ಇದೇ ಮೊದಲ ಬಾರಿಗೆ ಭಾರತದ ಫಲವತ್ತತೆ ದರ (Fertility Rate)ದಲ್ಲಿ ಭಾರಿ ಕುಸಿತ
ಭಾರತದಲ್ಲಿ ಒಟ್ಟು ಫಲವತ್ತತೆ ದರ (Total Fertility Rate – TFR) ಮೊದಲ ಬಾರಿಗೆ ಜನಸಂಖ್ಯೆಯ ಬದಲಿ ಮಟ್ಟವಾದ 2.1ಕ್ಕಿಂತ ಕೆಳಗೆ ಇಳಿದು 2024ರಲ್ಲಿ 1.9ಕ್ಕೆ ತಲುಪಿದೆ. ಭಾರತ ಮಹಾ ನೋಂದಣಾಧಿಕಾರಿ ಹಾಗೂ ಜನಗಣತಿ ಆಯುಕ್ತರ ಕಚೇರಿ ಬಿಡುಗಡೆ ಮಾಡಿದ ಮಾದರಿ ನೋಂದಣಿ ವ್ಯವಸ್ಥೆ (SRS-Sample Registration System) 2024ರ ವರದಿ ಈ ಮಾಹಿತಿಯನ್ನು ಬಹಿರಂಗಪಡಿಸಿದೆ. ಇದು ದೇಶದ ಜನಸಂಖ್ಯಾ ಬೆಳವಣಿಗೆಯಲ್ಲಿ ಅತ್ಯಂತ ಮಹತ್ವದ ತಿರುವಾಗಿದ್ದು, ಭಾರತವು ಹೆಚ್ಚು ಸ್ಥಿರ ಜನಸಂಖ್ಯಾ ರಚನೆಯತ್ತ ಸಾಗುತ್ತಿರುವುದನ್ನು ಇದು ಸ್ಪಷ್ಟಪಡಿಸುತ್ತದೆ. ಭವಿಷ್ಯದ ಸಾಮಾಜಿಕ ಹಾಗೂ ಆರ್ಥಿಕ ನೀತಿಗಳ ಮೇಲೆ ಇದರ ಮಹತ್ವದ ಪರಿಣಾಮ ಬೀರುವ ಸಾಧ್ಯತೆ ಇದೆ. ಭಾರತದಲ್ಲಿ ಜನನ ಪ್ರಮಾಣದ ಕುಸಿತ ಮತ್ತು ವೃದ್ಧರ ಜನಸಂಖ್ಯೆ ಹೆಚ್ಚಾಗುತ್ತಿರುವ ಪ್ರವೃತ್ತಿ ಸ್ಪಷ್ಟವಾಗಿ ಗೋಚರಿಸುತ್ತಿದ್ದು, ಇದು ಭವಿಷ್ಯದ ಸಾಮಾಜಿಕ, ಆರ್ಥಿಕ ಹಾಗೂ ಸರ್ಕಾರದ ನೀತಿ ನಿರೂಪಣೆಗಳ ಮೇಲೆ ಭಾರಿ ಪರಿಣಾಮ ಬೀರುವ ಸಾಧ್ಯತೆ ಇದೆ.
1985ರಲ್ಲಿ ಮಹಿಳೆಯೊಬ್ಬರಿಗೆ ಸರಾಸರಿ 4.6 ಮಕ್ಕಳಿದ್ದರೆ, 2024ರಲ್ಲಿ ಅದು 1.9ಕ್ಕೆ ಇಳಿದಿದೆ. ಇದು ದೇಶದ ಜನಸಂಖ್ಯಾ ಬೆಳವಣಿಗೆಯಲ್ಲಿ ಮಹತ್ವದ ತಿರುವಾಗಿದ್ದು, ಭಾರತ ಹೆಚ್ಚು ಸ್ಥಿರ ಜನಸಂಖ್ಯಾ ರಚನೆಯತ್ತ ಸಾಗುತ್ತಿದೆ ಎಂಬುದನ್ನು ಸೂಚಿಸುತ್ತದೆ. 1971ರಲ್ಲಿ ಸುಮಾರು 5.2ರಷ್ಟಿದ್ದ TFR ಇತ್ತು.
