕನ್ನಡಿಗರ ಹೆಮ್ಮೆಯ ಕೋಟೆ :

ಚಿತ್ರದುರ್ಗದ ಕೋಟೆ ವೇದಾವತಿ ನದಿಯಿಂದ ರೂಪುಗೊಂಡ ಕಣಿವೆಯ ಮಧ್ಯದಲ್ಲಿದೆ. ಕೋಟೆಯ ವಾಯವ್ಯದಲ್ಲಿ ತುಂಗಭದ್ರ ನದಿ ಹರಿಯುತ್ತದೆ. ಬೃಹತ್ ಕಲ್ಲುಗಳು, ಬೆಟ್ಟಗಳು ಹಾಗೂ ಸುಂದರ ದೃಶ್ಯ ಕಣಿವೆಗಳು ಸುತ್ತಮುತ್ತ ಕಾಣುತ್ತವೆ.

ಈ ಕೋಟೆಯನ್ನು ರಾಷ್ಟ್ರಕೂಟರು, ಚಾಲುಕ್ಯರು ಹಾಗೂ ನಾಯಕರು ನಿರ್ಮಿಸಲು ಸಹಾಯ ಮಾಡಿದ್ದಾರೆ. ನಂತರ ಹೈದರಾಲಿ ಹಾಗೂ ಅವನ ಮಗ ಟಿಪ್ಪು ಸುಲ್ತಾನ್ ಆಡಳಿತ ನಡೆಸಿದರು. ಈ ಕೋಟೆಯನ್ನು ಏಳು ಗೋಡೆಗಳ ನಡುವೆ ನಿರ್ಮಿಸಲಾಗಿದೆ.

ಇಲ್ಲಿ ಮಸೀದಿ, ಗೋದಾಮು ಹಾಗೂ ಹಳೆಯ ದೇವಸ್ಥಾನಗಳಿವೆ. ಮೇಲಿನ ಕೋಟೆಯಲ್ಲಿ ಹದಿನೆಂಟು ದೇವಸ್ಥಾನಗಳಿವೆ ಹಾಗೂ ಕೆಳಗಿನ ಕೋಟೆಯಲ್ಲಿ ಒಂದು ದೊಡ್ಡ ದೇವಸ್ಥಾನವಿದೆ. ಹಿಡಿಂಬೇಶ್ವರ ದೇವಸ್ಥಾನ ಪ್ರಮುಖವಾಗಿದೆ.

ಕನ್ನಡದಲ್ಲಿ ಈ ಕೋಟೆಯನ್ನು ಕಲ್ಲಿನ ಕೋಟೆ, ಉಕ್ಕಿನ ಕೋಟೆ ಹಾಗೂ ಏಳು ಸುತ್ತಿನ ಕೋಟೆ ಎಂದು ಕರೆಯುತ್ತಾರೆ.

ಓಬವ್ವನ ಶೌರ್ಯ :

ಈ ಕೋಟೆಯಲ್ಲಿ ನಡೆದ ಅತ್ಯಂತ ಪ್ರಮುಖ ಘಟನೆ ಒಣಕೆ ಓಬವ್ವನ ಸಾಹಸವಾಗಿದೆ. ಅವಳು ಮದ್ದ ಹನುಮಪ್ಪ ಎಂಬ ಸೈನಿಕನ ಪತ್ನಿಯಾಗಿದ್ದಳು.

ಒಂದು ದಿನ, ಊಟದ ಸಮಯದಲ್ಲಿ ಓಬವ್ವ ಕೋಟೆಯ ಬಿರುಕು (ಒಣಕೆ ಕಿಂಡಿ) ಬಳಿ ಕಾವಲು ಕಾಯುತ್ತಿದ್ದಳು. ಈ ಸ್ಥಳದಲ್ಲಿ ಒಬ್ಬರೇ ಒಳಬರಬಹುದಾದಷ್ಟು ಸಣ್ಣ ದಾರಿ ಇತ್ತು.

