ಜಾಗತಿಕ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ 2026 : 157ನೇ ಸ್ಥಾನಕ್ಕೆ ಕುಸಿದ ಭಾರತ
ಅಂತರರಾಷ್ಟ್ರೀಯ ಮಾಧ್ಯಮ ಸ್ವಾತಂತ್ರ್ಯ ಸಂಸ್ಥೆ Reporters Without Borders(RSF) ಪ್ರಕಟಿಸಿದ ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ 2026 ವರದಿ ಪ್ರಕಾರ, ಜಾಗತಿಕ ಮಟ್ಟದಲ್ಲಿ ಪತ್ರಿಕಾ ಸ್ವಾತಂತ್ರ್ಯ ಕಳೆದ 25 ವರ್ಷಗಳಲ್ಲಿ ಅತ್ಯಂತ ಕಡಿಮೆ ಮಟ್ಟಕ್ಕೆ ಕುಸಿದಿದೆ. 180 ದೇಶಗಳನ್ನು ಒಳಗೊಂಡ ಈ ಸೂಚ್ಯಂಕದಲ್ಲಿ ಭಾರತ 157ನೇ ಸ್ಥಾನಕ್ಕೆ ಇಳಿದಿದೆ. ದೇಶದ ಪತ್ರಿಕಾ ಸ್ವಾತಂತ್ರ್ಯದ ಸ್ಥಿತಿಯನ್ನು “ಅತ್ಯಂತ ಗಂಭೀರ (Very Serious)” ಎಂದು ವರ್ಗೀಕರಿಸಲಾಗಿದೆ.
ಈ ಪಟ್ಟಿಯಲ್ಲಿ ನಾರ್ವೆ ನಿರಂತರವಾಗಿ 10ನೇ ಬಾರಿ ಮೊದಲ ಸ್ಥಾನದಲ್ಲಿದ್ದರೆ, ಎರಿಟ್ರಿಯಾ ಮೂರನೇ ವರ್ಷವೂ ಕೊನೆಯ ಸ್ಥಾನದಲ್ಲೇ ಉಳಿದಿದೆ. ಯುರೋಪಿನ ರಾಷ್ಟ್ರಗಳು ಮತ್ತೆ ಮುನ್ನಡೆ ಕಾಯ್ದುಕೊಂಡಿವೆ. 2026ರ ವರದಿಯಲ್ಲಿ “Criminalisation of Journalism” ಎಂಬ ಪ್ರವೃತ್ತಿ ಹೆಚ್ಚುತ್ತಿರುವುದನ್ನು ಸೂಚಿಸಲಾಗಿದೆ.
ಪತ್ರಿಕಾ ಸ್ವಾತಂತ್ರ್ಯ 25 ವರ್ಷಗಳಲ್ಲೇ ತಳಮಟ್ಟ ತಲುಪಿದ್ದು 50% ಕ್ಕೂ ಹೆಚ್ಚು ದೇಶಗಳು ಕಷ್ಟಕರ ವರ್ಗದಲ್ಲಿ, 60% ದೇಶಗಳಲ್ಲಿ ಕಾನೂನು ಸೂಚ್ಯಂಕ ಕುಸಿತ, 80% ದೇಶಗಳಲ್ಲಿ ಪತ್ರಕರ್ತರ ರಕ್ಷಣಾ ವ್ಯವಸ್ಥೆಗಳು ದುರ್ಬಲವಾಗಿದೆ. ಇದರಿಂದ ಪತ್ರಿಕಾ ಸ್ವಾತಂತ್ರ್ಯದ ಸಂಕಷ್ಟವು ಕೆಲವು ದೇಶಗಳಿಗೆ ಮಾತ್ರ ಸೀಮಿತವಲ್ಲ, ಜಾಗತಿಕ ಮಟ್ಟದಲ್ಲಿ ವ್ಯಾಪಕವಾಗಿರುವ ಸಮಸ್ಯೆಯಾಗಿದೆ ಎಂಬುದು ಸ್ಪಷ್ಟವಾಗಿದೆ.
ದಕ್ಷಿಣ ಏಷ್ಯಾದ ಚಿತ್ರಣ :
ದಕ್ಷಿಣ ಏಷ್ಯಾದಲ್ಲಿ ಭಾರತ ಸೇರಿದಂತೆ ಪಾಕಿಸ್ತಾನ, ಅಫ್ಘಾನಿಸ್ತಾನ, ಭೂತಾನ್ ಮತ್ತು ಬಾಂಗ್ಲಾದೇಶ ದೇಶಗಳಿಗೆ “ಅತ್ಯಂತ ಗಂಭೀರ” ವರ್ಗೀಕರಣ ಲಭಿಸಿದೆ. ಇನ್ನು ನೇಪಾಳ, ಶ್ರೀಲಂಕಾ ಮತ್ತು ಮಾಲ್ಡೀವ್ಸ್ ದೇಶಗಳಿಗೆ “Difficult” ವರ್ಗ ನೀಡಲಾಗಿದೆ.
