ಭಾರತದ ಚುನಾವಣಾ ಆಯೋಗದ ಬಗ್ಗೆ ತಿಳಿದಿರಬೇಕಾದ ಕೆಲವು ಸಂಗತಿಗಳು
ರಾಜ್ಯ ಚುನಾವಣಾ ಆಯೋಗವು ಒಂದು ಸಾಂವಿಧಾನಿಕ ಸಂಸ್ಥೆಯಾಗಿದ್ದು, ಭಾರತ ಸಂವಿಧಾನದ 73 ಹಾಗೂ 74ನೇ ತಿದ್ದುಪಡಿಗಳನ್ವಯ ರಾಜ್ಯದಲ್ಲಿನ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಡೆಸುವ ಸಲುವಾಗಿ ದಿನಾಂಕ 26-05-1993 ರಂದು ಅಸ್ತಿತ್ವಕ್ಕೆ ಬಂದಿದೆ. ರಾಜ್ಯ ಚುನಾವಣಾ ಆಯೋಗವನ್ನು ಭಾರತ ಸಂವಿಧಾನದ ಅನುಚ್ಛೇದ 243(ಕೆ) ಹಾಗೂ 243(ಜೆಡ್‌ಎ) ರಡಿಯಲ್ಲಿ ರಚಿಸಲಾಗಿದೆ.
ಭಾರತ ಸಂವಿಧಾನದ ಅನುಚ್ಛೇದ 243(ಕೆ) ಹಾಗೂ 243(ಜೆಡ್‌ಎ) ರಡಿಯಲ್ಲಿ ರಾಜ್ಯ ಚುನಾವಣಾ ಆಯೋಗಕ್ಕೆ ನೀಡಿರುವ ಅಧಿಕಾರ ಮತ್ತು ಕಾರ್ಯಗಳು, ಭಾರತ ಚುನಾವಣಾ ಆಯೋಗಕ್ಕೆ ಅನುಚ್ಛೇದ 324 ರಡಿಯಲ್ಲಿ ನಿಹಿತವಾಗಿರುವಂತೆ, ಅವರವರ ಕಾರ್ಯಕ್ಷೇತ್ರದಲ್ಲಿ ಒಂದೇ ರೀತಿಯಿರುತ್ತವೆ.
ರಾಜ್ಯ ಚುನಾವಣಾ ಆಯೋಗವು ಸ್ವತಂತ್ರ ಸಂಸ್ಥೆಯಾಗಿದ್ದು, ಗ್ರಾಮೀಣ ಸ್ಥಳೀಯ ಸಂಸ್ಥೆಗಳಾದ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳನ್ನು ಹಾಗೂ ನಾಲ್ಕು ಹಂತದ ನಗರ ಸ್ಥಳೀಯ ಸಂಸ್ಥೆಗಳಾದ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳ ಚುನಾವಣೆಗಳನ್ನು ನಡೆಸುತ್ತದೆ.
ರಾಜ್ಯ ಚುನಾವಣಾ ಆಯೋಗವು ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993, ಕರ್ನಾಟಕ ಪೌರಸಭೆಗಳ ಅಧಿನಿಯಮ 1964 ಮತ್ತು ಕರ್ನಾಟಕ ಪೌರ ನಿಗಮಗಳ ಅಧಿನಿಯಮ 1976 ರ ಅಡಿಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ರಾಜ್ಯ ಚುನಾವಣಾ ಆಯೋಗದ ಅಧೀಕ್ಷಣೆ, ನಿರ್ದೇಶನ ಮತ್ತು ನಿಯಂತ್ರಣದಲ್ಲಿ ನಡೆಸಲು ಅಧಿಕಾರ ಹೊಂದಿದೆ. ರಾಜ್ಯ ಚುನಾವಣಾ ಆಯೋಗಕ್ಕೆ ಕರ್ನಾಟಕ ಸ್ಥಳೀಯ ಪ್ರಾಧಿಕಾರಗಳ (ಪಕ್ಷಾಂತರ ನಿಷೇಧ) ಅಧಿನಿಯಮ 1987 ರನ್ವಯ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯರ ಮೇಲೆ ಸಲ್ಲಿಸಿದ ದೂರುಗಳನ್ನು ವಿಚಾರಣೆ ನಡೆಸಿ, ಸೂಕ್ತವೆನಿಸಿದಲ್ಲಿ ಅವರನ್ನು ಸದಸ್ಯತ್ವದಿಂದ ಅನರ್ಹಗೊಳಿಸಿ ಆದೇಶಗಳನ್ನು ಹೊರಡಿಸುವ ಅಧಿಕಾರವಿದೆ.
ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ವೆಚ್ಚದ ವಿವರಗಳನ್ನು ಸಲ್ಲಿಸದಿದ್ದಲ್ಲಿ ಅಥವಾ ಸಲ್ಲಿಸಲು ವಿಳಂಬವಾದಲ್ಲಿ ಮುಂದಿನ ಮೂರು ವರ್ಷಗಳ ಅವಧಿಗೆ ಅನರ್ಹಗೊಳಿಸುವ ಅಧಿಕಾರವಿದೆ. ಹಾಗೆಯೇ ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿಯ ಸದಸ್ಯರು ತಮ್ಮ ವಾರ್ಷಿಕ ಆಸ್ತಿ ಮತ್ತು ಹೊಣೆಗಾರಿಕೆ ವಿವರಗಳನ್ನು ಸಲ್ಲಿಸದಿದ್ದಲ್ಲಿ ಅಥವಾ ತಪ್ಪು ವಿವರಗಳನ್ನು ಸಲ್ಲಿಸಿದಲ್ಲಿ, ಅವರನ್ನು ಅನರ್ಹಗೊಳಿಸುವ ಅಧಿಕಾರ ರಾಜ್ಯ ಚುನಾವಣಾ ಆಯೋಗಕ್ಕೆ ನೀಡಲಾಗಿದೆ.
>> ಚುನಾವಣಾ ಆಯೋಗವನ್ನು 1950ರ ಜನವರಿ 25 ರಂದು ರಚಿಸಲಾಯಿತು. ಈ ಆಯೋಗವು 2010ರ ಜನವರಿ 25ಕ್ಕೆ 60 ವರ್ಷಗಳನ್ನು ಪೂರೈಸಿತು.
>> ಉದ್ದೇಶ – ಪ್ರಜಾಪ್ರಭುತ್ವ ಸರ್ಕಾರದಲ್ಲಿ ಜನರಿಂದ ನೇರವಾಗಿ ಸಮರ್ಥವಾದ ಜನನಾಯಕನನ್ನು ನ್ಯಾಯಬದ್ಧವಾಗಿ ಚುನಾವಣೆಯ ಮೂಲಕ ಆಯ್ಕೆ ಮಾಡುವುದು.
>> ಭಾರತ ಸಂವಿಧಾನದ 15ನೇ ಭಾಗದ 324ನೇ ವಿಧಿಯಿಂದ 329ರವರೆಗಿನ ವಿಧಿಗಳು ಚುನಾವಣಾ ಆಯೋಗದ ಬಗ್ಗೆ ತಿಳಿಸುತ್ತವೆ.
*ಅನುಚ್ಛೇದ 324 – ಚುನಾವಣೆಗಳ ಮೇಲ್ವಿಚಾರಣೆ, ನಿರ್ದೇಶನ, ನಿಯಂತ್ರಣ ಮತ್ತು ಜವಾಬ್ದಾರಿಗಳನ್ನು ವಿವರಿಸುತ್ತದೆ.
*ಅನುಚ್ಛೇದ 325 – ಮತದಾರರ ಪಟ್ಟಿಯಲ್ಲಿ ಧರ್ಮ, ಜಾತಿ, ಲಿಂಗದ ಆಧಾರದ ಮೇಲೆ ಭೇದಭಾವ ತೋರಲು ಅವಕಾಶವಿಲ್ಲ.
*ಅನುಚ್ಛೇದ 326 – ಮತದಾನವು ವಯಸ್ಕ ಮತಾಧಿಕಾರದ ಆಧಾರದ ಮೇಲೆ ನಡೆಯಬೇಕು.