ಕೆಲವು ಶತ್ರು ಸೈನಿಕರು ಒಳನುಸುಳಲು ಪ್ರಯತ್ನಿಸುತ್ತಿರುವುದನ್ನು ಗಮನಿಸಿದ ಅವಳು, ತಕ್ಷಣ ಒಣಕೆಯನ್ನು ಹಿಡಿದು ಒಬ್ಬೊಬ್ಬರಾಗಿ ಶತ್ರುಗಳನ್ನು ಹೊಡೆದು ಕೊಂದಳು.

ಮದ್ದ ಹನುಮಪ್ಪನು ಬರುವಷ್ಟರಲ್ಲಿ ಅನೇಕ ಶತ್ರುಗಳು ಸತ್ತಿದ್ದರು. ನಂತರ ಉಳಿದ ಸೈನಿಕರನ್ನು ಕರೆದೊಯ್ದು ಶತ್ರುಗಳನ್ನು ಸಂಪೂರ್ಣವಾಗಿ ಸೋಲಿಸಲಾಯಿತು.

ಈ ಸಾಹಸದಿಂದ ಚಿತ್ರದುರ್ಗ ಕೋಟೆ ಶತ್ರುಗಳಿಂದ ರಕ್ಷಿಸಲ್ಪಟ್ಟಿತು. ಇಂದಿಗೂ ಈ ಘಟನೆಯನ್ನು “ಒಣಕೆ ಓಬವ್ವ” ಎಂದು ಗೌರವದಿಂದ ಸ್ಮರಿಸಲಾಗುತ್ತದೆ.


NOTES :

ಚಿತ್ರದುರ್ಗ ಕೋಟೆ ಯ ಒಳಗೆ ಏಳು ಬೆಟ್ಟಗಳು ಅಂತರ್ಗತವಾಗಿದ್ದು, ಏಳು ಸುತ್ತಿನ ಈ ಕೋಟೆಯ 3 ಸುತ್ತನ್ನು ನೆಲದ ಮೇಲೂ ಮತ್ತು ಉಳಿದ 4 ಸುತ್ತನ್ನು ಬೆಟ್ಟಗಳ ಮೇಲೂ ನಿರ್ಮಿಸಲಾಗಿದೆ. ಕೋಟೆಯಲ್ಲಿ ಒಟ್ಟು 19 ಬಾಗಿಲುಗಳು, 35 ಗುಪ್ತ ಮಾರ್ಗಗಳು, 35 ದಿಡ್ಡಿ ಬಾಗಿಲುಗಳು ಹಾಗೂ 4 ಕಳ್ಳಬಾಗಿಲುಗಳಿವೆ.

*ಕೋಟೆಯ ವಿನ್ಯಾಸ ಮತ್ತು ಬಾಗಿಲುಗಳು
ಪೂರ್ವ ದಿಕ್ಕಿನಿಂದ ಬೆಟ್ಟದ ಅರಮನೆ ಪ್ರದೇಶ ತಲುಪಲು 9 ಬಾಗಿಲುಗಳನ್ನು ದಾಟಬೇಕು. ಈ ದಿಕ್ಕಿನ ಪ್ರಮುಖ ದ್ವಾರವನ್ನು ರಂಗಯ್ಯನ ಬಾಗಿಲು ಅಥವಾ ಸಿರಾದರ್ವಾಜ ಎಂದು ಕರೆಯುತ್ತಾರೆ.

1ನೇ ಸುತ್ತಿನಲ್ಲಿ ➝ ಉತ್ಸವಾಂಬಾ ದೇಗುಲ
2ನೇ ಬಾಗಿಲು ➝ ಗಾರೆ ಬಾಗಿಲು
3ನೇ ಬಾಗಿಲು ➝ ಕಾಮನ ಬಾಗಿಲು (ಎಣ್ಣೆಕೊಳ, ಗವಿ)
4ನೇ ಬಾಗಿಲು ➝ ವೀರಭದ್ರ ಕೊತ್ತಳ
5ನೇ & 6ನೇ ಬಾಗಿಲು ➝ ಸುಲಭವಾಗಿ ಕಾಣದಂತೆ ನಿರ್ಮಾಣ
7ನೇ ಬಾಗಿಲು ➝ ಏಕನಾಥೇಶ್ವರಿ ದೇವಾಲಯ
8ನೇ ಬಾಗಿಲು ➝ ಬೃಹನ್ಮಠ, ಸಂಪಿಗೆ ಸಿದ್ದೇಶ್ವರ, ಹಿಡಿಂಬೇಶ್ವರ ದೇವಾಲಯ, ತುಪ್ಪದ ಕೊಳ
9ನೇ ಬಾಗಿಲು ➝ ಗೋಪಾಲಕೃಷ್ಣ ದೇಗುಲ