RSF ಸೂಚ್ಯಂಕದಲ್ಲಿ ಐದು ಹಂತಗಳಿವೆ: Good → Satisfactory → Problematic → Difficult → Very Serious
ಜಾಗತಿಕ ಸ್ಥಿತಿ ಚಿಂತಾಜನಕ
ವರದಿ ಪ್ರಕಾರ, ಇತಿಹಾಸದಲ್ಲೇ ಮೊದಲ ಬಾರಿಗೆ ಅರ್ಧಕ್ಕಿಂತ ಹೆಚ್ಚು ದೇಶಗಳು “ಕಷ್ಟಕರ” ಅಥವಾ “ಅತ್ಯಂತ ಗಂಭೀರ” ವರ್ಗಕ್ಕೆ ಸೇರಿವೆ. ಇದು ಪತ್ರಿಕೋದ್ಯಮದ ಸ್ವಾತಂತ್ರ್ಯ ಮತ್ತು ಭದ್ರತೆ ಜಾಗತಿಕವಾಗಿ ಹದಗೆಟ್ಟಿರುವುದನ್ನು ಸೂಚಿಸುತ್ತದೆ.
ಭಾರತದ ಸ್ಥಿತಿ :
ಭಾರತದ ಸ್ಥಾನಮಾನ ಕಳೆದ ದಶಕದಲ್ಲಿ ನಿರಂತರ ಕುಸಿತ ಕಂಡಿದೆ. 2014ರಲ್ಲಿ 140ನೇ ಸ್ಥಾನದಲ್ಲಿದ್ದ ಭಾರತ ಈಗ 157ನೇ ಸ್ಥಾನದಲ್ಲಿದೆ. ವರದಿ ಪ್ರಕಾರ, 110ಕ್ಕೂ ಹೆಚ್ಚು ದೇಶಗಳಂತೆ ಭಾರತದಲ್ಲಿಯೂ ಮಾಧ್ಯಮಕ್ಕೆ ಸಂಬಂಧಿಸಿದ ಕಾನೂನು ವ್ಯವಸ್ಥೆ ದುರ್ಬಲಗೊಳ್ಳುತ್ತಿದೆ ಎಂಬ ಆತಂಕ ವ್ಯಕ್ತವಾಗಿದೆ. “ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯವು ಬಿಕ್ಕಟ್ಟಿನಲ್ಲಿದೆ,” ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
*2025ರಲ್ಲಿ 151ನೇ ಸ್ಥಾನದಲ್ಲಿದ್ದ ಭಾರತ, ಈಗ 6 ಸ್ಥಾನಗಳ ಕುಸಿತ ಕಂಡು 157ನೇ ಸ್ಥಾನಕ್ಕೆ ತಲುಪಿದೆ.
*ಪತ್ರಿಕಾ ಸ್ವಾತಂತ್ರ್ಯದ ಸೂಚ್ಯಂಕದಲ್ಲಿ ‘ಅತ್ಯಂತ ಗಂಭೀರ’ ಎಂಬುದು ಅತ್ಯಂತ ಕಳಪೆ ಅಥವಾ ಅಪಾಯಕಾರಿ ಮಟ್ಟದ ವರ್ಗೀಕರಣವಾಗಿದೆ.
*ಪತ್ರಕರ್ತರ ವಿರುದ್ಧ ಹೆಚ್ಚುತ್ತಿರುವ ಹಿಂಸಾಚಾರ, ಮಾಧ್ಯಮಗಳ ಮಾಲೀಕತ್ವವು ಕೆಲವೇ ಜನರ ಕೈಯಲ್ಲಿ ಕೇಂದ್ರೀಕೃತವಾಗಿರುವುದು ಮತ್ತು ರಾಜಕೀಯ ಪ್ರಭಾವದ ಅಡಿಯಲ್ಲಿ ಮಾಧ್ಯಮಗಳು ಕಾರ್ಯನಿರ್ವಹಿಸುತ್ತಿರುವುದು ಈ ಕುಸಿತಕ್ಕೆ ಪ್ರಮುಖ ಕಾರಣ ಎಂದು ವರದಿ ತಿಳಿಸಿದೆ.
*ಭಾರತದ ಹೊಸ ‘ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣಾ ಕಾಯ್ದೆ’ (DPDP Act) ಮತ್ತು ಅದರ ನಿಯಮಗಳು ಪತ್ರಕರ್ತರಿಗೆ ಸಾರ್ವಜನಿಕ ಹಿತಾಸಕ್ತಿಯ ಮಾಹಿತಿ ಪಡೆಯಲು ಅಡ್ಡಿಯಾಗುತ್ತಿವೆ ಎಂದು RSF ಬೆರಳು ಮಾಡಿದೆ.