ಬಿಹಾರದಲ್ಲಿ 2.9ರೊಂದಿಗೆ ದೇಶದಲ್ಲೇ ಅತಿ ಹೆಚ್ಚು ಫಲವತ್ತತೆ ದರ ದಾಖಲಾಗಿದ್ದು, ದೆಹಲಿಯಲ್ಲಿ 1.2ರೊಂದಿಗೆ ಅತಿ ಕಡಿಮೆ ದರ ದಾಖಲಾಗಿದೆ. ರಾಷ್ಟ್ರೀಯ ಸರಾಸರಿ 1.9 ಆಗಿದೆ.
ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಕಡಿಮೆ ಜನನ ಪ್ರಮಾಣ, ಹೆಚ್ಚಿದ ಜೀವಿತಾವಧಿ ಹಾಗೂ ವೃದ್ಧ ಜನಸಂಖ್ಯೆ ಕಂಡುಬರುತ್ತಿದೆ. ಮತ್ತೊಂದೆಡೆ ಬಿಹಾರ ಮತ್ತು ಉತ್ತರ ಪ್ರದೇಶಗಳಲ್ಲಿ ಯುವಜನರ ಪ್ರಮಾಣ ಹೆಚ್ಚಾಗಿದ್ದು, ಫಲವತ್ತತೆ ದರವೂ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಾಗಿದೆ.
| ಫಲವತ್ತತೆ ದರ (Fertility Rate) ಎಂದರೇನು..? ಫಲವತ್ತತೆ ದರ (Fertility Rate) ಎಂದರೆ ಒಂದು ದೇಶದಲ್ಲಿ ಅಥವಾ ಪ್ರದೇಶದಲ್ಲಿ ಒಬ್ಬ ಮಹಿಳೆ ತನ್ನ ಸಂತಾನೋತ್ಪತ್ತಿ ಅವಧಿಯಲ್ಲಿ (ಸಾಮಾನ್ಯವಾಗಿ 15–49 ವರ್ಷ ವಯಸ್ಸಿನ ನಡುವೆ) ಸರಾಸರಿಯಾಗಿ ಎಷ್ಟು ಮಕ್ಕಳಿಗೆ ಜನ್ಮ ನೀಡುತ್ತಾಳೆ ಎಂಬುದನ್ನು ಸೂಚಿಸುವ ಅಂಕಿ. ಸಂಕ್ಷಪ್ತವಾಗಿ ಹೇಳಬೇಕೆಂದರೆ “ಒಬ್ಬ ಮಹಿಳೆ ತನ್ನ ಜೀವನಕಾಲದಲ್ಲಿ ಸರಾಸರಿಯಾಗಿ ಎಷ್ಟು ಮಕ್ಕಳಿಗೆ ಜನ್ಮ ನೀಡುತ್ತಾಳೆ ಎಂಬುದೇ ಫಲವತ್ತತೆ ದರ (Fertility Rate).” ಉದಾಹರಣೆ: ಫಲವತ್ತತೆ ದರ 2.1 ಇದ್ದರೆ, ಒಬ್ಬ ಮಹಿಳೆ ಸರಾಸರಿ 2.1 ಮಕ್ಕಳಿಗೆ ಜನ್ಮ ನೀಡುತ್ತಾಳೆ. 2.1 ಅನ್ನು Replacement Level Fertility ಎಂದು ಕರೆಯಲಾಗುತ್ತದೆ. ಅಂದರೆ ಜನಸಂಖ್ಯೆ ಸ್ಥಿರವಾಗಿರಲು ಅಗತ್ಯವಾದ ಕನಿಷ್ಠ ದರ. |
ಶಿಶು ಮರಣ ಪ್ರಮಾಣದಲ್ಲಿ ಅಸಮಾನತೆ :
ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮರಣ ಪ್ರಮಾಣ (U5MR) ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ತಲಾ 41 ಆಗಿದ್ದರೆ, ಕೇರಳದಲ್ಲಿ ಕೇವಲ 9 ಆಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಈ ಪ್ರಮಾಣ ನಗರ ಪ್ರದೇಶಗಳಿಗಿಂತ ಹೆಚ್ಚಾಗಿದೆ.