ಇಲ್ಲಿ ಮದ್ದಿನ ಮನೆ, ಗುಪ್ತ ಗುಹೆಗಳು, ಹೊಂಡಗಳು ಮತ್ತು ಅರಮನೆ ಬಯಲುಗಳು ಕಂಡುಬರುತ್ತವೆ.

*ರಕ್ಷಣಾ ವ್ಯವಸ್ಥೆ
ಈ ಕೋಟೆ ಬೆಟ್ಟಗಳ ಮಧ್ಯದಲ್ಲಿರುವುದರಿಂದ ಸ್ವಾಭಾವಿಕ ರಕ್ಷಣೆ ಹೊಂದಿದೆ. ಜೊತೆಗೆ ಬೆಟ್ಟಗಳ ಮೇಲಿನ ಬತ್ತೇರಿಗಳು ಶತ್ರು ಪ್ರವೇಶವನ್ನು ತಡೆಯುತ್ತವೆ.

*ಪ್ರಮುಖ ಬತ್ತೇರಿಗಳು:
ನೆಲ್ಲಿಕಾಯಿ ಸಿದ್ದೇಶ್ವರ
ಝಂಡಾ ಬತ್ತೇರಿ
ಲಾಲ್ ಬತ್ತೇರಿ
ತುಪ್ಪದ ಕೊಳದ ಬತ್ತೇರಿ
ಕಹಳೆ ಬತ್ತೇರಿ
ಬಸವನ ಬತ್ತೇರಿ

*ನಿರ್ಮಾಣ ವೈಶಿಷ್ಟ್ಯ
ಭಾರೀ ಕಲ್ಲುಗಳನ್ನು ಆಯತಾಕಾರವಾಗಿ ಕತ್ತರಿಸಿ ನಿರ್ಮಾಣ
14ಕ್ಕೂ ಹೆಚ್ಚು ದೇವಾಲಯಗಳು
ಗೋಡೆಗಳ ಎತ್ತರ: 15–40 ಅಡಿ
ಹೊರಗಿನ 3 ಸುತ್ತುಗಳಲ್ಲಿ ಕಂದಕಗಳು
ಕೆಲವು ಕಡೆ ಇಟ್ಟಿಗೆ ಗೋಡೆಗಳು

*ಇತಿಹಾಸ
ಈ ಕೋಟೆಯಲ್ಲಿ ನಡೆದ ಯುದ್ಧದಲ್ಲಿ ಹೈದರಾಲಿ ವೀರ ಮದಕರಿ ನಾಯಕನನ್ನು ಸೋಲಿಸಿದನು.
ಮೊದಲ ಆಕ್ರಮಣ ➝ 1760
ಎರಡನೇ ಆಕ್ರಮಣ ➝ 1770
ಅಂತಿಮ ಆಕ್ರಮಣ ➝ 1779
ನಂತರ ಕೋಟೆಯ ಆಡಳಿತ ಮೈಸೂರು ಸರ್ಕಾರದ ವಶವಾಯಿತು.
ಈ ಪ್ರದೇಶವನ್ನು ಮೊದಲು ತಿಮ್ಮಪ್ಪ ನಾಯಕ ಆಡಳಿತ ನಡೆಸಿದ್ದು, ನಂತರ ಮದಕರಿ ನಾಯಕ ಮತ್ತು ಭರಮಪ್ಪ ನಾಯಕ ಆಡಳಿತ ನಡೆಸಿದರು.