*ಅನುಚ್ಛೇದ 327 – ವಿಧಾನ ಮಂಡಲಗಳ ಚುನಾವಣೆಗಳಿಗೆ ಸಂಬಂಧಿಸಿದ ಉಪಬಂಧಗಳನ್ನು ರಚಿಸಲು ಸಂಸತ್ತಿಗೆ ಅಧಿಕಾರವಿದೆ.
*ಅನುಚ್ಛೇದ 328 – ವಿಧಾನ ಮಂಡಲಗಳ ಚುನಾವಣೆಗಳಿಗೆ ಸಂಬಂಧಿಸಿದ *ಉಪಬಂಧಗಳನ್ನು ರಾಜ್ಯ ವಿಧಾನ ಮಂಡಲಗಳು ರಚಿಸಿಕೊಳ್ಳುವ ಅಧಿಕಾರ ಹೊಂದಿವೆ.
*ಅನುಚ್ಛೇದ 329 – ಚುನಾವಣಾ ವಿಚಾರಗಳಲ್ಲಿ ನ್ಯಾಯಾಲಯದ ಹಸ್ತಕ್ಷೇಪವನ್ನು ನಿರ್ಬಂಧಿಸುತ್ತದೆ.
ಚುನಾವಣಾ ಆಯೋಗದ ರಚನೆ:
*ಚುನಾವಣಾ ಆಯೋಗದಲ್ಲಿ 1989 ರವರೆಗೆ ಮುಖ್ಯ ಚುನಾವಣಾ ಆಯುಕ್ತರು ಮಾತ್ರ ಇದ್ದರು. ಬಳಿಕ ಇಬ್ಬರು ಚುನಾವಣಾ ಆಯುಕ್ತರನ್ನು ನೇಮಕ ಮಾಡಲಾಯಿತು. ಆದರೆ 1990ರಲ್ಲಿ ನೇಮಕಗೊಂಡ ಮುಖ್ಯ ಚುನಾವಣಾ ಆಯುಕ್ತ ಟಿ. ಎನ್. ಶೇಷನ್ ಅವರ ನಿರ್ಧಾರಗಳು ಬಹಳ ಚರ್ಚೆಗೆ ಗ್ರಾಸವಾದವು. ಈ ರೀತಿಯ ಪರಿಸ್ಥಿತಿಗಳನ್ನು ತಪ್ಪಿಸಲು ಸಂಸತ್ತಿನ ಜಂಟಿ ಸಮಿತಿ ಹಾಗೂ ದೀನೇಶ್ ಗೋಸ್ವಾಮಿ ಸಮಿತಿ ಬಹುಸದಸ್ಯ ಆಯೋಗ ರಚನೆಗೆ ಶಿಫಾರಸ್ಸು ಮಾಡಿತು.
*ಈ ನಿರಂಕುಶ ಅಧಿಕಾರಕ್ಕೆ ಕಡಿವಾಣ ಹಾಕಲು ಪಿ. ವಿ. ನರಸಿಂಹ ರಾವ್ ಸರ್ಕಾರ 1993ರ ಅಕ್ಟೋಬರ್ 1ರಂದು ಬಹುಸದಸ್ಯ ಚುನಾವಣಾ ಆಯೋಗವನ್ನು ಅಧಿಸೂಚನೆಯ ಮೂಲಕ ರಚಿಸಿತು. ಡಿಸೆಂಬರ್ 20, 1993ರಂದು ಸಂಸತ್ತು ಇದಕ್ಕೆ ಒಪ್ಪಿಗೆ ನೀಡಿತು.
*ಚುನಾವಣಾ ಆಯೋಗಕ್ಕೆ ಒಬ್ಬ ಮುಖ್ಯ ಚುನಾವಣಾ ಆಯುಕ್ತರು ಮತ್ತು ಇಬ್ಬರು ಚುನಾವಣಾ ಆಯುಕ್ತರನ್ನು ರಾಷ್ಟ್ರಪತಿ ನೇಮಕ ಮಾಡುತ್ತಾರೆ.
*ಚುನಾವಣಾ ಆಯುಕ್ತರಿಗೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಸಮಾನ ಸ್ಥಾನಮಾನ ನೀಡಲಾಗಿದ್ದು, ಅವರಿಗೆ ದೊರೆಯುವ ವೇತನ, ಪಿಂಚಣಿ ಮತ್ತು ಇತರೆ ಸೌಲಭ್ಯಗಳು ಚುನಾವಣಾ ಆಯುಕ್ತರಿಗೂ ಲಭಿಸುತ್ತವೆ.