ಆಸ್ಪತ್ರೆಗಳಲ್ಲಿ ಹೆರಿಗೆ ಪ್ರಮಾಣ ಏರಿಕೆ :
ದೇಶದಲ್ಲಿ ಸಂಸ್ಥಾತ್ಮಕ ಹೆರಿಗೆಗಳು (Institutional Deliveries) ಹೆಚ್ಚುತ್ತಿದ್ದು, ಒಟ್ಟು ಹೆರಿಗೆಗಳಲ್ಲಿ 71.7% ಸರ್ಕಾರಿ ಆಸ್ಪತ್ರೆಗಳಲ್ಲಿ ನಡೆಯುತ್ತಿವೆ. ಜನನಿ ಸುರಕ್ಷಾ ಯೋಜನೆ (JSY) ಸೇರಿದಂತೆ ಹಲವು ಆರೋಗ್ಯ ಕಾರ್ಯಕ್ರಮಗಳು ಇದಕ್ಕೆ ನೆರವಾಗಿವೆ.
⮞ ಜನನ ಸಮಯದ ಲಿಂಗಾನುಪಾತ ಇನ್ನೂ ಸವಾಲು
2022-24ರ ಅವಧಿಯಲ್ಲಿ ದೇಶದ ಜನನ ಸಮಯದ ಲಿಂಗಾನುಪಾತವು 1,000 ಗಂಡು ಮಕ್ಕಳಿಗೆ 918 ಹೆಣ್ಣು ಮಕ್ಕಳು ಎಂಬ ಮಟ್ಟದಲ್ಲಿದೆ. ಉತ್ತರಾಖಂಡದಲ್ಲಿ ಅತಿ ಕಡಿಮೆ (872) ಹಾಗೂ ಛತ್ತೀಸ್‌ಗಢದಲ್ಲಿ ಅತಿ ಹೆಚ್ಚು (978) ಲಿಂಗಾನುಪಾತ ದಾಖಲಾಗಿದೆ.
⮞ ಆರೋಗ್ಯ ಸೇವೆಗಳ ಲಭ್ಯತೆ ಸೀಮಿತ
ದೇಶದಲ್ಲಿ 45.5% ಸಾವುಗಳು ಅರ್ಹ ವೈದ್ಯಕೀಯ ಸೇವೆ ದೊರೆಯದೆ ಸಂಭವಿಸುತ್ತಿವೆ. ಗ್ರಾಮೀಣ ಪ್ರದೇಶಗಳಲ್ಲಿ ಈ ಪ್ರಮಾಣ 48.9% ಆಗಿದ್ದು, ಆರೋಗ್ಯ ಸೇವೆಗಳ ಲಭ್ಯತೆ ಇನ್ನೂ ಸವಾಲಾಗಿಯೇ ಉಳಿದಿದೆ.
ಒಟ್ಟಾರೆ, ಭಾರತದಲ್ಲಿ ಜನನ ಪ್ರಮಾಣ ಕುಸಿತ ಮತ್ತು ವೃದ್ಧ ಜನಸಂಖ್ಯೆ ಹೆಚ್ಚಳದ ಪ್ರವೃತ್ತಿ ಸ್ಪಷ್ಟವಾಗುತ್ತಿದ್ದು, ಭವಿಷ್ಯದ ಸಾಮಾಜಿಕ ಹಾಗೂ ಆರ್ಥಿಕ ನೀತಿಗಳ ಮೇಲೆ ಇದರ ಮಹತ್ವದ ಪರಿಣಾಮ ಬೀರುವ ಸಾಧ್ಯತೆ ಇದೆ.
⮞ ಇದರ ಪರಿಣಾಮಗಳೇನು..?