*ಭೌಗೋಳಿಕ ಮಾಹಿತಿ
ಹಂಪಿ ಯಿಂದ ಸುಮಾರು 120 ಕಿಮೀ
ಬೆಂಗಳೂರು ಯಿಂದ ಸುಮಾರು 200 ಕಿಮೀ ದೂರ
ಕೋಟೆ ವೇದಾವತಿ ನದಿ ಕಣಿವೆಯ ಮಧ್ಯದಲ್ಲಿದ್ದು, ತುಂಗಭದ್ರ ನದಿ ವಾಯವ್ಯ ಭಾಗದಲ್ಲಿ ಹರಿಯುತ್ತದೆ.

*ನಿರ್ಮಾಣದಲ್ಲಿ ಪಾಲ್ಗೊಂಡವರು
ರಾಷ್ಟ್ರಕೂಟರು
ಚಾಲುಕ್ಯರು
ನಾಯಕರು
ನಂತರ ಟಿಪ್ಪು ಸುಲ್ತಾನ್ ಆಡಳಿತ ನಡೆಸಿದರು.

*ದಂತಕಥೆ
ಮಹಾಭಾರತ ಕಾಲದಲ್ಲಿ ಹಿಡಿಂಬಸುರ ಎಂಬ ದೈತ್ಯ ಇಲ್ಲಿ ವಾಸಿಸುತ್ತಿದ್ದನು. ಭೀಮ ಅವನನ್ನು ಸಂಹರಿಸಿದನೆಂದು ಕಥೆ ಇದೆ.

*ಚಲನಚಿತ್ರಗಳು
ಈ ಕೋಟೆಯಲ್ಲಿ ಹಲವು ಕನ್ನಡ ಸಿನಿಮಾಗಳ ಚಿತ್ರೀಕರಣ ನಡೆದಿದೆ. ಪ್ರಮುಖ ಚಿತ್ರಗಳು:
ನಾಗರಹಾವು
ಹಂಸಗೀತೆ

*ಒನಕೆ ಓಬವ್ವನ ಶೌರ್ಯ
ಚಿತ್ರದುರ್ಗ ಕೋಟೆಯ ಇತಿಹಾಸದಲ್ಲಿ ಅತ್ಯಂತ ಪ್ರಸಿದ್ಧ ಘಟನೆ ಎಂದರೆ ಒಣಕೆ ಓಬವ್ವನ ಸಾಹಸ.
ಒಣಕೆ ಓಬವ್ವ ತನ್ನ ಗಂಡ ಮದ್ದ ಹನುಮಪ್ಪನ ಗೈರುಹಾಜರಿಯಲ್ಲಿ ಕೋಟೆಯ ಬಿರುಕು (ಒಣಕೆ ಕಿಂಡಿ) ಬಳಿ ಕಾವಲು ಕಾಯುತ್ತಿದ್ದಳು. ಶತ್ರುಗಳು ಒಳನುಸುಳಲು ಪ್ರಯತ್ನಿಸಿದಾಗ, ಅವಳು ಒಣಕೆಯನ್ನು ಉಪಯೋಗಿಸಿ ಒಬ್ಬೊಬ್ಬರಾಗಿ ಅವರನ್ನು ಹೊಡೆದು ಕೊಂದಳು.
ಈ ಸಾಹಸದಿಂದ ಕೋಟೆ ರಕ್ಷಿಸಲ್ಪಟ್ಟಿತು. ಇಂದಿಗೂ ಅವಳನ್ನು ಕನ್ನಡಿಗರು ಅಪಾರ ಗೌರವದಿಂದ ಸ್ಮರಿಸುತ್ತಾರೆ.

*ವಿಶೇಷತೆ
ಚಿತ್ರದುರ್ಗ ಕೋಟೆಯನ್ನು ಕನ್ನಡದಲ್ಲಿ
ಕಲ್ಲಿನ ಕೋಟೆ
ಉಕ್ಕಿನ ಕೋಟೆ
ಏಳು ಸುತ್ತಿನ ಕೋಟೆ ಎಂದು ಕರೆಯುತ್ತಾರೆ.
ಇದು ಕರ್ನಾಟಕದ ಇತಿಹಾಸ, ವಾಸ್ತುಶಿಲ್ಪ ಮತ್ತು ಶೌರ್ಯದ ಪ್ರತೀಕವಾಗಿದೆ.


Leave a Reply

Your email address will not be published. Required fields are marked *

error: Content Copyright protected !!