*ಚುನಾವಣಾ ಆಯುಕ್ತರ ಅವಧಿ 6 ವರ್ಷ ಅಥವಾ 65 ವರ್ಷ ವಯಸ್ಸಿನವರೆಗೆ (ಯಾವುದು ಮೊದಲು ಪೂರ್ಣಗೊಳ್ಳುತ್ತದೆಯೋ ಅದು) ಇರುತ್ತದೆ.
*ಸಂವಿಧಾನದ 324(5) ಉಪವಿಧಿಯ ಪ್ರಕಾರ ಮುಖ್ಯ ಚುನಾವಣಾ ಆಯುಕ್ತರ ಪದಚ್ಯುತಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಮಾದರಿಯಲ್ಲೇ ಮಾಡಲಾಗುತ್ತದೆ. ಉಳಿದ ಆಯುಕ್ತರನ್ನು ಮುಖ್ಯ ಚುನಾವಣಾ ಆಯುಕ್ತರ ಶಿಫಾರಸ್ಸಿನ ಮೇರೆಗೆ ರಾಷ್ಟ್ರಪತಿ ವಜಾ ಮಾಡಬಹುದು.
*23ನೇ ಮುಖ್ಯ ಚುನಾವಣಾ ಆಯುಕ್ತರಾಗಿ ಸುನಿಲ್ ಆರೋರಾ ಅವರು 2 ಡಿಸೆಂಬರ್ 2018ರಂದು ಅಧಿಕಾರ ವಹಿಸಿಕೊಂಡರು.
ಭಾರತದಲ್ಲಿ ಮೊದಲ ಬಾರಿ EVM ಬಳಕೆ
ಭಾರತದಲ್ಲಿ ಎಲೆಕ್ಟ್ರಾನಿಕ್ ಮತಯಂತ್ರಗಳ (EVM) ಬಳಕೆ ಮೊಟ್ಟಮೊದಲ ಬಾರಿ 1982ರಲ್ಲಿ ಆರಂಭಗೊಂಡಿತು. ಈ ತಂತ್ರಜ್ಞಾನವನ್ನು ಮೊದಲ ಬಾರಿ ಪಾರವೂರುನಲ್ಲಿ ನಡೆದ ವಿಧಾನಸಭೆಯ ಉಪಚುನಾವಣೆಯಲ್ಲಿ ಪ್ರಯೋಗಾತ್ಮಕವಾಗಿ ಬಳಸಲಾಯಿತು.
ಆರಂಭದಲ್ಲಿ ಸೀಮಿತ ಮಟ್ಟದಲ್ಲಿ ಬಳಸಲಾಗಿದ್ದ EVMಗಳು, ನಂತರ ಹಂತ ಹಂತವಾಗಿ ದೇಶದ ವಿವಿಧ ರಾಜ್ಯಗಳಿಗೆ ವಿಸ್ತರಿಸಲಾಯಿತು. ಮತದಾನದ ಪ್ರಕ್ರಿಯೆಯನ್ನು ವೇಗವಾಗಿ ಮತ್ತು ಪಾರದರ್ಶಕವಾಗಿ ಮಾಡಲು ಈ ಯಂತ್ರಗಳು ಮಹತ್ವದ ಪಾತ್ರವಹಿಸಿವೆ.
ಮುಂದೆ, 2004ರ ಲೋಕಸಭೆ ಚುನಾವಣೆಯಲ್ಲಿ ದೇಶದಾದ್ಯಂತ ಸಂಪೂರ್ಣವಾಗಿ EVM ಬಳಕೆ ಜಾರಿಗೆ ಬಂತು. ಇದರೊಂದಿಗೆ ಭಾರತವು ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಡಿಜಿಟಲ್ ಮತದಾನದ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ.
ಚುನಾವಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆಯನ್ನು ಹೆಚ್ಚಿಸುವಲ್ಲಿ EVMಗಳು ಪ್ರಮುಖ ಸಾಧನವಾಗಿ ಪರಿಣಮಿಸಿವೆ.