ಈ ಬದಲಾವಣೆಯು ಜನಸಂಖ್ಯಾ ಲಾಭಾಂಶವನ್ನು (Demographic Dividend) ಮುಂದುವರಿಸುವ ಅವಕಾಶವನ್ನು ನೀಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಆದರೆ ದೀರ್ಘಕಾಲದಲ್ಲಿ ವಯಸ್ಕರ ಜನಸಂಖ್ಯೆ ಹೆಚ್ಚುತ್ತಾ, ಯುವಕರ ಸಂಖ್ಯೆ ಕಡಿಮೆಯಾಗುವ ಸಾಧ್ಯತೆ ಇದೆ. ಇದು ಉದ್ಯೋಗ, ಆರೋಗ್ಯ ಮತ್ತು ಪಿಂಚಣಿ ವ್ಯವಸ್ಥೆಗಳ ಮೇಲೆ ಪ್ರಭಾವ ಬೀರಬಹುದು. ಕರ್ನಾಟಕದಂತಹ ದಕ್ಷಿಣ ರಾಜ್ಯಗಳಲ್ಲಿ TFR ಈಗಾಗಲೇ 1.5ರ ಸುತ್ತಲಿದೆ, ಇದು ದೀರ್ಘಕಾಲೀನ ಜನಸಂಖ್ಯಾ ಸವಾಲುಗಳನ್ನು ತಂದೊಡ್ದಿದೆ.ಈ ವರದಿಯು ಶಿಕ್ಷಣ, ಆರ್ಥಿಕತೆ ಮತ್ತು ಸಾಮಾಜಿಕ ಬದಲಾವಣೆಗಳ ಪರಿಣಾಮವನ್ನು ಪ್ರತಿಬಿಂಬಿಸುತ್ತದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಸರ್ಕಾರಗಳು ಈ ಬದಲಾವಣೆಗಳಿಗೆ ಸೂಕ್ತ ನೀತಿಗಳ ಮೂಲಕ ಸ್ಪಂದಿಸುವ ಅಗತ್ಯವಿದೆ.
ಇದನ್ನೂ ಓದಿ : ಜನಸಂಖ್ಯಾ ಬದಲಾವಣೆ (Demography Changes) ಅಧ್ಯಯನಕ್ಕೆ ಉನ್ನತ ಮಟ್ಟದ ಸಮಿತಿ ರಚನೆ
⮞ ಪ್ರಮುಖ ಅಂಕಿಅಂಶಗಳು:
ರಾಷ್ಟ್ರೀಯ ಫಲವತ್ತತೆ ದರ : 1.9 (2024)
ಗ್ರಾಮೀಣ ಪ್ರದೇಶದ ಫಲವತ್ತತೆ ದರ : 2.1
ನಗರ ಪ್ರದೇಶದ ಫಲವತ್ತತೆ ದರ : 1.5
ಅತಿ ಹೆಚ್ಚು ಫಲವತ್ತತೆ ದರ ಹೊಂದಿಂದ ರಾಜ್ಯಗಳು : ಬಿಹಾರ (2.9), ಉತ್ತರ ಪ್ರದೇಶ (2.6)
ಅತಿ ಕಡಿಮೆ ಫಲವತ್ತತೆ ದರ ಹೊಂದಿದ ರಾಜ್ಯಗಳು : ದೆಹಲಿ (1.2), ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ (1.3 ಪ್ರತ್ಯೇಕವಾಗಿ)
⮞ ಫಲವತ್ತತೆ ದರ ಕಡಿಮೆಯಾಗಲು ಪ್ರಮುಖ ಕಾರಣಗಳು:
*ಮಹಿಳೆಯರ ಶಿಕ್ಷಣ ಮಟ್ಟ ಹೆಚ್ಚಳ
*ಉದ್ಯೋಗಾವಕಾಶಗಳಲ್ಲಿ ಹೆಚ್ಚಿದ ಭಾಗವಹಿಸುವಿಕೆ
*ನಗರೀಕರಣ
*ತಡವಾಗಿ ವಿವಾಹವಾಗುವುದು