ನೆರೆ ದೇಶಗಳೊಂದಿಗೆ ಹೋಲಿಕೆ ಮಾಡಿದರೆ, ಭಾರತದ ನೆರೆಹೊರೆಯ ದೇಶಗಳಾದ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶಗಳೂ ಸಹ “ಅತ್ಯಂತ ಗಂಭೀರ” ವಿಭಾಗದಲ್ಲೇ ಇವೆ. ಆದರೆ, ಭೂತಾನ್ ಮತ್ತು ಶ್ರೀಲಂಕಾದಂತಹ ದೇಶಗಳು ಭಾರತಕ್ಕಿಂತ ಉತ್ತಮ ಸ್ಥಾನದಲ್ಲಿವೆ.
ನೇಪಾಳ – 87 ಸ್ಥಾನ
ಮಾಲ್ಡೀವ್ಸ್ – 108 ಸ್ಥಾನ
ಶ್ರೀಲಂಕಾ – 134 ಸ್ಥಾನ
ಭೂಟಾನ್ – 150 ಸ್ಥಾನ
ಬಾಂಗ್ಲಾದೇಶ – 152 ಸ್ಥಾನ
ಪಾಕಿಸ್ತಾನ – 153 ಸ್ಥಾನ
ಸೂಚ್ಯಂಕದ ಮಾನದಂಡಗಳು :
ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕವು ದೇಶಗಳನ್ನು ಈ ಐದು ಪ್ರಮುಖ ಅಂಶಗಳ ಆಧಾರದ ಮೇಲೆ ಮೌಲ್ಯಮಾಪನ ಮಾಡುತ್ತದೆ:
ರಾಜಕೀಯ ಪರಿಸರ
ಕಾನೂನು ಚೌಕಟ್ಟು
ಆರ್ಥಿಕ ಪರಿಸ್ಥಿತಿಗಳು
ಸಾಮಾಜಿಕ ಸಂದರ್ಭ
ಪತ್ರಕರ್ತರ ಭದ್ರತೆ
ಅತ್ಯುತ್ತಮ 10 ದೇಶಗಳು (2026) :
ನಾರ್ವೆ
ನೆದರ್‌ಲ್ಯಾಂಡ್ಸ್
ಎಸ್ಟೋನಿಯಾ
ಡೆನ್ಮಾರ್ಕ್
ಸ್ವೀಡನ್
ಫಿನ್‌ಲ್ಯಾಂಡ್
ಐರ್ಲೆಂಡ್
ಸ್ವಿಟ್ಜರ್‌ಲ್ಯಾಂಡ್
ಲಕ್ಸೆಂಬರ್ಗ್
ಪೋರ್ಟುಗಲ್
ಅತ್ಯಂತ ಕೆಟ್ಟ 10 ದೇಶಗಳು(2026) :
ಅಜರ್‌ಬೈಜಾನ್ (171)
ರಷ್ಯಾ (172)
ತುರ್ಕ್‌ಮೆನಿಸ್ತಾನ್ (173)
ವಿಯೆಟ್ನಾಂ (174)
ಅಫ್ಘಾನಿಸ್ತಾನ್ (175)
ಸೌದಿ ಅರೇಬಿಯಾ (176)
ಇರಾನ್ (177)
ಚೀನಾ (178)
ಉತ್ತರ ಕೊರಿಯಾ (179)
ಎರಿಟ್ರಿಯಾ (180)
ಮುಖ್ಯ ಸಮಸ್ಯೆಗಳು:
ರಾಷ್ಟ್ರೀಯ ಭದ್ರತಾ ಕಾನೂನುಗಳ ದುರುಪಯೋಗ
ತುರ್ತು ಕಾನೂನುಗಳ ಮೂಲಕ ವರದಿಗಾರಿಕೆಗೆ ಅಡ್ಡಿ
ಸ್ವತಂತ್ರ ಪತ್ರಕರ್ತರ ಮೇಲೆ ಕಾನೂನು ಒತ್ತಡ ಮತ್ತು ಕಿರುಕುಳ
Reporters Without Borders – RSF ಸಂಸ್ಥೆ ಬಗ್ಗೆ :
ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್’ (Reporters Without Borders – RSF) ಅಥವಾ ಫ್ರೆಂಚ್ ಭಾಷೆಯಲ್ಲಿ ‘ರಿಪೋರ್ಟರ್ಸ್ ಸ್ಯಾನ್ಸ್ ಫ್ರಾಂಟಿಯರ್ಸ್’ ಎನ್ನುವುದು ಪತ್ರಿಕಾ ಸ್ವಾತಂತ್ರ್ಯವನ್ನು ರಕ್ಷಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಒಂದು ಅಂತರರಾಷ್ಟ್ರೀಯ ಲಾಭರಹಿತ ಮತ್ತು ಸರ್ಕಾರೇತರ ಸಂಸ್ಥೆಯಾಗಿದೆ. ಇದನ್ನು 1985ರಲ್ಲಿ ಫ್ರಾನ್ಸ್‌ನ ಮಾಂಟ್‌ಪೆಲ್ಲಿಯರ್‌ನಲ್ಲಿ ನಾಲ್ವರು ಪತ್ರಕರ್ತರು ಸ್ಥಾಪಿಸಿದರು. ಇದರ ಕೇಂದ್ರ ಕಚೇರಿ ಫ್ರಾನ್ಸ್ ನ ಪ್ಯಾರಿಸ್, ನಲ್ಲಿದೆ.