ಗಮನಿಸಿ :
*ಭಾರತೀಯ ಚುನಾವಣಾ ಆಯೋಗ ಸ್ಥಾಪನೆ: 25 ಜನವರಿ 1950 (ವಿಧಿ 324)
*ಸ್ವಭಾವ: ಸ್ವಾಯತ್ತ ಮತ್ತು ಸಂವಿಧಾನಾತ್ಮಕ ಸಂಸ್ಥೆ
*ಆರಂಭದಲ್ಲಿ: ಏಕಸದಸ್ಯ ಆಯೋಗ
*1993ರಿಂದ: 3 ಸದಸ್ಯರ ಆಯೋಗ (CEC + 2 ಆಯುಕ್ತರು)
*ನೇಮಕಾತಿ: ರಾಷ್ಟ್ರಪತಿಗಳಿಂದ
*ಅವಧಿ: 6 ವರ್ಷ ಅಥವಾ 65 ವರ್ಷ
*ಮುಖ್ಯ ಕಾರ್ಯ: ಲೋಕಸಭೆ, ರಾಜ್ಯಸಭೆ, ವಿಧಾನಸಭೆ ಚುನಾವಣೆ ನಡೆಸುವುದು
*ಮತದಾರರ ಪಟ್ಟಿ: ಆಯೋಗವೇ ಸಿದ್ಧಪಡಿಸುತ್ತದೆ
*ರಾಜಕೀಯ ಪಕ್ಷಗಳು: ಮಾನ್ಯತೆ ಮತ್ತು ಚಿಹ್ನೆ ನೀಡುವುದು
*ನೀತಿ ಸಂಹಿತೆ: ಚುನಾವಣೆ ಸಮಯದಲ್ಲಿ ಜಾರಿಗೊಳಿಸುತ್ತದೆ
*ಅಧಿಕಾರ: ಸ್ವತಂತ್ರ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುವುದು
*ಸ್ವಾಯತ್ತತೆ: ಸರ್ಕಾರದ ಹಸ್ತಕ್ಷೇಪದಿಂದ ಮುಕ್ತ
*ಮೊದಲ ಸಾರ್ವತ್ರಿಕ ಚುನಾವಣೆ: 1951–52
*EVM ಮೊದಲ ಬಳಕೆ: 1982, ಸ್ಥಳ: ಪಾರವೂರು (ವಿಧಾನಸಭೆಯ ಉಪಚುನಾವಣೆ)
*EVM ಸಂಪೂರ್ಣ ಬಳಕೆ: 2004 ಲೋಕಸಭೆ ಚುನಾವಣೆ
*ಮಹತ್ವ: ಪ್ರಜಾಪ್ರಭುತ್ವದ ಕಾವಲುಗಾರ
- ಏನಿದು DigiPIN ಡಿಜಿಟಲ್ ವಿಳಾಸ ವ್ಯವಸ್ಥೆ..? ನಿಮ್ಮ ಡಿಜಿಪಿನ್ ತಿಳಿದುಕೊಳ್ಳುವುದು ಹೇಗೆ..?
- ಪಶ್ಚಿಮ ಬಂಗಾಳದ ಮೊದಲ ಬಿಜೆಪಿ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಪ್ರಮಾಣವಚನ ಸ್ವೀಕಾರ
- ಭಾರತದ ನೂತನ CDS ಆಗಿ ಲೆಫ್ಟಿನೆಂಟ್ ಜನರಲ್ ಎನ್.ಎಸ್. ರಾಜಾ ಸುಬ್ರಮಣಿ ನೇಮಕ
- 11 ವರ್ಷಗಳನ್ನು ಪೂರೈಸಿದ ಮೂರು ಮಹತ್ವದ ಜನ ಸುರಕ್ಷಾ ಯೋಜನೆಗಳು
- SCBAಯಲ್ಲಿ ಮಹಿಳೆಯರಿಗೆ ಶಾಶ್ವತ ಉಪಾಧ್ಯಕ್ಷ ಹುದ್ದೆ : ಸುಪ್ರೀಂ ಮಹತ್ವದ ಪ್ರಸ್ತಾವನೆ