*ಕುಟುಂಬ ಯೋಜನೆ ವಿಧಾನಗಳ ಬಳಕೆ
*ಮಕ್ಕಳ ಪಾಲನೆ-ಪೋಷಣೆಯ ಹೆಚ್ಚಿದ ವೆಚ್ಚ
2026ರಲ್ಲಿ ಬಿಡುಗಡೆಯಾದ SRS 2024 ವರದಿಯ ಪ್ರಮುಖ ರಾಜ್ಯವಾರು ಅಂಕಿಅಂಶಗಳು
| ಸೂಚ್ಯಂಕ | ಅತಿ ಹೆಚ್ಚು | ಅತಿ ಕಡಿಮೆ |
|---|---|---|
| ಒಟ್ಟು ಫಲವತ್ತತೆ ದರ (TFR) | ಬಿಹಾರ – 2.9 | ದೆಹಲಿ – 1.2 |
| ಜನನ ಪ್ರಮಾಣ (CBR) | ಬಿಹಾರ – 26.8 | ಕೇರಳ – 11.1 |
| ಶಿಶು ಮರಣ ಪ್ರಮಾಣ (IMR) | ಛತ್ತೀಸ್‌ಗಢ – 36 | ಕೇರಳ – 8 |
| 5 ವರ್ಷದೊಳಗಿನ ಮಕ್ಕಳ ಮರಣ ಪ್ರಮಾಣ (U5MR) | ಮಧ್ಯಪ್ರದೇಶ – 41ಉತ್ತರ ಪ್ರದೇಶ – 41 | ಕೇರಳ – 9 |
| ಜನನ ಸಮಯದ ಲಿಂಗಾನುಪಾತ (SRB) | ಛತ್ತೀಸ್‌ಗಢ – 978 | ಉತ್ತರಾಖಂಡ – 872 |
| 60 ವರ್ಷ ಮೇಲ್ಪಟ್ಟ ಜನಸಂಖ್ಯೆ | ಕೇರಳ – 15.1% | — |
| 60 ವರ್ಷ ಮೇಲ್ಪಟ್ಟ ಜನಸಂಖ್ಯೆ | ತಮಿಳುನಾಡು – 14.2% | — |
ಭಾರತದ ಎಲ್ಲಾ ಪ್ರಮುಖ ರಾಜ್ಯಗಳ ಒಟ್ಟು ಫಲವತ್ತತೆ ದರ (TFR) – SRS Statistical Report 2024 (2026ರಲ್ಲಿ ಬಿಡುಗಡೆ)
| ರಾಜ್ಯ | TFR |
|---|---|
| ಬಿಹಾರ | 2.9 |
| ಉತ್ತರ ಪ್ರದೇಶ | 2.7 |
| ಜಾರ್ಖಂಡ್ | 2.3 |
| ಮಧ್ಯಪ್ರದೇಶ | 2.2 |
| ರಾಜಸ್ಥಾನ | 2.1 |
| ಛತ್ತೀಸ್‌ಗಢ | 2.0 |
| ಹರಿಯಾಣ | 2.0 |
| ಭಾರತ (ಸರಾಸರಿ) | 1.9 |
| ಗುಜರಾತ್ | 1.8 |
| ಮಹಾರಾಷ್ಟ್ರ | 1.7 |
| ಪಶ್ಚಿಮ ಬಂಗಾಳ | 1.6 |
| ಪಂಜಾಬ್ | 1.6 |
| ಒಡಿಶಾ | 1.6 |
| ಕರ್ನಾಟಕ | 1.6 |
| ತೆಲಂಗಾಣ | 1.5 |
| ಆಂಧ್ರ ಪ್ರದೇಶ | 1.5 |
| ಹಿಮಾಚಲ ಪ್ರದೇಶ | 1.5 |
| ತಮಿಳುನಾಡು | 1.4 |
| ಕೇರಳ | 1.4 |
| ಜಮ್ಮು ಮತ್ತು ಕಾಶ್ಮೀರ | 1.4 |
| ದೆಹಲಿ | 1.2 |