ಇದರ ಮುಖ್ಯ ಧ್ಯೇಯ: ವಿಶ್ವದಾದ್ಯಂತ ಮಾಹಿತಿ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸುವುದು ಹಾಗೂ ಪತ್ರಕರ್ತರ ವಿರುದ್ಧದ ದೌರ್ಜನ್ಯಗಳನ್ನು ಜಗತ್ತಿಗೆ ತಿಳಿಸುವುದು.
ಪ್ರಮುಖ ಕಾರ್ಯಗಳು: ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ: ಪ್ರತಿ ವರ್ಷ ಈ ಸಂಸ್ಥೆಯು ಜಗತ್ತಿನ 180 ದೇಶಗಳಲ್ಲಿ ಪತ್ರಿಕಾ ಸ್ವಾತಂತ್ರ್ಯ ಯಾವ ಸ್ಥಿತಿಯಲ್ಲಿದೆ ಎಂಬ ವರದಿಯನ್ನು ಬಿಡುಗಡೆ ಮಾಡುತ್ತದೆ.
ಪತ್ರಕರ್ತರ ರಕ್ಷಣೆ: ಕರ್ತವ್ಯದ ಅವಧಿಯಲ್ಲಿ ಬಂಧಿತರಾದ ಅಥವಾ ಕಿರುಕುಳಕ್ಕೊಳಗಾದ ಪತ್ರಕರ್ತರಿಗೆ ಕಾನೂನು ನೆರವು ಮತ್ತು ಆರ್ಥಿಕ ಸಹಾಯವನ್ನು ಒದಗಿಸುತ್ತದೆ.
ಸುರಕ್ಷತಾ ತರಬೇತಿ: ಯುದ್ಧ ಪೀಡಿತ ಪ್ರದೇಶಗಳಲ್ಲಿ ಕೆಲಸ ಮಾಡುವ ಪತ್ರಕರ್ತರಿಗೆ ಸುರಕ್ಷತಾ ಸಲಕರಣೆಗಳು (ಬುಲೆಟ್ ಪ್ರೂಫ್ ಜಾಕೆಟ್‌ಗಳು ಇತ್ಯಾದಿ) ಮತ್ತು ಡಿಜಿಟಲ್ ಸುರಕ್ಷತೆಯ ಬಗ್ಗೆ ತರಬೇತಿ ನೀಡುತ್ತದೆ.
ಸೆನ್ಸಾರ್‌ಶಿಪ್ ವಿರುದ್ಧ ಹೋರಾಟ: ಮಾಧ್ಯಮಗಳ ಮೇಲೆ ಸರ್ಕಾರದ ಹತೋಟಿ ಅಥವಾ ಸೆನ್ಸಾರ್‌ಶಿಪ್ ಹೇರುವುದನ್ನು ಈ ಸಂಸ್ಥೆ ವಿರೋಧಿಸುತ್ತದೆ.
ಈ ಸಂಸ್ಥೆಯು ವಿಶ್ವಸಂಸ್ಥೆ (UN), ಯುನೆಸ್ಕೋ (UNESCO) ಮತ್ತು ಕೌನ್ಸಿಲ್ ಆಫ್ ಯುರೋಪ್‌ನಂತಹ ದೊಡ್ಡ ಸಂಸ್ಥೆಗಳೊಂದಿಗೆ ಸಲಹಾ ಸ್ಥಾನಮಾನವನ್ನು ಹೊಂದಿದೆ. ಪತ್ರಿಕೋದ್ಯಮದ ಮೇಲೆ ನಡೆಯುವ ದಾಳಿಗಳನ್ನು ಪತ್ತೆಹಚ್ಚಲು ಇದು ಜಗತ್ತಿನಾದ್ಯಂತ 130ಕ್ಕೂ ಹೆಚ್ಚು ದೇಶಗಳಲ್ಲಿ ವರದಿಗಾರರ ಜಾಲವನ್ನು ಹೊಂದಿದೆ.
#GlobalPressFreedom #WorldPressFreedomIndex2026 #PressFreedomIndex Report

